ಮತ್ತೆ ಡಿಕೆಶಿ, ಜಮೀರ್‌ ಡಿಶುಂ: ಸಿಎಂ ಯಾರೆಂದು ಹೈಕಮಾಂಡ್‌ ನಿರ್ಧರಿಸುತ್ತೆ

Published : Jul 24, 2022, 07:54 AM IST
ಮತ್ತೆ ಡಿಕೆಶಿ, ಜಮೀರ್‌ ಡಿಶುಂ: ಸಿಎಂ ಯಾರೆಂದು ಹೈಕಮಾಂಡ್‌ ನಿರ್ಧರಿಸುತ್ತೆ

ಸಾರಾಂಶ

‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಹೈಕಮಾಂಡ್‌ ಮಾಡುತ್ತದೆ. ಹೀಗಾಗಿ ವ್ಯಕ್ತಿ ಪೂಜೆ ಬಿಟ್ಟು ಪ್ರತಿಯೊಬ್ಬರೂ ಬಾಯಿ ಮುಚ್ಚಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿ.’

ಬೆಂಗಳೂರು/ಕನಕಪುರ (ಜು.24): ‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಹೈಕಮಾಂಡ್‌ ಮಾಡುತ್ತದೆ. ಹೀಗಾಗಿ ವ್ಯಕ್ತಿ ಪೂಜೆ ಬಿಟ್ಟು ಪ್ರತಿಯೊಬ್ಬರೂ ಬಾಯಿ ಮುಚ್ಚಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿ.’ ಹೀಗಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪಕ್ಷಕ್ಕೆ ಧಕ್ಕೆ​ಯಾ​ಗುವ ಹೇಳಿಕೆ ನೀಡುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ. ಶಾಸಕ ಜಮೀರ್‌ ಅಹ​ಮದ್‌ ವಿರು​ದ್ಧವೂ ಪಕ್ಷದ ಶಿಸ್ತು ಸಮಿತಿ ಪರಿಶೀಲಿಸಿ ಕ್ರಮ ಕೈಗೊ​ಳ್ಳ​ಲಿದೆ ಎಂದಿದ್ದಾರೆ.

ಎಲ್ಲರಿಗೂ ಎಚ್ಚರಿಕೆ: ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಎಂ ಹುದ್ದೆ ವಿಚಾರಗಳನ್ನು ಆಗಾಗ ಪ್ರಸ್ತಾಪಿಸುತ್ತಿರುವ ಶಾಸಕ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಎಲ್ಲ ನಾಯಕರಿಗೂ ಈ ಎಚ್ಚರಿಕೆ ನೀಡಿರುವ ಅವರು, ವ್ಯಕ್ತಿ ಪೂಜೆ ಬಿಟ್ಟು, ಬಾಯಿ ಮುಚ್ಚಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮಾಡಬೇಕು. ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ಸಮುದಾಯಗಳನ್ನು ಸೆಳೆಯಲು ಏನು ಬೇಕೋ ಅದನ್ನು ಮಾಡಿ. ಅದನ್ನು ಬಿಟ್ಟು ಅನಗತ್ಯವಾಗಿ ಮಾತನಾಡಬೇಡಿ. ‘ಐ ಆ್ಯಮ್‌ ಟೆಲ್ಲಿಂಗ್‌ ದಿಸ್‌ ಟು ಎವರಿವನ್‌’ (ಈ ಮಾತನ್ನು ಪ್ರತಿಯೊಬ್ಬರಿಗೂ ಹೇಳುತ್ತಿದ್ದೇನೆ)’ ಎಂದು ಹೇಳಿದ್ದಾರೆ.

