'ಬಿಎಸ್‌ವೈ ರಾಮನಂತೆ ವಚನಪಾಲಕ, ಎಲ್ಲ ಶಾಸಕರು ಸಹಕರಿಸಬೇಕು'

By Kannadaprabha NewsFirst Published Jan 29, 2020, 9:00 AM IST
Highlights

ರಾಮನಂತೆ ಬಿಎಸ್‌ವೈ ವಚನಪಾಲಕ: ನಿಡುಮಾಮಿಡಿ| ಕೊಟ್ಟಮಾತಿಗೆ ಸಿಎಂ ತಪ್ಪೋದಿಲ್ಲ, ಎಲ್ಲ ಶಾಸಕರು ಸಹಕರಿಸಬೇಕು| ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿಕೆ

ಬೆಂಗಳೂರು[ಜಕ.29]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶ್ರೀರಾಮಚಂದ್ರನ ವಿಶೇಷ ಗುಣಗಳಿವೆ. ಶ್ರೀರಾಮ ಪಿತೃವಾಕ್ಯ ಪರಿಪಾಲಕನಾದರೆ, ಯಡಿಯೂರಪ್ಪ ವಚನ ಪರಿಪಾಲಕ. ಕೊಟ್ಟಮಾತಿಗೆ ತಪ್ಪುವುದಿಲ್ಲ. ಹೀಗಾಗಿ, ಎಲ್ಲ ಶಾಸಕರು ಅವರಿಗೆ ಸಹಕರಿಸಬೇಕು.

ಬಿಜೆಪಿಯ ಶಾಸಕರಿಗೆ ಇಂತಹದೊಂದು ಪರೋಕ್ಷ ಕೋರಿಕೆಯನ್ನು ಇಟ್ಟವರು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ.

ರಾಜ್ಯ ರಾಜಕಾರಣ ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿದೆ. ಪಕ್ಷದ ನಿಷ್ಠಾವಂತರು ಮತ್ತು ಉಪ ಚುನಾವಣೆಯಲ್ಲಿ ಗೆದ್ದವರು ಈ ಎರಡು ಬಗೆಯವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕಾಗಿದೆ. ಜತೆಗೆ, ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಾಗಿದೆ. ಇಂತಹ ಸವಾಲನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ. ಸರ್ಕಾರಕ್ಕೆ ಇನ್ನೂ ಮೂರು ವರ್ಷ ಅವಧಿಯಿದ್ದು, ಎರಡು ಹಂತಗಳಲ್ಲಿ ಸಚಿವರ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಎಲ್ಲರೂ ಸಮಾಧಾನದಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಮುಂದಾಗಬೇಕು. ಪಕ್ಷದ ಎಲ್ಲ ಶಾಸಕರು ಮುಖ್ಯಮಂತ್ರಿಯವರೊಂದಿಗೆ ಕೈ ಜೋಡಿಸಿ ಅವರಿಗೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.

"

ನಿಡುಮಾಮಿಡಿ ಮಠದ ವತಿಯಿಂದ ಬಸವನಗುಡಿಯಲ್ಲಿ ನೂತನವಾಗಿ ಸ್ಥಾಪಿಸಿರುವ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು ಕೊಟ್ಟಮಾತಿಗೆ ತಪ್ಪಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಹೊತ್ತುಕೊಂಡರು. ಆದರೆ, ಯಡಿಯೂರಪ್ಪನವರಿಗೆ ಅಂತಹ ಗುಣ ಇಲ್ಲ. ಯಾವುದೇ ಕಾರಣಕ್ಕೂ ಅವರು ಮಾತಿಗೆ ತಪ್ಪುವವರಲ್ಲ ಎಂದರು.

ಕಳೆದ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆದು ಸರ್ಕಾರ ರಚನೆಯಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಸೇವೆ ಸಲ್ಲಿಸಬೇಕು. ಇದಕ್ಕೆ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರು ಅವಕಾಶ ಮಾಡಿಕೊಡಬೇಕು. ಜೊತೆಗೆ, ಪ್ರೊತ್ಸಾಹಿಸಬೇಕು ಎಂದರು.

ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಠಗಳಿಗೆ ಸಾಕಷ್ಟುನೆರವು ನೀಡಿದ್ದರು. ಅದೇ ಅನುದಾನದಲ್ಲಿ ಮಠಗಳು ನಿಸ್ವಾರ್ಥ ಸೇವೆ ಸಲ್ಲಿಸಿವೆ. ಇದೀಗ ಬಜೆಟ್‌ ಮಂಡಿಸುತ್ತಿದ್ದು ಅಸಹಾಯಕರು, ಬಡವರು, ದಲಿತರು ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ ಎಂದರು.

ರಾಜ್ಯದಲ್ಲಿ ಎಸ್‌.ಎಂ.ಕೃಷ್ಣ ಅವರನ್ನು ಹೊರತುಪಡಿಸಿದರೆ ಯಡಿಯೂರಪ್ಪ ಮಾತ್ರ ಅತ್ಯಂತ ಸಂಕಷ್ಟದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಅವರಿಗೆ ಹಲವು ಸವಾಲುಗಳು, ಸಮಸ್ಯೆಗಳು, ಸಂದಿಗ್ಧ ಪರಿಸ್ಥಿತಿ ಮತ್ತು ಸಂಕಟಗಳು ಎದುರಾಗಿವೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅತ್ಯಂತ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಪ್ರಶಂಸೆಗೂ ಒಳಗಾಗಿದ್ದರು ಎಂದು ಹೇಳಿದರು.

ವೀರಶೈವ ಲಿಂಗಾಯತರ ರಾಜಕೀಯ ನಾಯಕ:

ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಹಲವು ಮುಖ್ಯಮಂತ್ರಿಗಳಿದ್ದರು. ಅವರಿಗೆ ಸಮುದಾಯದ ಜೊತೆ ಒಡನಾಟ ಇರಲಿಲ್ಲ. ಆದರೆ, ಯಡಿಯೂರಪ್ಪ ಸಮುದಾಯದ ಜನರೊಂದಿಗೆ ಬೆರೆಯುತ್ತಿದ್ದಾರೆ. ಅಲ್ಲದೆ, ಅವರನ್ನು ರಾಜ್ಯದಲ್ಲಿ ವೀರಶೈವರು ತಮ್ಮ ರಾಜಕೀಯ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಾಡಿನ ಎಲ್ಲ ಸಮುದಾಯ, ಎಲ್ಲ ಜನ ವರ್ಗಗಳ ಪ್ರೀತಿ ವಿಶ್ವಾಸಗಳನ್ನು ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.

click me!