ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

By Girish Goudar  |  First Published Jan 15, 2023, 12:10 PM IST

ಗೋವಾದವರು ಎಲ್ಲಿಗೆ ಹೋಗಬೇಕಾದ್ರೂ ಹೋಗಲಿ, ಸುಪ್ರೀಂ ಕೋರ್ಟ್ ನಿರ್ದೇಶಿತ ಟ್ರಿಬ್ಯೂನಲ್ ರಚನೆಯಾಗಿದೆ. ಈಗಾಗಲೇ ವರದಿಗಳು ಕೂಡ ಸಲ್ಲಿಕೆಯಾಗಿವೆ. ಡಿಪಿಆರ್ ಕಾನೂನು‌ ಬದ್ಧವಾಗಿಯೇ, ಆದೇಶ ಬದ್ಧವಾಗಿ ನಡೆದಿದೆ: ಸಿಎಂ ಬೊಮ್ಮಾಯಿ 


ಉತ್ತರಕನ್ನಡ(ಜ.15):  ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಅವರು ಉತ್ತರಕನ್ನಡ ಜಿಲ್ಲೆಯ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಅಭಿವೃದ್ಧಿ, ನಾಗರಿಕತೆ, ಅರಣ್ಯ ರಕ್ಷಣೆ ಒಟ್ಟೊಟ್ಟಿಗೆ ಹೋಗಬೇಕಾಗಿದೆ. ಕೆಲವೊಮ್ಮೆ‌ ಇದಕ್ಕೆ ಸವಾಲು ಎದುರಾದಾಗ ನಾವು ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ. 250 ಕೋಟಿ ರೂ.‌ ಗೂ ಹೆಚ್ಚಿನ ವೆಚ್ಚದ ಕಾಮಗಾರಿಗೆ ಇಂದು(ಭಾನುವಾರ) ಚಾಲನೆ ನೀಡುತ್ತಿದ್ದೇನೆ. ಶಿರಸಿಯಲ್ಲಿ ಮೊದಲ ಬಾರಿಗೆ ಇಷ್ಟು  ದೊಡ್ಡ ಮೊತ್ತದ ಅಭಿವೃದ್ಧಿ ನಡೆಯುತ್ತಿದ್ದು, ಇದಕ್ಕೆ ಕಾರಣ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಅವರು ಯಾವತ್ತೂ ತಮ್ಮ ಕ್ಷೇತ್ರದ ಬಗ್ಗೆ ನಿರ್ಲಕ್ಣ್ಯ ಮಾಡಿಲ್ಲ ಅಂತ ಹೇಳಿದ್ದಾರೆ.

ಇಂದು(ಭಾನುವಾರ) ಜಿಲ್ಲೆಯ ಶಿರಸಿಯ ಪಿಡಬ್ಲ್ಯೂಡಿ ಐಬಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉತ್ತರಕನ್ನಡ ನಿಸರ್ಗದತ್ತವಾದ ಜಿಲ್ಲೆಯಾಗಿದ್ದು, ಇದಕ್ಕೆ ಪೂರಕ ಯೋಜನೆಗಳ ಅಗತ್ಯವಿದೆ. 2022-23 ಮಾಡಿದ ಗ್ರೀನ್ ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಗಳು ಈಗಾಗಲೇ ಪ್ರಾರಂಭವಾಗಿವೆ . ಕಳಚೆಯಲ್ಲಿ ಮತ್ತೆ ಅಭಿವೃದ್ಧಿ ಹಾಗೂ ಅರಣ್ಯೀಕರಣ ಮತ್ತೆ ನಡೆಯುತ್ತಿದೆ. ಜನರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದ್ದು, ಇನ್ನಷ್ಟು ಅನುದಾನ ನೀಡಲು ತಯಾರಿದ್ದೇವೆ. ಎಕಾಲಜಿ ಸ್ಟಡಿ ಮಾಡುವ ಉದ್ದೇಶದಿಂದ ಎನ್ವೈರ್ನಮೆಂಟಲ್ ಯೂನಿವರ್ಸಿಟಿ ಮಾಡುವ ಯೋಜನೆಯಿದೆ. ಇದರ ಜತೆ ಜನರಲ್ ಸ್ಟಡಿಗಳಿಗೂ ಅವಕಾಶ ಈ ಯೂನಿವರ್ಸಿಟಿಯಲ್ಲಿರಲಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಉತ್ತರಕನ್ನಡ ಜಿಲ್ಲೆಯ ಜನರಿಗೆ ಇದೊಂದು ಕೊಡುಗೆಯಾಗಲಿದೆ ಅಂತ ಹೇಳಿದ್ದಾರೆ. 

Latest Videos

undefined

ಶೀಘ್ರ ಸಂಪುಟ ವಿಸ್ತರಣೆ, ನಿರ್ದಿಷ್ಟ ದಿನ ಹೇಳಲಾಗದು: ಸಿಎಂ ಬೊಮ್ಮಾಯಿ

ಕಾನೂನಿನಲ್ಲಿ ಹಲವು ಸಮಸ್ಯೆಗಳನ್ನು ಅರಣ್ಯವಾಸಿಗಳು ಎದುರಿಸುತ್ತಿದ್ದಾರೆ. ಈ ಹಿಂದೆಯೂ ಮನೆಗಳು ಹಾಗೂ ಪರಿಹಾರ ಕೂಡಾ ನೀಡಿದ್ದೇವೆ. ಅರಣ್ಯ ವಾಸಿಗಳು ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಮೂರು ತಲೆಮಾರಿನ ಬದಲು ಒಂದೇ ತಲೆಮಾರನ್ನು ಗಣನೆಗೆ ತೆಗೆದು ಹಕ್ಕು ಪತ್ರ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ರಾಜ್ಯ ಸರ್ಕಾರ ಮಾಡಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೂ ಈ ಬಗ್ಗೆ ಸೂಕ್ತ ಆದೇಶ ನೀಡಲಾಗಿದೆ. ಅರಣ್ಯ ವಾಸಿಗಳ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಲಾಗುವುದು ಅಂತ ಸಿಎಂ ಇದೇ ಸಂದರ್ಭದಲ್ಲಿ ಅಭಯ ನೀಡಿದ್ದಾರೆ. 

