ಕಾಂಗ್ರೆಸ್ ಕಾರ್ಯಾಧ್ಯಕ್ಷರ ಮೇಲೆ ಹೈಕಮಾಂಡ್ ಕ್ರಮ ಜರುಗಿಸುತ್ತಾ?: ವಿವಾದಾತ್ಮಕ ಹೇಳಿಕೆ ಕುರಿತು ಸಿದ್ದರಾಮಯ್ಯ ಮಾತನಾಡಲಿ ಎಂದ ಸಿಎಂ ಬೊಮ್ಮಾಯಿ
ಹಾವೇರಿ(ನ.09): ಅಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ಭಾರತ್ ಜೋಡೋ’ ಯಾತ್ರೆ ಮಾಡುತ್ತಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ಮೂಲಕ ‘ಭಾರತ ತೋಡೋ’ ಮಾಡುತ್ತಿದ್ದಾರೆ. ಇದು ಭಾರತ ಒಡೆಯುವ ಸಂಚಿನ ಮನಸ್ಥಿತಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಮಂಗಳವಾರ ಜಿಲ್ಲೆಯ ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಆಗಮಿಸಿದ ಅವರು ಮೋಟೆಬೆನ್ನೂರಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಅವರ ಕೊಳಕು ಮನಸ್ಥಿತಿಯಾಗಿದೆ ಎಂದ ವ್ಯಂಗ್ಯವಾಡಿದರು.
ಒಂದು ಸಮಗ್ರವಾಗಿ ಇರುವ ಪರಂಪರೆ ಬಗ್ಗೆ ಪದೇ ಪದೇ ಕೆಣಕುವುದು, ಅವಮಾನ ಅಪಮಾನ ಮಾಡೋದು ಎಷ್ಟು ಸರಿ?. ಇವರ ಹೇಳಿಕೆಯಿಂದ ಎಷ್ಟೊಂದು ಜನಕ್ಕೆ ನೋವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅವರ ಆಡಳಿತ, ಅವರ ನೀತಿಯಿಂದಲೇ ದೇಶಕ್ಕೆ ಆಂತರಿಕ ಧಕ್ಕೆ ಬಂದಿದೆ. ಅರಾಜಕತೆ ಹುಟ್ಟಿಸಿ ಅಧಿಕಾರಕ್ಕೆ ಬರುವ ಮನಸ್ಥಿತಿ ಇವರದ್ದು ಎಂದರು.
undefined
ಹಿಂದುಗಳ ಕೆರಳಿಸಿದ ಸತೀಶ್ ಜಾರಕಿಹೊಳಿ ಮಾತು, ಕ್ಷಮೆ ಕೇಳಲ್ಲ ಎಂದ ಕಾಂಗ್ರೆಸ್ ನಾಯಕ!
ಸತೀಶ್ ಹೇಳಿಕೆ ಕುರಿತಂತೆ ಯಾಕೆ ಸಿದ್ದರಾಮಯ್ಯ ಇನ್ನೂ ಮಾತಾಡಿಲ್ಲ? ಇದಕ್ಕೆ ರಾಹುಲ್ ಗಾಂಧಿ ಅಭಿಪ್ರಾಯ ಏನು? ಕಾರ್ಯಾಧ್ಯಕ್ಷರ ಹೇಳಿಕೆಗೆ ಕ್ರಮ ಜರುಗಿಸುತ್ತಾರಾ? ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಿಎಂ ಬೊಮ್ಮಾಯಿ ಪ್ರಶ್ನೆಗಳ ಸುರಿಮಳೆಗರೆದರು.
ಯಾತ್ರೆಗೆ ಜನಬೆಂಬಲ
ರಾಜ್ಯಾದ್ಯಂತ ಜನಸಂಕಲ್ಪ ಸಮಾವೇಶ ಮಾಡುತ್ತಿದ್ದೇವೆ, ನಮಗೆ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನರ ಉತ್ಸಾಹ ಇಮ್ಮಡಿಯಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ತರೋ ಸಂಕಲ್ಪ ಜನ ಮಾಡಿದ್ದಾರೆ. ಪ್ರತಿಯೊಬ್ಬ ಫಲಾನುಭವಿಗೆ ನಮ್ಮ ಸರ್ಕಾರಗಳ ಕಾರ್ಯಕ್ರಮ ಮುಟ್ಟಿಸುತ್ತಿದ್ದೇವೆ ಎಂದರು.
ಬಿಜೆಪಿಯನ್ನು ಮನೆಗೆ ಕಳಿಸುವ ಸಂಕಲ್ಪ ಜನ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಹೇಳಿದ್ದು ಯಾವುದು ನಿಜವಾಗಿದೆ. ಅವರಪ್ಪನಾಣೆ ಯಡಿಯೂರಪ್ಪ ಸಿಎಂ ಆಗಲ್ಲ ಅಂದಿದ್ರು, ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂದಿದ್ರು ಯಾವುದಾದರೂ ಆಗಿದೆಯಾ? ಮತ್ತೆ ನಾನೇ ಸಿಎಂ ಅಂದರು ಆದರೆ ಸಿಎಂ ಆದರಾ? ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ, ನೀವೂ ತಲೆ ಕೆಡಿಸಿಕೊಳ್ಳಬೇಡಿ ಎಂದರು. ಸಿದ್ದರಾಮಯ್ಯ ಅವರು ಹಿಂದೆ ಜನಾಶೀರ್ವಾದ ಯಾತ್ರೆ ಮಾಡಿದರು. ಆದರೆ ಜನ ಅವರಿಗೆ ಆಶೀರ್ವಾದ ಮಾಡಲಿಲ್ಲ. ಅವರ ದುರಾಡಳಿತದಿಂದ ಜನ ಅವರನ್ನು ತಿರಸ್ಕಾರ ಮಾಡಿದರು ಎಂದರು.