
ಬೆಂಗಳೂರು (ಜೂ.07): ‘ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿ ನಂ.1, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆರೋಪಿ ನಂ.2 ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಆರೋಪಿ ನಂ.3’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಡಿಎನ್‌ಎಯನ್ನು ಪ್ರಮುಖವಾಗಿ ಆರೋಪಿಗಳೆಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಎಫ್ಐಆರ್ ತರುವಾಯ, ಮುಖ್ಯಮಂತ್ರಿಗಳು ಏಕಾಏಕಿ ಜಾಗೃತರಾಗಿದ್ದಾರೆ. ಮುಖ್ಯಮಂತ್ರಿಗಳು ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಕಮಿಷನರ್ ಸೇರಿ 5 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅರ್ಥಾತ್, ಮುಖ್ಯಮಂತ್ರಿಗಳು ಮೊನ್ನೆ ನಡೆದ ದುರ್ಘಟನೆ, 11 ಜನರ ಸಾವಿಗೆ ರಾಜ್ಯ ಸರ್ಕಾರದಿಂದ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದರು. ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿ ತಪ್ಪಿಸಿಕೊಳ್ಳುವ ಷಡ್ಯಂತ್ರ ಮುಖ್ಯಮಂತ್ರಿಗಳದು. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
‘ನಿನ್ನೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಹೆಮ್ಮೆಯ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ರಾಜ್ಯ ಅತ್ಯಂತ ಹೆಮ್ಮೆ ಹಾಗೂ ಖುಷಿಪಡುವ ಕೆಲಸವನ್ನು ಆರ್‌ಸಿಬಿ ತಂಡ ಮಾಡಿದ್ದು, ಅವರನ್ನು ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಲಿದ್ದೇವೆ. ಈ ಐತಿಹಾಸಿಕ ಕ್ಷಣದಲ್ಲಿ ನೀವೂ ಭಾಗಿಯಾಗಿ’ ಎಂದು ಸ್ವತಃ ಮುಖ್ಯಮಂತ್ರಿಗಳೇ ಸಾಮಾಜಿಕ ಜಾಲತಾಣದ ಮೂಲಕ ಕರೆ ಕೊಟ್ಟಿದ್ದರು. ಜೂ.3ರಂದು ಮ್ಯಾಚ್ ನಡೆಯುವ ಮೊದಲೇ ಕೆಎಸ್‌ಸಿಎ, ಆರ್‌ಸಿಬಿ ಮತ್ತು ಏಜೆನ್ಸಿಯಾದ ಡಿಎನ್‌ಎ ಕಡೆಯಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿದ್ದರು.
ಸಂಭ್ರಮಾಚರಣೆಗೆ ಅನುಮತಿ ಕೋರಿದ್ದರು. ಲಕ್ಷೋಪಲಕ್ಷ ಅಭಿಮಾನಿಗಳು ಬರುವ ಕಾರಣ ನಾಳೆ ಸಂಭ್ರಮಾಚರಣೆಗೆ ಅನುಮತಿ ಕೊಡಲಾಗದು ಎಂದು ಪೊಲೀಸ್ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದು ವಿವರಿಸಿದರು. ಪೊಲೀಸ್ ಇಲಾಖೆ ಸಂಭ್ರಮಾಚರಣೆಗೆ ಅನುಮತಿ ಕೊಟ್ಟಿರಲಿಲ್ಲ. ಲಕ್ಷ ಲಕ್ಷ ಜನ ಬರುವುದು ಗೊತ್ತಿದ್ದು ಹೀಗೆ ಹೇಳಿದ್ದಾರೆ. ಹಾಗಿದ್ದರೆ ರಾಜ್ಯ ಸರ್ಕಾರಕ್ಕೆ ಯಾರು ಅನುಮತಿ ಕೊಟ್ಟರು ಎಂದು ವಿಜಯೇಂದ್ರ ಪ್ರಶ್ನಿಸಿದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನುಮತಿ ಕೊಟ್ಟಿರಲಿಲ್ಲ: ಕಾನೂನುಬಾಹಿರವಾಗಿ ಕಾರ್ಯಕ್ರಮ ನಡೆದಿದೆ ಎಂದು ಎಫ್ಐಆರ್ ಮಾಡಿದ್ದಾರೆ. ಅಲ್ಲಿ ಅನುಮತಿ ಇಲ್ಲದಿದ್ದರೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ, ಅಲ್ಲಿ ಸಂಭ್ರಮಾಚರಣೆಯಲ್ಲಿ ಯಾಕೆ ಭಾಗವಹಿಸಿದ್ದರು? ಅಲ್ಲಿ ಕಪ್ ಹಿಡಿದು ಮುತ್ತಿಕ್ಕುವ ಕೆಲಸವನ್ನು ಯಾಕೆ ಮಾಡಿದರು ಎಂದು ಕೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.