
ಬೆಂಗಳೂರು : ಸ್ವಪಕ್ಷದ ಸರ್ಕಾರದ ವಿರುದ್ಧವೇ ಲಂಚದ ಆರೋಪ ಮಾಡಿ ಸಂಚಲನ ಮೂಡಿಸಿರುವ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಮಾತುಕತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಲಾವ್ ನೀಡಿದ್ದಾರೆ.
ಈ ಸಂಬಂಧ ಭಾನುವಾರ ಪಾಟೀಲ್ ಅವರಿಗೆ ಖುದ್ದು ಕರೆ ಮಾಡಿದ ಸಿದ್ದರಾಮಯ್ಯ ಅವರು, ಬುಧವಾರ (ಜೂ.25)ರಂದು ತಮ್ಮನ್ನು ಭೇಟಿಯಾಗುವಂತೆ ಆಹ್ವಾನ ನೀಡಿದ್ದಾರೆ.
'ಹೇಗಿದ್ದಿಯಪ್ಪ ಪಾಟೀಲ್...' ಎಂದು ವಿಚಾರಿಸಿ ಬಳಿಕ, ಏನೇ ಸಮಸ್ಯೆ ಇದ್ದರೂ ಮಾತನಾಡೋಣ ಬಾರಯ್ಯ... ಬಂದು ನನ್ನನ್ನು ಭೇಟಿಯಾಗು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಆಗ ಶಾಸಕರು, ಯಾವಾಗ ಬರಬೇಕು, ಎಲ್ಲಿಗೆ ಬರಬೇಕೆಂದು ಕೇಳಿದಾಗ ಸೋಮವಾರ ರಾಯಚೂರು ತಾಲೂಕಿನ ಯರಗೇರಾದಲ್ಲಿ ನಡೆಯಲಿರುವ ಬುಡಕಟ್ಟು ಉತ್ಸವ ಮತ್ತು 996 ಕೋಟಿ ರು. ಮೊತ್ತದ ವಿವಿಧ ಯೋಜನೆಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಅಲ್ಲಿಗೆ ಬಂದು ಭೇಟಿಯಾಗುವಂತೆ ಸೂಚಿಸಿದ್ದಾರೆ.
ಆ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಹಾಗಾಗಿ ನಾನು ಅಲ್ಲಿಗೆ ಬರುವುದಿಲ್ಲ ಎಂದು ಶಾಸಕರು ಹೇಳಿದಾಗ, ಹಾಗಿದ್ದರೆ ಸೋಮವಾರ ಸಂಜೆ ದೆಹಲಿಗೆ ಹೋಗುತ್ತಿದ್ದು, ಬುಧವಾರ ವಾಪಸಾಗುತ್ತೇನೆ. ಆಗ ಬೆಂಗಳೂರಿಗೆ ಬಂದು ಕಾವೇರಿ ನಿವಾಸಲ್ಲೇ ಭೇಟಿ ಮಾಡುವಂತೆ ಮುಖ್ಯಮಂತ್ರಿಯವರು ಕರೆ ಮಾಡಿ ಸೂಚಿಸಿದ್ದಾಗಿ ಮೂಲಗಳು ತಿಳಿಸಿವೆ.
ಲಂಚ ನೀಡಿದವರಿಗೆ ಮಾತ್ರ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಅವರೊಂದಿಗಿನ ಕರೆ ವೇಳೆ ಶಾಸಕ ಬಿ.ಆರ್.ಪಾಟೀಲ್ ಅವರು ಅಸಮಾಧಾನ ತೋಡಿಕೊಂಡಿದ್ದರು. ಈ ಆಡಿಯೋ ಬಹಿರಂಗವಾಗಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಆಡಿಯೋದಲ್ಲಿನ ಧ್ವನಿ ತಮ್ಮದೇ ಎಂದು ಶಾಸಕರು ಕೂಡ ಒಪ್ಪಿಕೊಂಡಿದ್ದು, ಸರ್ಕಾರವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
ನಾಡಿದ್ದು ಬೆಂಗಳೂರಿನಲ್ಲಿ ಭೇಟಿ ಮಾಡುವಂತೆ ಸೂಚನೆ
ನಾನು ಹೇಳಿದ್ದೆಲ್ಲ ಸತ್ಯ. ಮುಖ್ಯಮಂತ್ರಿ ಅವರು ಕರೆ ಮಾಡಿ ತಮ್ಮನ್ನು ಭೇಟಿ ಮಾಡುವಂತೆ ಆಹ್ವಾನಿಸಿರುವುದು ನಿಜ. ದೆಹಲಿಯಿಂದ ವಾಪಸಾದ ಬಳಿಕ ಬುಧವಾರ ಬೆಂಗಳೂರಿನಲ್ಲಿ ಬಂದು ಭೇಟಿಯಾಗುವಂತೆ ತಿಳಿಸಿದ್ದಾರೆ.
- ಬಿ.ಆರ್. ಪಾಟೀಲ, ಕಾಂಗ್ರೆಸ್ ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.