
ಚಿಕ್ಕಬಳ್ಳಾಪುರ (ಜು.03): ಜಾತಿ ಸಮೀಕ್ಷೆಯಲ್ಲಿ ತೊಂದರೆಗಳಾಗಿದ್ದರೆ ಆನ್‌ಲೈನ್ ಮೂಲಕ ಜಾತಿ ನಮೂದಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಂದಿ ಬೆಟ್ಟದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದಾದರೂ ಒಂದು ದಾರಿಯಲ್ಲಿ ಜಾತಿ ಹೇಳಿಕೊಳ್ಳಬೇಕು. ಸಮೀಕ್ಷೆ ಮಾಡುವವರು ಮನೆಗೆ ಬಂದಾಗ ಅಥವಾ ಶಿಬಿರದಲ್ಲಿ ಪರಿಶಿಷ್ಟರು ತಮ್ಮ ಜಾತಿ ಹೇಳಿಕೊಳ್ಳಬೇಕು. ಸಮೀಕ್ಷೆ ಮಾಡುವವರು ಮನೆ ಮನೆಗೆ ತೆರಳುತ್ತಿದ್ದಾರೆ ಎಂದರು.
ರಾಜ್ಯ ಸುಭೀಕ್ಷವಾಗಲಿ: ರಾಜ್ಯದಲ್ಲಿ ಉತ್ತಮ ಮಳೆ- ಬೆಳೆಯಾಗಿ ಜನ ಸಂತೋಷದಿಂದಿರಲಿ, ಮಾನವೀಯ ಸಮಾಜ ನಿರ್ಮಾಣವಾಗುತ್ತ ಪ್ರಯತ್ನ ಮಾಡಲಿ ಎಂದು ಭೋಗನಂದೀಶ್ವರನಲ್ಲಿ ಪ್ರಾಥನೆ ಮಾಡಿದ್ದಾಗಿ ತಿಳಿಸಿದರು.
ಶೀಘ್ರ ಬೆಳಗಾವಿ, ವಿಜಯಪುರದಲ್ಲಿ ಸಂಪುಟ ಸಭೆ: ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂದು ತೀರ್ಮಾನಿಸಿ ಗುಲ್ಬರ್ಗಾ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಸಂಪುಟ ಸಭೆ ನಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೆಳಗಾವಿ ಹಾಗೂ ವಿಜಯಪುರದಲ್ಲಿ ಕೂಡ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಕಂದಾಯ ವಿಭಾಗದ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಬಜೆಟ್ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಸಣ್ಣಪುಟ್ಟ ಕೆಲಸಗಳಿದ್ದರೆ ಮಾಡಿ ಕೊಡಲಾಗುವುದು ಎಂದರು.
ನಾನು, ಡಿಕೆಶಿ ಒಗ್ಗಟ್ಟಾಗಿದ್ದೇವೆ: ನಾನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವೆ ತಂದಾಕುವ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ. ನಾವಿಬ್ಬರು ಒಟ್ಟಾಗಿಯೇ ಇದ್ದೇವೆ. ನಮ್ಮ ಸರ್ಕಾರ 5 ವರ್ಷ ಕಲ್ಲು ಬಂಡೆ ರೀತಿ ಇರುತ್ತದೆ. ನಮ್ಮ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ ಮಾಧ್ಯಮ ಕ್ಯಾಮೆರಾಗಳ ಮುಂದೆ ಡಿಕೆಶಿ ಕೈ ಹಿಡಿದು ಮೇಲೆತ್ತುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಡಿ.ಕೆ. ಶಿವಕುಮಾರ್ ಕೈ ಹಿಡಿದು ಎತ್ತಿ ನಾವು ಚೆನ್ನಾಗಿದ್ದೇವೆ ಎಂದು ಮಾಧ್ಯಮಕ್ಕೆ ತೋರಿಸಿದ ಅವರು, ನಮ್ಮ ಬಗ್ಗೆ ಮಾತನಾಡುವ ಶ್ರೀರಾಮಲು ಎಷ್ಟು ಚುನಾವಣೆ ಸೋತಿದ್ದಾನೆ ಹೇಳಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಅನಿಸಿದೆ ಅಲ್ವಾ. ಅದೇ ಸತ್ಯ ಎಂದರು. ನಂತರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.
ಸೋತ ಗಿರಾಕಿಗಳು ಸರ್ಕಾರ ಬಿದ್ದುಹೋಗುತ್ತದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ನನಗೂ ಶಿವಕುಮಾರ್ ಅವರಿಗೂ ಸರಿಯಿಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಒಟ್ಟಾಗಿ ಗಟ್ಟಿಯಾಗಿದ್ದೇವೆ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿ ಗಟ್ಟಿಯಾಗಿರುತ್ತದೆ. 2028ರಲ್ಲೂ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯಾವ ಕಾರಣಕ್ಕೂ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು. ಇದೇ ವೇಳೆ ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುವ ಬಿಜೆಪಿಯವರು ದಿವಾಳಿ ಆಗಿದ್ದರೆ 25000 ಕೋಟಿ ಎಲ್ಲಿಂದ ಬಂದಿತು ಎಂದು ನಾಡಿನ ಜನರಿಗೆ ಉತ್ತರ ನೀಡುವಂತೆ ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.