ಜೆಡಿಎಸ್‌ಗೆ ನಾನೇ ರಾಜ್ಯಾಧ್ಯಕ್ಷ ಎಂದು ಘೋಷಿಸಿಕೊಂಡ ಇಬ್ರಾಹಿಂ: ದೊಡ್ಡಗೌಡರಿಗೇ ಸಡ್ಡು..!

By Kannadaprabha NewsFirst Published Jan 10, 2024, 10:37 AM IST
Highlights

ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷರು ಎಂದು ಘೋಷಿಸಿಕೊಂಡಿದ್ದು, ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷಾ ಅವರನ್ನು ಜೆಡಿಎಸ್‌ನ ರಾಜ್ಯ ವಕ್ತಾರರನ್ನಾಗಿ ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ. ಮಹಿಳಾ ವಿಭಾಗದ ರಾಜ್ಯ ಸಂಚಾಲಕರನ್ನಾಗಿ ಹೆನ್ರಿಟಾ ಮಾರಿಯಾ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು(ಜ.10):  ಎನ್‌ಡಿಎ ಜತೆಗಿನ ಮೈತ್ರಿ ಬಳಿಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಣ ದೊಂದಿಗೆ ಮುನಿಸಿಕೊಂಡು ತಮ್ಮದೇ ಅಸಲಿ ಜೆಡಿಎಸ್ ಎಂದು ಪ್ರತ್ಯೇಕ ಬಣ ಕಟ್ಟಿಕೊಂಡಿರುವ ಉಚ್ಚಾಟಿತ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ತಮ್ಮ ಪಕ್ಷಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಮತ್ತೊಮ್ಮೆ ಸಡ್ಡು ಹೊಡೆದಿದ್ದಾರೆ. 

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲ ಲೋಕಸಭಾ ಕ್ಷೇತ್ರಗಳಿಗೆ ಅಧ್ಯಕ್ಷರನ್ನು, ಪಕ್ಷದ ವಕ್ತಾರರನ್ನು ನೇಮಕ ಮಾಡಿಕೊಂಡಿದ್ದಾರೆ. ಅಲ್ಲದೇ, ಅವರಿಗೆ ಖುದ್ದಾಗಿ ನೇಮಕದ ಆದೇಶ ಪತ್ರವನ್ನು ಸಹ ವಿತರಿಸಿದ್ದಾರೆ. ಈ ಮೂಲಕ ದಳಪತಿಗಳಿಗೆ ಶಾಕ್ ನೀಡಿದ್ದಾರೆ.

Latest Videos

ದೇವೇಗೌಡ್ರ ಫ್ಯಾಮಿಲಿ ಮೋದಿ ಭೇಟಿಯಾಗ್ತಿದ್ದಂತೆ ಜೆಡಿಎಸ್‌ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಿಎಂ ಇಬ್ರಾಹಿಂ!

ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷರು ಎಂದು ಘೋಷಿಸಿಕೊಂಡಿದ್ದು, ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷಾ ಅವರನ್ನು ಜೆಡಿಎಸ್‌ನ ರಾಜ್ಯ ವಕ್ತಾರರನ್ನಾಗಿ ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ. ಮಹಿಳಾ ವಿಭಾಗದ ರಾಜ್ಯ ಸಂಚಾಲಕರನ್ನಾಗಿ ಹೆನ್ರಿಟಾ ಮಾರಿಯಾ ಅವರನ್ನು ನೇಮಕ ಮಾಡಲಾಗಿದೆ.

ಇನ್ನುಳಿದಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹಿಳಾವಿಭಾಗ ಅಧ್ಯಕ್ಷೆಯಾಗಿ ಉಮಾದೇವಿ ಅವರನ್ನು ನೇಮಕ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಥೆರಾಸಾ ಬರ್ನಬಾಸ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಹಿಳಾ ಘಟಕ ಅಧ್ಯಕ್ಷೆಯಾಗಿ ಬಿ.ಲಕ್ಷ್ಮಿ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.

click me!