ರಾಜಕಾರಣಕ್ಕಾಗಿ ಧರ್ಮ ನಿಂದಿಸುವ ಕೀಳುಮಟ್ಟಕ್ಕಿದ ಕಾಂಗ್ರೆಸ್‌: ಸಿಎಂ ಬೊಮ್ಮಾಯಿ

By Kannadaprabha NewsFirst Published Nov 10, 2022, 9:00 PM IST
Highlights

ಒಂದೆಡೆ ರಾಹುಲ್‌ ಗಾಂಧಿ ಭಾರತ ಜೋಡೋ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಪಕ್ಷದ ಮುಖಂಡ ಸತೀಶ ಜಾರಕಿಹೊಳಿ ಹಿಂದೂ ಎಂಬುದು ಅಶ್ಲೀಲ ಪದ ಎಂದು ಹೇಳಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದ ಸಿಎಂ ಬೊಮ್ಮಾಯಿ

ಖಾನಾಪುರ(ನ.10):  ರಾಜಕಾರಣಕ್ಕಾಗಿ ಕಾಂಗ್ರೆಸ್‌ ಇಂತಹ ಕೀಳುಮಟ್ಟಕ್ಕೆ ಇಳಿದಿದೆ. ಜಾರಕಿಹೊಳಿ ಅವರು ತಾವು ಯಾವ ಧರ್ಮದವರು, ಶಾಲೆಯ ದಾಖಲೆಗಳಲ್ಲಿ ಯಾವ ಧರ್ಮ ಬರೆಸಿದ್ದಾರೆ ಮತ್ತು ಮಹರ್ಷಿ ವಾಲ್ಮೀಕಿ ಯಾವ ಧರ್ಮದವರು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಪಟ್ಟಣದಲ್ಲಿ ಬುಧವಾರ ಸಂಜೆ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಒಂದೆಡೆ ರಾಹುಲ್‌ ಗಾಂಧಿ ಭಾರತ ಜೋಡೋ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಪಕ್ಷದ ಮುಖಂಡ ಸತೀಶ ಜಾರಕಿಹೊಳಿ ಹಿಂದೂ ಎಂಬುದು ಅಶ್ಲೀಲ ಪದ ಎಂದು ಹೇಳಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಕೆಟ್ಟು ಕಾಲ ಬಂದಿದೆ: ಸಿಎಂ ಬೊಮ್ಮಾಯಿ

ಖಾನಾಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬದ್ಧವಿದೆ. ಅತೀವೃಷ್ಟಿಯಿಂದ ಹಾಳಾದ ತಾಲೂಕಿನ ರಸ್ತೆಗಳ ದುರಸ್ತಿಗೆ ವಿಶೇಷ ಅನುದಾನ ಒದಗಿಸಲಾಗುವುದು, ಕಳಸಾ-ಬಂಡೂರಿ, ಮಹದಾಯಿ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು. ಜಾಂಬೋಟಿಯಲ್ಲಿ ಜೇನು ಅಭಿವೃದ್ಧಿಗಾಗಿ .5 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಇದನ್ನು ಬಿಡುಗಡೆಗೊಳಿಸಲಾಗುವುದು, ದೇಗಾಂವ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ತಾಲೂಕಿನ 106 ಗ್ರಾಮಗಳಿಗೆ ನಿರಂತರ ನೀರು ಪೂರೈಕೆ ಯೋಜನೆಗೆ ಅನುದಾನ ನೀಡಿ ಖಾನಾಪುರ ತಾಲೂಕಿನಲ್ಲಿ ಕೆಐಎಡಿಬಿ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಅವರು ವಿವರಿಸಿದರು.

ನೋವಾಗಿದ್ದರೆ ವಿಷಾದ, ಹೇಳಿಕೆ ವಾಪಸ್ ಪಡೆದು ತನಿಖೆಗೆ ಆಗ್ರಹಿಸಿ ಸತೀಶ್ ಜಾರಕಿಹೊಳಿ!

ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯ ಮೂಲಕ ಹಾಲು ಉತ್ಪಾದನೆ ಕೈಗೊಂಡಿರುವ ಗೌಳಿ ಸಮಾಜದವರಿಗೆ ದನಕರುಗಳನ್ನು ಖರೀದಿಸಲು ಮತ್ತು ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಮರಾಠಾ ಅಭಿವೃದ್ಧಿ ನಿಗಮದ ಮೂಲಕ ಆರ್ಥಿಕ ಸಹಾಯ ಒದಗಿಸಲಾಗುವುದು. ಹಳ್ಳಿಗಳಲ್ಲಿ ಕುಂಬಾರಿಕೆ, ಕಮ್ಮಾರಿಕೆ, ಬಡಗಿತನ, ಗಾಣಿಗ ಕಾರ್ಯಗಳನ್ನು ಮಾಡುತ್ತಿರುವ ಕುಶಲಕರ್ಮಿಗಳಿಗೆ ಪ್ರತಿ ಕುಟುಂಬಕ್ಕೆ 50 ಸಾವಿರ ಸಹಾಯಧನ ನೀಡಲಾಗುವುದು, ಪ್ರತಿ ಗ್ರಾಮದ 2 ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ತಲಾ 5 ಲಕ್ಷ ಸಹಾಯಧನ ಒದಗಿಸುವ ಮೂಲಕ ಹಳ್ಳಿಗಾಡಿನ ಹೆಣ್ಣುಮಕ್ಕಳಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲಾಗುವುದು. ಶೀಘ್ರದಲ್ಲೇ ಖಾನಾಪುರ ತಾಲೂಕಿನ ಹಿಂದುಳಿದ ವರ್ಗಗಳ ಮತ್ತು ಎಸ್‌.ಸಿ, ಎಸ್‌.ಟಿ ವಿದ್ಯಾರ್ಥಿಗಳಿಗಾಗಿ ಹೊಸದಾಗಿ ಎರಡು ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವುದಾಗಿದೆ ಭರವಸೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಖಾನಾಪುರ ಬ್ಲಾಕ್‌ ಮತ್ತು ಪಟ್ಟಣ ಪಂಚಾಯ್ತಿ ವತಿಯಿಂದ ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನೀಲ ಬೆನಕೆ, ಲಕ್ಷ್ಮಣ ಸವದಿ, ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ವೇದಿಕೆಯಲ್ಲಿ ಸಚಿವ ಭೈರತಿ ಬಸವರಾಜ, ಶಾಸಕರಾದ ಅಭಯ ಪಾಟೀಲ, ಮಹಾಂತೇಶ ದೊಡಗೌಡರ, ರವಿಕುಮಾರ, ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ವಕ್ತಾರ ಮಾರುತಿ ಝಿರಲಿ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮುಳೆ, ಮಾಜಿ ಶಾಸಕ ಅರವಿಂದ ಪಾಟೀಲ, ಮುಖಂಡರಾದ ವಿಠ್ಠಲ ಹಲಗೇಕರ, ಸಂಜಯ ಕುಬಲ, ಧನಶ್ರೀ ದೇಸಾಯಿ, ಸೋನಾಲಿ ಸರನೋಬತ್‌, ಸುರೇಶ ದೇಸಾಯಿ, ಸುನೀಲ ನಾಯ್ಕ, ಸಿದ್ದು ಪಾಟೀಲ ಮತ್ತಿತರರು ಇದ್ದರು.
 

click me!