
ಬೆಂಗಳೂರು(ಮೇ.14): 'ನಮ್ಮ ಶಾಸಕರು ಮಾರಾಟವಾಗಲು ತಯಾರಿಲ್ಲ. ರಾಜ್ಯದಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸುವುದು ಬಿಜೆಪಿಯವರ ಹಗಲುಗನಸು. ಬದಲಿಗೆ ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರ ಸರ್ಕಾರವೇ ಬೀಳಲಿದೆ' ಎಂದು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಶಾಂತಿನಗರದಲ್ಲಿ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿಕೆಗೆ ತಿರುಗೇಟು ನೀಡಿದರು.
ಚುನಾವಣೆ ಬಳಿಕ ಮಹಾರಾಷ್ಟ್ರ ರೀತಿ ಕರ್ನಾಟಕ ಸರ್ಕಾರ ಪತನ: ಮಹಾ ಸಿಎಂ ಶಿಂಧೆ ಹೊಸ ಬಾಂಬ್..!
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಯಾವ ಕಾರಣಕ್ಕೂ ನಮ್ಮ ಸರ್ಕಾರವನ್ನು ಆಪರೇಷನ್ ಕಮಲ ಮೂಲಕ ಕೆಡವಲು ಸಾಧ್ಯವಿಲ್ಲ. ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ. ಈಗಾಗಲೇ ಕಳೆದ ಒಂದು ವರ್ಷದಿಂದ ಇಂತಹ ಪ್ರಯತ್ನ ಮಾಡಿ ಅವರು ವಿಫಲರಾಗಿದ್ದಾರೆ. ಮತ್ತೊಮ್ಮೆ ಯಾಕೆ ಪ್ರಯತ್ನಿಸುತ್ತಾರೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಸರ್ಕಾರ ಉಳಿಯುವುದೇ ಅನುಮಾನ-ಡಿಕೆಶಿ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, 'ಮಹಾರಾಷ್ಟ್ರ ಸರ್ಕಾರ ಉಳಿಯುವುದು ಅನುಮಾನ ಆಗಿದೆ. ಅಲ್ಲಿ ಶಾಸಕರು ಎಲ್ಲರೂ ಯೂ-ಟರ್ನ್ ಹೊಡೆಯುತ್ತಿದ್ದಾರೆ. ಎನ್‌ಸಿಪಿ, ಶಿವಸೇನೆಯ ಶಾಸಕರು ವಾಪಸು ಆಗುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಅಲ್ಲಿನ ಸರ್ಕಾರವೇ ಪತನವಾಗಲಿದೆ. ಲೋಕಸಭೆ ಚುನಾವಣೆ ಬಳಿಕ ನಡೆಯಲಿರುವ ವಿಧಾನಸಭೆ ಚುನಾವಣೆ ಯಲ್ಲಿ ನಮ್ಮ ಪಕ್ಷದ ಸರ್ಕಾರವೇ ಅಧಿಕಾರಕ್ಕೆ ಬರಲಿದೆ' ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.