ವರುಣದಲ್ಲಿ ನಾನು ಮತ್ತು ಸಚಿವ ಮಹದೇವಪ್ಪ ಅವರ ಪರಿಚಯ ಎಲ್ಲರಿಗೂ ಇದೆ. ನಾನು ಇಲ್ಲಿನ ಶಾಸಕ, ಇನ್ನು ಯತೀಂದ್ರ ಇಲ್ಲಿನ ಮಾಜಿ ಶಾಸಕ. ನಾವು ಮೂವರು ಇಲ್ಲಿರುವಾಗ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗೆ ಕನಿಷ್ಠ 60 ಸಾವಿರ ಲೀಡ್ ಆದರೂ ಸಿಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು(ಏ.02): ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ರಿಗೆ ವರುಣ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಬೇಕು. ಅಷ್ಟು ಲೀಡ್ ಬಂದದ್ದೇ ಆದರೆ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ಇರಬೇಕೋ, ಬೇಡ್ವೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ವರುಣ ಕ್ಷೇತ್ರದಲ್ಲಿ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿ ಮತಯಾಚಿಸಿದ್ದಾರೆ.
ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿರುವ ಸಿದ್ದರಾಮಯ್ಯ ಅವರು ಸೋಮವಾರದಿಂದ ತವರು ಜಿಲ್ಲೆಯಲ್ಲಿ ಮತ್ತೆ ಮೂರು ದಿನದ ಪ್ರವಾಸ ಆರಂಭಿಸಿದ್ದಾರೆ. ಸ್ಥಳೀಯ ಮುಖಂಡರ ಜತೆಗೆ ಮಾತುಕತೆ ನಡೆಸಿ, ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಚುನಾವಣಾ ತಂತ್ರಗಾರಿಕೆ ಚುರುಕುಗೊಳಿಸುತ್ತಿದ್ದಾರೆ. ಇದೇ ವೇಳೆ ಮೈಸೂರು ತಾಲೂಕಿನ ಬಿಳಿಗೆರೆ ಬೋರೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಗಟ್ಟಿಯಾಗಿರಬೇಕಾದರೆ ಸುನಿಲ್ ಬೋಸ್‌ರನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.
undefined
ಲೋಕಸಭಾ ಚುನಾವಣಾ 2024: ಕರ್ನಾಟಕದಲ್ಲಿ ನಾಮಪತ್ರ ಭರಾಟೆ ಜೋರು..!
ಲೀಡ್ ಕೊಡ್ತೀರಾ?:
ವರುಣದಲ್ಲಿ ನಾನು ಮತ್ತು ಸಚಿವ ಮಹದೇವಪ್ಪ ಅವರ ಪರಿಚಯ ಎಲ್ಲರಿಗೂ ಇದೆ. ನಾನು ಇಲ್ಲಿನ ಶಾಸಕ, ಇನ್ನು ಯತೀಂದ್ರ ಇಲ್ಲಿನ ಮಾಜಿ ಶಾಸಕ. ನಾವು ಮೂವರು ಇಲ್ಲಿರುವಾಗ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗೆ ಕನಿಷ್ಠ 60 ಸಾವಿರ ಲೀಡ್ ಆದರೂ ಸಿಗಬೇಕು ಎಂದರು.
ಮೊದಲು ಬಾಯಿಗೆ ಬಂದಂಗೆ ಬೈತಿದ್ದ ಸಿದ್ದರಾಮಯ್ಯ ಈಗ ಸೋನಿಯಾ ಮುಂದೆ ನಡು ಬಗ್ಗಿಸಿ ನಿಲ್ತಾರೆ: ಎಚ್‌ಡಿ ಕುಮಾರಸ್ವಾಮಿ
2019(ಲೋಕಸಭಾ ಚುನಾವಣೆ)ರಲ್ಲಿ ನಮ್ಮ ಅಭ್ಯರ್ಥಿ ಧ್ರುವನಾರಾಯಣ ಕೇವಲ 1,817 ಮತಗಳ ಅಂತರದಿಂದ ಸೋತರು, ಆದರೆ ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ನನ್ನನ್ನು ನೀವು 48 ಸಾವಿರ ಮತಗಳ ಅಂತರದಿಂದ ವರುಣದಿಂದ ಗೆಲ್ಲಿಸಿದ್ದೀರಿ. ಇದೀಗ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ನನಗೆ ನೀಡಿದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಅಂದರೆ ಕನಿಷ್ಠ 60 ಸಾವಿರ ಮತಗಳ ಲೀಡ್ ಕೊಡಿಸ್ತೀರಾ ಎಂದು ಪ್ರಶ್ನಿಸಿದರು.
ಒಂದು ವೇಳೆ ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಅಷ್ಟು ಮತಗಳ ಅಂತರದಿಂದ ಗೆಲ್ಲಿಸಿದರೆ ನನಗೆ ಖುಷಿ. ಆಗ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದ ಅವರು, ನಾನು ಇರಬೇಕೋ, ಬೇಡ್ವೋ ಎಂದು ಸಭಿಕರನ್ನು ಕೇಳಿದರು.
ಇದೇ ವೇಳೆ ನಿಮಗೆ ಕೈಮುಗಿದು ಮನವಿ ಮಾಡುತ್ತೇನೆ ಎಂದ ಸಿದ್ದರಾಮಯ್ಯ, ನಾನು ಗಟ್ಟಿಯಾಗಿರಬೇಕೆಂದರೆ ನಮ್ಮ ಅಭ್ಯರ್ಥಿಗೆ 60 ಸಾವಿರ ಮತಗಳ ಲೀಡ್ ಕೊಡಿಸಿ. ಗೆದ್ದ ಬಳಿಕ ನಾನು ಮತ್ತೆ ನಿಮ್ಮಲ್ಲಿಗೆ ಧನ್ಯವಾದ ತಿಳಿಸಲು ಬರುತ್ತೇನೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.