ಶಿರಸಿ ಜಿಲ್ಲೆ ಘೋಷಣೆ ಸಂಬಂಧಿಸಿ ಈಗಾಗಲೇ ಮನವಿಗಳು ಬಂದಿವೆ. ರಾಜ್ಯದಲ್ಲಿ ಈ ರೀತಿಯ ಹಲವು ಮನವಿಗಳಿವೆ. ಇದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಚರ್ಚೆ ಮಾಡ್ತೇವೆ ಅಂತ ಸ್ಪಷ್ಟಪಡಿಸಿದ್ದಾರೆ. 

ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಗೋವಾ ಅಪಸ್ವರ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಗೋವಾದವರು ಎಲ್ಲಿಗೆ ಹೋಗಬೇಕಾದ್ರೂ ಹೋಗಲಿ, ಸುಪ್ರೀಂ ಕೋರ್ಟ್ ನಿರ್ದೇಶಿತ ಟ್ರಿಬ್ಯೂನಲ್ ರಚನೆಯಾಗಿದೆ. ಈಗಾಗಲೇ ವರದಿಗಳು ಕೂಡ ಸಲ್ಲಿಕೆಯಾಗಿವೆ. ಡಿಪಿಆರ್ ಕಾನೂನು‌ ಬದ್ಧವಾಗಿಯೇ, ಆದೇಶ ಬದ್ಧವಾಗಿ ನಡೆದಿದೆ ಅಂತ ತಿಳಿಸಿದ್ದಾರೆ. 
ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಬೊಮ್ಮಾಯಿ, ಸದ್ಯಕ್ಕೆ ಕೇಂದ್ರದಿಂದ‌ ಯಾವುದೇ ಆದೇಶವಿಲ್ಲ, ಹೈಕಮಾಂಡ್ ಸೂಚನೆ ಕೊಟ್ಟರೆ ಮೊದಲು ಮಾಧ್ಯಮದವರಿಗೆ ಮಾಹಿತಿ ನೀಡ್ತೇವೆ ಅಂತ ಹೇಳಿದ್ದಾರೆ. 

270 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಪಂಡಿತ್ ಜನರಲ್ ಆಸ್ಪತ್ರೆ ಆವರಣದಲ್ಲಿ 270 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.  ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ ಹೆಬ್ಬಾರ್, ಸಿ.ಸಿ.ಪಾಟೀಲ್, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ಧಿ, ಗಣಪತಿ ಉಳ್ವೇಕರ್ ಉಪಸ್ಥಿತರಿದ್ದರು. 

ಕಾಗೇರಿ ಅಭಿನಂದನಾ ಸಮಾರಂಭ ಉದ್ಘಾಟಿಸಿದ ಸಿಎಂ

ಶಿರಸಿ ಮಾರಿಕಾಂಬಾ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಾರಂಭವನ್ನ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದ್ದಾರೆ. 

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಸಂದೇಶ ರವಾನಿಸಿದ ಯಡಿಯೂರಪ್ಪ

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿದ್ದಾರೆ. ಸಂವಿಧಾನವನ್ನು ಯಥಾವತ್ತಾಗಿ ಪಾಲಿಸಿದ ಕೀರ್ತಿ ಕಾಗೇರಿಗೆ ಸಲ್ಲುತ್ತದೆ. ಮುಂದಿನ‌ ದಿನಗಳಲ್ಲೂ ಕಾಗೇರಿಯವರಿಗೆ ಒಳ್ಳೆಯದಾಗಲಿ ಎಂದು ಹೊರಟ್ಟಿ ಶುಭ ಹಾರೈಸಿದ್ದಾರೆ. 

ಕಾಗೇರಿಗೆ ಅಭಿನಂದಿಸಿದ ಆರ್.ವಿ.ದೇಶಪಾಂಡೆ

ಕಾಗೇರಿ ಬಿಜೆಪಿಯಿಂದ ಆರಿಸಿ ಬಂದರೂ ಪಕ್ಷಾತೀತರು, ಎಲ್ಲಾ ಪಕ್ಷದವರು ಅವರೊಂದಿಗೆ ಉತ್ತಮ ಸ್ನೇಹ‌ವನ್ನ ಹೊಂದಿದ್ದಾರೆ. ಜಿಲ್ಲೆಯಲ್ಲಿ ಅರಣ್ಯ ವಾಸಿಗಳು ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಬಡ ಹಾಲಕ್ಕಿ ಹಾಗೂ ಕುಣಬಿ ಸಮಾಜಕ್ಕೂ ನ್ಯಾಯ ಒದಗಿಸಬೇಕಿದೆ. ಜಿಲ್ಲೆಯ ಜನರ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ನಾವೆಲ್ಲಾ ಶ್ರಮಿಸಬೇಕಿದೆ ಅಂತ ಕಾಂಗ್ರಸ್‌ ನಾಯಕ ಆರ್‌.ವಿ. ದೇಶಪಾಂಡೆ ತಿಳಿಸಿದ್ದಾರೆ. 

click me!