ಕನಕಪುರದಲ್ಲಿ ಭ್ರಷ್ಟಾಚಾರ, ಸಭೆಯಲ್ಲಿ ಎಲ್ಲಾ ಫೈಲ್‌ ತಿರಿವಿ ನೋಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಡಿಕೆಶಿ

ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಹೈಕಮಾಂಡ್‌ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಅಲ್ಲಿಯವರೆಗೂ ಪ್ರತಿಯೊಬ್ಬರೂ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕು. ವ್ಯಕ್ತಿ ಪೂಜೆ ಮಾಡದೆ ಪಕ್ಷ ಪೂಜೆ ಮಾಡಬೇಕು. ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಜಮೀರ್‌ ಲೆವೆಲ್‌!: ‘ನನ್ನ ಹೇಳಿಕೆಯಿಂದ ಕೆಪಿಸಿಸಿ ಅಧ್ಯಕ್ಷರಿಗೆ ಬೇಜಾರಾದರೆ ನಾನೇನೂ ಮಾಡಲು ಆಗಲ್ಲ’ ಎಂದಿರುವ ಜಮೀರ್‌ ಅಹಮದ್‌ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ‘ನನ್ನ ಲೆವೆಲ್‌ಗೆ ಮಾತನಾಡುವವರು ಇದ್ದರೆ ಮಾತನಾಡುತ್ತೇನೆ. ಎಲ್ಲರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡಲ್ಲ’ ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.

ಶಿಸ್ತುಕ್ರಮ: ಬಳಿಕ ಕನಕಪುರದಲ್ಲಿ ಮಾತನಾಡಿದ ಅವರು, ‘ಶಾಸಕ ಜಮೀರ್‌ ಅಹ​ಮದ್‌ ಪಕ್ಷದ ಪ್ರಮುಖ ನಾಯಕ. ಮುಂದಿನ ಮುಖ್ಯ​ಮಂತ್ರಿ ಪದ​ವಿಯ ಬಗ್ಗೆ ಪಕ್ಷದ ಚೌಕಟ್ಟು ಮೀರಿ ಮಾತ​ನಾ​ಡಿ​ರು​ವುದು ಅವರ ವೈಯ​ಕ್ತಿಕ ಅಭಿ​ಪ್ರಾಯ. ಆದರೂ, ಪಕ್ಷದ ಶಿಸ್ತು ಸಮಿತಿ ಇದರ ಬಗ್ಗೆ ಪರಿ​ಶೀ​ಲನೆ ನಡೆ​ಸಿದ ಸೂಕ್ತ ಕ್ರಮ​ ಕೈ​ಗೊ​ಳ್ಳು​ತ್ತದೆ’ ಎಂದ​ರು.

ಸಿಎಂ ಚರ್ಚೆಯನ್ನು ಆರಂಭ ಮಾಡಿದ್ದೇ ಡಿಕೆಶಿ: ಮುಂದಿನ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಶಾಸಕ ಜಮೀರ್‌ ಅಹಮದ್‌ ನಡುವಿನ ತಿಕ್ಕಾಟ ಮುಂದುವರಿದಿದೆ. ಒಕ್ಕಲಿಗರೇ ಮುಖ್ಯಮಂತ್ರಿ ಆಗಬೇಕೆಂದು ಹೇಳಿ ‘ಮುಂದಿನ ಸಿಎಂ’ ವಿಚಾರಕ್ಕೆ ಚಾಲನೆ ಕೊಟ್ಟವರು ಡಿ.ಕೆ.ಶಿವಕುಮಾರ್‌ ತಾನೇ ಎಂದು ಪ್ರಶ್ನಿಸಿರುವ ಜಮೀರ್‌ ಮುಸ್ಲಿಮರಿಗೂ ಅವರ ಸಮುದಾಯದವರು ಸಿಎಂ ಆಗಲಿ ಎಂದು ಆಸೆಯಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಸಿಎಂ ಆಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಕೆಲವೊಮ್ಮೆ ಪಕ್ಷಪೂಜೆಯೊಂದಿಗೆ ವ್ಯಕ್ತಿಪೂಜೆಯನ್ನೂ ಮಾಡಬೇಕಾಗುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಗಾದಿ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಕಟ್ಟಿಬೆಳೆಸಬೇಕಿದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ನನ್ನ ಹೆಸರನ್ನು ಡಿ.ಕೆ.ಶಿವಕುಮಾರ್‌ ಹೇಳಿಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟೋಣ ಎಂದಿದ್ದಾರೆ. ಮುಖ್ಯಮಂತ್ರಿ ಯಾರು ಆಗಬೇಕೆಂದು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯ ನಾನು ಸಿದ್ದರಾಮಯ್ಯ ಆಗಬೇಕು ಎಂದು ಹೇಳಿದ್ದೇನೆ. ರಾಜ್ಯಕ್ಕೆ ಒಳ್ಳೆಯದಾಗಬೇಕೆಂದರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ ಎಂದರು.

