
ಬೆಂಗಳೂರು (ಸೆ.17): ಕಲ್ಯಾಣ ಕರ್ನಾಟಕ ಭಾಗದ ಬಹುಕಾಲದ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಬೇಕು ಎಂಬ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ರಾಜಕಾರಣಿಗಳು ಹಾಗೂ ಸ್ಥಳೀಯ ಹೋರಾಟಗಾರರು ಬೇಡಿಕೆ ಇಟ್ಟಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹಿಂದೆ ಭರವಸೆ ನೀಡಿದ್ದರು. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸುವ ನಿಟ್ಟಿನಲ್ಲಿ ಸಂಪುಟ ತೀರ್ಮಾನ ಕೈಗೊಂಡಿದೆ. ಆದರೆ ಮುಖ್ಯ ಕಚೇರಿ ಎಲ್ಲಿ ಇರಬೇಕು ಎಂಬುದು ಸೇರಿ ರೂಪುರೇಷೆಗಳ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಮುಂದಿನ ಹಂತದಲ್ಲಿ ಹೊರಡಿಸುವ ಆದೇಶದಲ್ಲಿ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶವಿದ್ದು, ಉತ್ತರ ಕರ್ನಾಟಕ ವಿಮೋಚನಾ ದಿನದಂದೇ ಈ ಬಗ್ಗೆ ಹೇಳಿದ್ದೇನೆ ಎಂದು ಕಳೆದ ವರ್ಷ ಕಲಬುರಗಿಯಲ್ಲಿ ಘೋಷಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ಪ್ರವಾಸಕ್ಕೆ ತೆರಳುವ ಮೊದಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ. ಮಂಗಳವಾರ ರಾತ್ರಿ ಮುಖ್ಯಮಂತ್ರಿ ಕಲಬುರಗಿ ಪ್ರವಾಸಕ್ಕೆ ತೆರಳಿದ್ದಾರೆ. ಬುಧವಾರ ನಡೆಯಲಿರುವ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಪ್ರತ್ಯೇಕ ಸಚಿವಾಲಯದ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ಕಾರ್ಯವನ್ನು ಸೆ. 22ರಿಂದ ಅ.7ರವರೆಗೆ ರಾಜ್ಯಾದ್ಯಂತ ನಡೆಸಲಿದ್ದು, ಈ ಸಮೀಕ್ಷೆಯಲ್ಲಿ ರಾಜ್ಯದ ಯಾರೊಬ್ಬರೂ ತಪ್ಪಿಸಿಕೊಳ್ಳದೆ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ, ನ್ಯೂನತೆಗಳು ಈ ಬಾರಿ ಆಗದಂತೆ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಸಮೀಕ್ಷೆಗೂ ಮೊದಲೇ ಆಶಾ ಕಾರ್ಯಕರ್ತೆಯರಿಂದ ಪ್ರತಿ ಮನೆಗೂ ಪ್ರಶ್ನಾವಳಿ ನಮೂನೆ ತಲುಪಿಸಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಲಾಗುವುದು. ಯಾವ ಮನೆಯೂ ಬಿಟ್ಟುಹೋಗದಂತೆ ವಿದ್ಯುತ್ ಮೀಟರ್ ಆಧರಿಸಿ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳ ಮೀಟರ್ ರೀಡರ್‌ಗಳು ವಿಶೇಷ ಗುರುತಿನ ಸಂಖ್ಯೆ (ಯುಎಚ್‌ಐಡಿ) ಇರುವ ಸ್ಟಿಕ್ಕರ್ ಅಂಟಿಸಿದ್ದಾರೆ. ಆ ಎಲ್ಲಾ ಮನೆಗಳಿಗೆ 1.75 ಲಕ್ಷ ಶಿಕ್ಷಕರು ಭೇಟಿ ನೀಡಿ 60 ಪ್ರಶ್ನೆಗಳಿಗೆ ಉತ್ತರ ಪಡೆದು ಸಮೀಕ್ಷೆ ಮಾಡುತ್ತಾರೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಸಮೀಕ್ಷೆಯನ್ನೂ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.