ರಾಜ್ಯಕ್ಕೆ ಮತ್ತೊಬ್ಬ ಉಪಮುಖ್ಯಮಂತ್ರಿ!: ಯಾರಿಗೆ ಹುದ್ದೆ?

By Kannadaprabha NewsFirst Published Jan 29, 2020, 8:46 AM IST
Highlights

ರಾಮುಲುಗೆ ಡಿಸಿಎಂ ಹುದ್ದೆ ಭಾಗ್ಯ?| ಇನ್ನೊಂದು ಡಿಸಿಎಂ ಹುದ್ದೆ ಸೃಷ್ಟಿಸಲು ಹೈಕಮಾಂಡ್‌ ಚಿಂತನೆ| ಈಗಲೇ ನೀಡುತ್ತಾರೋ ಜೂನ್‌ ವೇಳೆ ನೀಡುತ್ತಾರೋ ಸಸ್ಪೆನ್ಸ್‌

 ಬೆಂಗಳೂರು[ಜ.29]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂಪುಟಕ್ಕೆ ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಅವರಿಗೇ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಆದರೆ, ಉಪಮುಖ್ಯಮಂತ್ರಿ ಸ್ಥಾನ ಶೀಘ್ರದಲ್ಲೇ ನಡೆಯಲಿರುವ ಸಂಪುಟ ವಿಸ್ತರಣೆ ಬಳಿಕ ನೀಡಲಾಗುತ್ತದೆಯೋ ಅಥವಾ ಜೂನ್‌ನಲ್ಲಿ ವಿಧಾನಪರಿಷತ್‌ ಚುನಾವಣೆ ಬಳಿಕ ಮತ್ತೊಮ್ಮೆ ನಡೆಯಬಹುದಾದ ಸಂಪುಟ ವಿಸ್ತರಣೆ ವೇಳೆ ನೀಡಲಾಗುತ್ತದೆಯೊ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ.

'ಬಿಎಸ್‌ವೈ ರಾಮನಂತೆ ವಚನಪಾಲಕ, ಎಲ್ಲ ಶಾಸಕರು ಸಹಕರಿಸಬೇಕು'

ಪ್ರಬಲ ವಾಲ್ಮೀಕಿ ಸಮುದಾಯದ ಬೆಂಬಲ ಉಳಿಸಿಕೊಳ್ಳುವ ಸಲುವಾಗಿ ಆ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್‌ ತೊರೆದು ಬಂದಿರುವ ಅರ್ಹ ಶಾಸಕ ರಮೇಶ್‌ ಜಾರಕಿಹೊಳಿ ಅವರನ್ನು ಮನವೊಲಿಸುವ ಪ್ರಯತ್ನ ನಡೆಯಬಹುದು. ಇದಕ್ಕಾಗಿ ರಮೇಶ್‌ ಅವರಿಗೆ ಪ್ರಮುಖ ಖಾತೆಗಳಲ್ಲಿ ಒಂದಾಗಿರುವ ಜಲಸಂಪನ್ಮೂಲ ನೀಡುವ ಮೂಲಕ ಸಮಾಧಾನ ಮಾಡಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ನಾಯಕತ್ವ ನೋಡಿ ಬಿಜೆಪಿಗೆ ಹೆಚ್ಚಿನ ಬೆಂಬಲ ತೋರಿದಂತೆ ವಾಲ್ಮೀಕಿ ಸಮುದಾಯ ಶ್ರೀರಾಮುಲು ಅವರ ನಾಯಕತ್ವ ನೋಡಿ ಹೆಚ್ಚಿನ ಬೆಂಬಲ ನೀಡಿತ್ತು. ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ವಾಲ್ಮೀಕಿ ಸಮುದಾಯದ ಬೆಂಬಲ ಉಳಿಸಿಕೊಳ್ಳುವ ಸಲುವಾಗಿ ಆ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ.

’ಗೆದ್ದ 11 ಶಾಸಕರು ಮಂತ್ರಿಯಾಗುವುದು ಪಕ್ಕಾ’

ಆದರೆ, ರಮೇಶ್‌ ಜಾರಕಿಹೊಳಿ ಅವರೂ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರೂ ಆ ಸಮುದಾಯದ ಒಕ್ಕೊರಲಿನ ಬೆಂಬಲ ಇರುವುದು ಶ್ರೀರಾಮುಲು ಅವರಿಗೆ. ಈಗಾಗಲೇ ರಾಮುಲು ಅವರು ವಾಲ್ಮೀಕಿ ಸಮುದಾಯದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ, ಅವರಿಗೇ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ಪಕ್ಷದ ಹಲವು ನಾಯಕರು ಹಾಗೂ ಸಂಘ ಪರಿವಾರದ ಕೆಲವು ಮುಖಂಡರೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

click me!