ಕೇಂದ್ರ ಹಾಗೂ ಕರ್ನಾಟಕದಲ್ಲಿ ಸುಳ್ಳಿನ ಸರ್ಕಾರಗಳು ಆಡಳಿತದಲ್ಲಿದ್ದು, ಜನಸಾಮಾನ್ಯರು ಸರ್ಕಾರದ ಪೊಳ್ಳು ಭರವಸೆಗಳಿಂದ ರೋಸಿ ಹೋಗಿದ್ದಾರೆ: ಎಂ. ಅರವಿಂದ
ಲಿಂಗಸುಗೂರು(ಸೆ.23): ರಾಜ್ಯದ ಮುಖ್ಯಮಂತ್ರಿ ಅವರು ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸುವುದ ಶತಸಿದ್ಧ ಎಂದು ಆಪ್ ಮುಖಂಡ ಎಂ. ಅರವಿಂದ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ ಅಭ್ಯರ್ಥಿಗಳು ಸ್ಪರ್ಧೆಗಿಳಿಯಲಿದ್ದಾರೆ. ಕೇಂದ್ರ ಹಾಗೂ ಕರ್ನಾಟಕದಲ್ಲಿ ಸುಳ್ಳಿನ ಸರ್ಕಾರಗಳು ಆಡಳಿತದಲ್ಲಿದ್ದು, ಜನಸಾಮಾನ್ಯರು ಸರ್ಕಾರದ ಪೊಳ್ಳು ಭರವಸೆಗಳಿಂದ ರೋಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ವತಿಯಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದ್ದೇವೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
PAYCM POSTERS: ಪರಿಷತ್‌ನಲ್ಲಿ ‘ಪೇಸಿಎಂ ಪೋಸ್ಟರ್’ ಕೋಲಾಹಲ
ಆಪ್‌ನಿಂದ ಈಗಾಗಲೇ ಗ್ರಾಮ ಸಂಪರ್ಕ ಅಭಿಯಾನ ಆರಂಭಿಸಿದ್ದು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಜನರಿಗೆ ಬಿಜೆಪಿ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸುವ ಮೂಲಕ ರಾಜ್ಯದಲ್ಲಿ ದೆಹಲಿ ಮಾದರಿ ಆಡಳಿತ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ 200 ಕ್ಷೇತ್ರಗಳ ಪೈಕಿ 146ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಆಪ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈಗಾಗಲೇ ಪಕ್ಷದ ಆಂತರಿಕ ಸಮೀಕ್ಷೆಗಳು ಇದನ್ನು ದೃಢಪಡಿಸಿವೆ. ಅಲ್ಲದೇ ರಾಜ್ಯದಲ್ಲೂ ಆಫ್ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಆಪ್‌ನ ಅಧ್ಯಕ್ಷ, ನ್ಯಾಯವಾದಿ ಕುಪ್ಪಣ್ಣ ಮಾಣಿಕ್, ಅಯ್ಯಣ್ಣ ಸ್ವಾಮಿ, ಎಂಜಿ ಪಾಟೀಲ್, ಸಂಯೋಜಕರಾದ ಶಿವರಾಜ ಗುತ್ತೆದಾರ, ಯಂಕನಗೌಡ ಸೇರಿದಂತೆ ಇದ್ದರು.