ಸಿಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ ವಿಚಾರ
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಸಿಎಂ ಇಬ್ರಾಹಿಂ
ಮನಸ್ಸು ಬದಲಿಸಿ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ?
ಮಂಡ್ಯ, (ಫೆ.11): ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ (CM Ibrahim) ಈಗಾಗಲೇ ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದ್ದು, ಇದೇ ಫೆ.14ರಂದು ಎಂಎಲ್‌ಸಿ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಗಾಗಲೇ ಹೇಳಿದ್ದಾರೆ.
ಆದ್ರೆ, ಅವರ ಮನವೊಲಿಕೆಗೆ ಸಿದ್ದರಾಮಯ್ಯ ಮುಂದಾಗಿದ್ದು, ತಮ್ಮ ಆಪ್ತ ಎಚ್‌ಸಿ ಮಹಾದೇವಪ್ಪ ಅವರನ್ನ ಇಬ್ರಾಹಿಂ ಅವರ ನಿವಾಸಕ್ಕೆ ಕಳುಹಿಸಿದ್ರು.
Karnataka Politics: 'ಸಿ.ಎಂ. ಇಬ್ರಾಹಿಂ ಪಕ್ಷದಲ್ಲೇ ಉಳಿಸಲು ಯತ್ನ'
ಇನ್ನು ಈ ಬಗ್ಗೆ ಮಂಡ್ಯದ ಹೊಳಲು ಗ್ರಾಮದಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಕಾಂಗ್ರೆಸ್ ನಾಯಕರು ನನ್ನ ಜೊತೆ ಮಾತನಾಡುತ್ತಿದ್ದಾರೆ. ಪಕ್ಷದಲ್ಲೆ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಈ ಬಗ್ಗೆ ಕೆಲವರು ನನ್ನ ಬಳಿ ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ದೆಹಲಿಯಿಂದಲೂ ಮಾತನಾಡಲು ಆಹ್ವಾನ ಬಂದಿದೆ. ಯಾರು ಕರೆದಿದ್ದಾರೆ, ಯಾರನ್ನ ಭೇಟಿಯಾಗಬೇಕು ಅದನ್ನ ಈಗ ಹೇಳಲ್ಲ.
ದೆಹಲಿಗೆ ಹೋಗುವ ಬಗ್ಗೆ ಒಂದೆರಡು ದಿನದಲ್ಲಿ ದಿನಾಂಕ ಹೇಳ್ತೇವೆ. ಹೋಗ್ಬೇಕಾ, ಬೇಡವಾ ಎಂಬುದನ್ನ ಜನರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.
ಇಬ್ರಾಹಿಂ ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ : ಎಚ್.ಸಿ.ಮಹದೇವಪ್ಪ ಸಂಧಾನ ಮಾತುಕತೆ
ಸಿಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ ವಿಚಾರವಾಗಿ ಸಿಎಂ ಇಬ್ರಾಹಿಂ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದು ನೋಡಿದ್ರೆ, ಕಾಂಗ್ರೆಸ್‌ನಲ್ಲಿ ಉಳಿಯುತ್ತಾರಾ ಸಿದ್ದರಾಮಯ್ಯನವರ ಮನವೊಲಿಕೆ ಹಾಗೂ ದೆಹಲಿಯಿಂದ ಫೋನ್ ಕಾಲ್‌ಗೆ ಸಿಎಂ ಇಬ್ರಾಹಿಂ ಮನಸ್ಸು ಬದಲಿಸುತ್ತಾರಾ? ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಎಚ್ ಸಿ ಮಹದೇವಪ್ಪ ಹೇಳಿದ್ದೇನು?
ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಸಿಎಂ ಇಬ್ರಾಹಿಂ ನಿವಾಸಕ್ಕೆ ಹೋಗಿ ಎಚ್‌ಸಿ ಮಾಹಾದೇವಪ್ಪ ಮಾತುಕತೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾದೇವಪ್ಪ, ಸದ್ಯದಲ್ಲೇ ಸಿಎಂ ಇಬ್ರಾಹಿಂ ಮನೆಗೆ ಸಿದ್ದರಾಮಯ್ಯ ಊಟಕ್ಕೆ ಹೋಗುತ್ತಾರೆ. ಇಬ್ರಾಹಿಂ ಮನಸಿಗೆ ಬೇಜಾರು ನೋವು ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಹೋಗಿ ಮಾತನಾಡುವಂತೆ ಸೂಚಿಸಿದ್ದರು. ನಾನು ಹೋಗಿ ಮಾತನಾಡಿದ್ದೇನೆ. ಸಿಎಂ ಇಬ್ರಾಹಿಂ ಪ್ರೀತಿ ವಿಶ್ವಾಸದಿಂದ ಮಾತನಾಡಿದರು ಎಂದರು.
ದೇಶದಲ್ಲಿ ಅಧರ್ಮ ಅನೀತಿ ತುಂಬಿದೆ. ಸಂವಿಧಾನಕ್ಕೆ ಧಕ್ಕೆ ಬಂದಿದೆ ಇದರ ವಿರುದ್ದ ನಾವು ಹೋರಾಟ ಮಾಡಬೇಕು ಅಂತಾ ಹೇಳಿದ್ದೇನೆ.
ಬೇಜಾರು ನೋವು ಮಾಡಿಕೊಳ್ಳದಂತೆ ಮನವಿ ಮಾಡಿದ್ದೇನೆ. ಪ್ರಜಾಪ್ರಭುತ್ವ ಸಂರಕ್ಷಣೆ ಮಾಡೋಣ ಅಂತಾ ತಿಳಿಸಿದ್ದೇನೆ. ಇಬ್ರಾಹಿಂ ಭರವಸೆ ನೀಡಿದ್ದಾರೆ. ನಾನು ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಆಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ಅವರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಅನಿಸುವುದಿಲ್ಲ ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.