ಇನ್ನು ವ್ಯಕ್ತಿ ಪೂಜೆ ಮಾಡಬಾರದು, ಪಕ್ಷ ಪೂಜೆ ಮಾಡಬೇಕು ಎಂಬ ಡಿ.ಕೆ.ಶಿವಕುಮಾರ್‌ ಆವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ, ಪಕ್ಷ ಪೂಜೆ ಮಾಡುತ್ತಿದ್ದೇವೆ. ಅದರ ಜೊತೆ ಕೆಲವೊಮ್ಮೆ ವ್ಯಕ್ತಿ ಪೂಜೆಯನ್ನೂ ಮಾಡಬೇಕಾಗುತ್ತದೆ. ಡಿ.ಕೆ.ಶಿವಕುಮಾರ್‌ ಅವರ ಲೆವೆಲ್‌ ದೊಡ್ಡದಿರಬಹುದು. ನನ್ನ ಲೆವೆಲ್‌ ಚಿಕ್ಕದಿರಬಹುದು. ಅವರೇ ದೊಡ್ಡವರಾಗಲಿ. ಒಕ್ಕಲಿಗರು ಸಿಎಂ ಆಗಬೇಕೆಂದು ಚಾಲನೆ ಕೊಟ್ಟವರೇ ಡಿ.ಕೆ.ಶಿವಕುಮಾರ್‌ ತಾನೆ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿ: ಬೆಂಗೇರಿ ಖಾದಿ ಕೇಂದ್ರಕ್ಕೆ ರಾಹುಲ್‌ ಗಾಂಧಿ ಶೀಘ್ರ ಭೇಟಿ, ಡಿಕೆಶಿ

ನನಗೂ ಆಸೆ ಇದೆ: ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ. ನನ್ನ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿಲ್ಲ. ಮೊನ್ನೆ ನಾನು ಹೇಳಿದೀನಿ ಮುಸ್ಲಿಮರಿಗೂ ಅವಕಾಶ ಸಿಗಬೇಕು ಎಂದು. ನಾವು ಜನಸಂಖ್ಯೆಯನುಸಾರ ಶೇ.15ರಷ್ಟುಇದ್ದೇವೆ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ… ಗಾಂಧಿ ಅವರು ಯಾರು ಸಿಎಂ ಆಗಬೇಕೆಂದು ತೀರ್ಮಾನ ಮಾಡಲಿದ್ದಾರೆ ಎಂದರು.

ಒಂದೇ ಸಮಾಜದ ಮತದಿಂದ ಸಿಎಂ ಅಸಾಧ್ಯ: ಒಂದೇ ಸಮಾಜ ಮತ ಕೊಟ್ಟರೇ ಸಿಎಂ ಆಗಲು ಸಾಧ್ಯವಾಗಲ್ಲ. ಎಲ್ಲ ಸಮಾಜದವರನ್ನು ನಾವು ಜತೆಗೆ ತೆಗೆದುಕೊಂಡು ಹೋಗಬೇಕು. ಎಲ್ಲ ಸಮಾಜ ಸೇರಿ ಆಶೀರ್ವಾದ ಮಾಡಿದರೆ ಸರ್ಕಾರ ಬರಲು ಸಾಧ್ಯವಾಗಲಿದೆ. ಬರೀ ಒಂದು ಸಮಾಜ ಬೆಂಬಲ ಕೊಟ್ಟರೆ, ಯಾರೂ ಸಿಎಂ ಆಗಲು ಸಾಧ್ಯವಾಗಲ್ಲ ಎಂದೂ ಅಭಿಪ್ರಾಯಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಾಕ್‌ ಸ್ವಾತಂತ್ರ್ಯ ಕಡಿವಾಣಕ್ಕೆ ದ್ವೇಷ ಭಾಷಣ ಮಸೂದೆ: ಆರ್.ಅಶೋಕ್ ಕಿಡಿ
ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