ಮಸ್ಕಿ ಕ್ಷೇತ್ರದಲ್ಲಿ ಹತ್ತೇ ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಅಚ್ಚರಿ ವ್ಯಕ್ತಪಡಿಸಿದ ಸಿಎಂ

By Suvarna NewsFirst Published Apr 11, 2021, 4:25 PM IST
Highlights

ಕಾಂಗ್ರೆಸ್ ಹಾಗೂ ಬಿಜೆಪಿಗೆ ಮಸ್ಕಿ ಉಪಚುನಾವಣೆ ತೀವ್ರ ಪ್ರತಿಷ್ಠೆಯಾಗಿದ್ದು, ಶತಾಯಗತಾಯವಾಗಿ ಗೆಲ್ಲಲೇಬೇಂದು ನಾಯಕರು ಪಣತೊಟ್ಟಿದ್ದಾರೆ. ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರ ಕ್ಷೇತ್ರದ ವಾತಾವರಣ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮುದಗಲ್‌ (ರಾಯಚೂರು), (ಏ.11): ಕಳೆದ 10 ದಿನಗಳಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

 ಮುದುಗಲ್ ಪಟ್ಟಣದಲ್ಲಿರುವ ದೊಡ್ಡನಗೌಡ ಪಾಟೀಲ ಅವರ ಮನೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಬಿಎಸ್‌ವೈ, ವಿಜಯೇಂದ್ರ, ಎನ್.ರವಿಕುಮಾರ್ ಅವರು ಮೊದಲೆ ಬಂದು ಮತದಾರರಿಗೆ ಉಪಚುನಾವಣೆ ಮಹತ್ವ‌ ತಿಳಿ ಹೇಳಿದ್ದಾರೆ. ಕ್ಷೇತ್ರದ ಪ್ರತಿಕ್ರಿಯೆ ನೋಡಿ‌ ಅಚ್ಚರಿಯಾಗಿದೆ ಎಂದರು.

ಹಠಕ್ಕೆ ಬಿದ್ದ ನಾಯಕರು: ಉಪಚುನಾವಣೆ ಗೆಲುವಿಗೆ ಕಾಂಗ್ರೆಸ್ ರಣತಂತ್ರ

ಈ ಸಭೆಯಲ್ಲಿ‌ ಭಾಗವಹಿಸಿದವರು ಬಿಜೆಪಿಗೆ ಮತ ನೀಡುವುದು ದೊಡ್ಡ ಮಾತಲ್ಲ. ಪರಿಶಿಷ್ಟ ಸಮುದಾಯದ ಜನರ‌ ಮನವೊಲಿಕೆ ಮಾಡಿ ಮತ ಪಡೆಯಬೇಕು. ಸಮಾಜದ ಪ್ರತಿಯೊಂದು ಸಮುದಾಯದ ಮನವೊಲಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ. ಸಿದ್ದರಾಮಯ್ಯ ಬಂದಿದ್ದಾರೆ ಒಂದು ಸಭೆ ಮಾಡಿ ಹೋಗುತ್ತಾರೆ. ಅದರಿಂದ ಏನೂ ಆಗುವುದಿಲ್ಲ. ಉಪಚುನಾವಣೆ ಬಳಿ ಮತ್ತೊಂದು ಸಭೆ ಮಾಡೋಣ. ನಿಮ್ಮ‌ಬೇಡಿಕೆಗಳ ಪಟ್ಟಿ‌ಕೊಡಿ. ಅವುಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ವೀರಶೈವ ಲಿಂಗಾಯತ ಮುಖಂಡರು ಬೇರೆ ಎಲ್ಲ ಕೆಲಸ ಬದಿಗಿಟ್ಟು ಮತ ನೀಡುವ ಜೊತೆಗೆ ಬೇರೆಯವರ ಮತ ಕೊಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಈ ವೇಳೆ ದೊಡ್ಡನಗೌಡ ಪಾಟೀಲ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್.ಪಾಟೀಲ‌ ಅವರ ನಂತರ‌ ಸಮಾಜದ ನಾಯಕತ್ವಕ್ಕಾಗಿ ಹುಡುಕಾಡುತ್ತಿದ್ದವು. ಇದೀಗ ಬಿ.ಎಸ್‌.ಯಡಿಯೂರಪ್ಪ ಆ ಸ್ಥಾನ ತುಂಬಿದ್ದಾರೆ. ಮಸ್ಕಿ ಕ್ಷೇತ್ರದ ಅಭಿವೃದ್ದಿಗಾಗಿ ಪ್ರತಾಪಗೌಡ ‌ಅವರನ್ನು ಆಯ್ಕೆ ಮಾಡಬೇಕಿದೆ. ಭಿನ್ನಾಭಿಪ್ರಾಯ ಮರೆತು ಬಿಜೆಪಿ‌ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಆರಂಭದಲ್ಲಿ ಮಸ್ಕಿ‌ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಮಾತುಗಳಿದ್ದವು. ಈಗ ಬಿಜೆಪಿ ಗೆಲ್ಲುತ್ತದೆ ಎನ್ನುವ ಮಾತನ್ನು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲ ಕಡೆಗೂ ಭವ್ಯ ಸ್ವಾಗತ ಸಿಕ್ಕಿದೆ. ಈ ಭಾಗದಲ್ಲಿ ಬಡತನ‌ ಇರಬಹುದು. ಸ್ವಾಭಿಮಾನಕ್ಕೆ ಕೊರತೆ ಇಲ್ಲ. ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.

click me!