ಎನ್‌ಡಿಆರ್‌ಎಫ್‌ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿಲ್ಲ: ಸಿಎಂ ಸಿದ್ದರಾಮಯ್ಯ

Published : Oct 05, 2025, 08:55 AM IST
Siddaramaiah

ಸಾರಾಂಶ

ಎನ್‌ಡಿಆರ್‌ಎಫ್‌ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿಲ್ಲ. ಬಿಜೆಪಿಯವರು ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಬೆಳಗಾವಿ (ಅ.05): ಎನ್‌ಡಿಆರ್‌ಎಫ್‌ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿಲ್ಲ. ಬಿಜೆಪಿಯವರು ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರನ್ನು ಆತಂಕಗೊಳಿಸಿದೆ.

ನಮ್ಮ ಗ್ಯಾರಂಟಿಗಳನ್ನು ಬಿಹಾರ, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನುಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಗ್ಯಾರಂಟಿಗಳ ಅನುಷ್ಠಾನ ಸಾಧ್ಯವೇ ಇಲ್ಲ ಎಂದಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ, ನುಡಿದಂತೆ ನಡೆದು ಗ್ಯಾರಂಟಿಗಳನ್ನು ತಪ್ಪದೇ ನೀಡುತ್ತಿದೆ ಎಂದರು. ಸಿಎಂ ಬದಲಾವಣೆ ವಿಚಾರವಾಗಿ ಬಿಜೆಪಿಯವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಮುಖ್ಯಮಂತ್ರಿ ಹುದ್ದೆ ಬದಲಾವಣೆ ವಿಷಯ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಇದಕ್ಕೆ ಬಿಜೆಪಿ ತಲೆಕೆಡಿಸಿಕೊಳ್ಳುವುದು ಬೇಕಿಲ್ಲ. ಅವರೇನೂ ನಮ್ಮ ಪಕ್ಷದ ಹೈಕಮಾಂಡೇ ಎಂದು ಪ್ರಶ್ನಿಸಿದರು.

ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು, ಸ್ಪೆಷಾಲಿಟಿ ಆಸ್ಪತ್ರೆ: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವುದು ಸರ್ಕಾರದ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 22 ಜಿಲ್ಲೆಗಳಲ್ಲಿ ವೈದ್ಯಕೀಯ‌ ಕಾಲೇಜುಗಳನ್ನು ಆರಂಭಿಸಲಾಗಿದೆ. ಉಳಿದ‌ ಕಡೆಗಳಲ್ಲೂ ಶೀಘ್ರವೇ ವೈದ್ಯಕೀಯ ಕಾಲೇಜನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಗರದ ಬಿಮ್ಸ್‌ ಆವರಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ/ಚಾಲನೆ ನೀಡಿ ಅವರು ಮಾತನಾಡಿದರು. ಬಡವರು, ತಳ ಸಮುದಾಯದ ಜನರು ಹಾಗೂ ಅವಕಾಶ ವಂಚಿತರಿಗೆ ಉತ್ತಮ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ರಾಜ್ಯದಲ್ಲಿ ಅಸಮಾನತೆ ತೊಡೆದು ಹಾಕಲು ಸರ್ಕಾರ ಅನೇಕ‌ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಬಡವರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಲಕ್ಷಾಂತರ ಜನರಿಗೆ ನೆರವು ನೀಡಲಾಗುತ್ತಿದೆ. ಬಿಮ್ಸ್‌ನಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಬೆಳಗಾವಿ ನಗರಕ್ಕೆ ನೂರು ಎಲೆಕ್ಟ್ರಿಕ್ ಬಸ್: ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರ‌ ಬಸ್ ನಿಲ್ದಾಣ ನಿರ್ಮಿಸಲಾಗಿದೆ. 700 ಬಸ್‌ಗಳು ಜನ ಸೇವೆಗೆ ಅಣಿಯಾಗಿವೆ. ಅಲ್ಲದೇ, ಶೀಘ್ರದಲ್ಲಿಯೇ 100 ವಿದ್ಯುತ್‌ ಚಾಲಿತ ಬಸ್‌ಗಳನ್ನು ಬೆಳಗಾವಿ ನಗರಕ್ಕೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ರಾಜ್ಯದಲ್ಲಿ ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಖುಷ್ಕಿ ಬೆಳೆಹಾನಿಗೆ ₹8.5 ಸಾವಿರ ಪರಿಹಾರದಂತೆ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ₹8.5 ಸಾವಿರ ಸೇರಿಸಿ ಒಟ್ಟು ₹17 ಸಾವಿರ ಪರಿಹಾರ ನೀಡಲಾಗುತ್ತಿದೆ. ನೀರಾವರಿ ಬೆಳೆಹಾನಿಗೆ ₹21,500 ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇನ್ನೂ ಅನೇಕ ಕಡೆ ಮಳೆಯಾಗುತ್ತಿದ್ದು, ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಮಾಡಲಾಗುವುದು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