Karnataka Monsoon Session Live: ಕರ್ನಾಟಕ ವಿಧಾನಸಭೆ ಮುಂಗಾರು ಅಧಿವೇಶನದ ಎರಡನೇ ದಿನ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವಿನ ಹಾಸ್ಯ ಸಂಭಾಷಣೆ ಎಲ್ಲರಲ್ಲೂ ನಗು ತರಿಸಿತು. ಸಿದ್ದರಾಮಯ್ಯ ಅವರ ಹಾಸ್ಯ ಪ್ರವೃತ್ತಿಗೆ ಯಾವಾಗಲೂ ಹೆಸರು ವಾಸಿ. ಇಂದು ಕೂಡ ಸದನವನ್ನು ನಗೆಗಡಲಲ್ಲಿ ತೇಲಿಸಿದರು. ಸದನದ ಸಂಭಾಷಣೆ ಇಲ್ಲಿದೆ.
ಬೆಂಗಳೂರು: ಸಿದ್ದರಾಮಯ್ಯ ಎಷ್ಟು ಗಂಭೀರ ರಾಜಕಾರಣಿಯೋ ಅಷ್ಟೇ ಹಾಸ್ಯ ಪ್ರವೃತ್ತಿಗೂ ಹೆಸರುವಾಸಿ. ಆಗಾಗ ಸಚಿವರಿಗೆ, ಅಧಿಕಾರಿಗಳಿಗೆ ಅವರು ತೆಗೆದುಕೊಳ್ಳುವ ಕನ್ನಡ ಪಾಠ, ಸಂವಿಧಾನದ ಪಾಠ ಮತ್ತಿತರ ವಿಚಾರಗಳು ಸಹಜವಾಗಿ ಪಕ್ಷಾತೀತವಾಗಿ ನಗು ಮೂಡಿಸುತ್ತದೆ. ಸಿದ್ದರಾಮಯ್ಯ ಸದನದಲ್ಲಿ ಎದ್ದು ನಿಂತರೆಂದರೆ ಗಂಟೆಗಳ ಕಾಲ ಮಾತನಾಡುತ್ತಾರೆ. ಸರ್ಕಾರದ ಮೇಲಿನ ಸಿಟ್ಟು, ಆಕ್ರೋಶ ಮತ್ತು ಪ್ರಶ್ನಿಸುವ ಜತೆಜತೆಗೆ ಹಾಸ್ಯವನ್ನೂ ಮಾಡುತ್ತಾರೆ. ಮುಂಗಾರು ಅಧಿವೇಶನದ ಎರಡನೇ ದಿನ ಇಂತದ್ದೇ ಒಂದು ಸಂಭಾಷಣೆಗೆ ಸದನ ಸಾಕ್ಷಿಯಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಅರವಿಂದ ಲಿಂಬಾವಳಿ ಮತ್ತು ಆರ್ ಅಶೋಕ್ ಒಬ್ಬರ ಕಾಲೊಬ್ಬರು ಎಳೆದರು. "ಮಳೆ ಬಂದ ಜಾಗಕ್ಕೆ ನಾನು ಭೇಟಿ ಕೊಟ್ಟಿದ್ದೆ, ನಾನು ಬೋಟ್‌ನಲ್ಲಿ ಹೋಗಿದ್ದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ಮಾತನಾಡಿದ ಅರವಿಂದ ಲಿಂಬಾವಳಿ, "ಸರ್ ನೀವು ಬೋಟಲ್ಲಿ ಯಾಕೆ ಹೋದ್ರಿ ನಡೆದೇ ಹೋಗಬಹುದಿತ್ತು," ಎಂದು ಕಾಲೆಳೆದಿದ್ದಾರೆ. ಅದಕ್ಕೆ ಸಿದ್ದರಾಮಯ್ಯ "ನೀನು ಬಂದಿದ್ರೆ ನಡೆದೇ ಹೋಗಬಹುದಿತ್ತು," ಎಂದಿದ್ದಾರೆ.
ಈ ಮಧ್ಯೆ ಬಸವರಾಜ ಬೊಮ್ಮಾಯಿ ಎದ್ದು ನಿಂತು, "ಅಲ್ಲಪ್ಪ ನಿಮ್ಮನ್ನ ಬೋಟಲ್ಲಿ ಕರೆದುಕೊಂಡು ಹೋದ ಪುಣ್ಯಾತ್ಮ ಯಾರಪ್ಪ. ನಾನು ಮಹದೇವಪುರಕ್ಕೆ ನಡೆದೇ ಹೋಗಿದ್ದೆ. ನೀವು ಬೋಟಲ್ಲಿ ಹೋಗಿದ್ದೀರಿ. ಒಂದೂವರೆ ಅಡಿ ನೀರಲ್ಲಿ ಬೋಟ್ ಮೂಲಕ ಹೋಗಿದ್ದೀರಿ," ಎಂದು ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಬೋಟಲ್ಲಿ ಹೋಗಿದ್ದನ್ನು ಕೃಷ್ಣಾ ಭೈರೇಗೌಡ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಆಗ ಬಸವರಾಜ ಬೊಮ್ಮಾಯಿ ನೀವು ವಿತಂಡವಾದ ಮಾಡಬೇಡಿ ಎಂದಿದ್ದಾರೆ.
"ಸಿದ್ದರಾಮಯ್ಯ ಮತ್ತು ಸಿಎಂ ಬರುವ ಎರಡು ದಿನ ಮೊದಲು ಅಲ್ಲಿ ನೀರು ಇದ್ದಿದ್ದು ನಿಜ ಎಂದ ಲಿಂಬಾವಳಿ. ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದು ಸತ್ಯ. ವಿಚಾರ ಗಂಭೀರವಾಗಿದೆ. ಇದೆಲ್ಲಾ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಕ್ಕೆ ಆಗಿದ್ದು. ಸೆಲೆಬ್ರಿಟಿಗಳನ್ನು ಟ್ರಾಕ್ಟರ್ ಮೂಲಕ ಮನೆಯಿಂದ ಹೊರತರುವಂತಾಯಿತು," ಎಂದು ಮಳೆಯ ಗಂಭೀರ ಪರಿಸ್ಥಿತಿ ಬಗ್ಗೆ ಅರವಿಂದ ಲಿಂಬಾವಳಿ ಪ್ರಸ್ತಾಪಿಸಿದರು.
"ನಾನು ನನ್ನ ಸ್ವಂತ ಬೋಟ್ ತೆಗೆದುಕೊಂಡು ಹೋಗಿಲ್ಲ. ಅದು ಎನ್‌ಡಿಆರ್‌ಎಫ್ ಬೋಟ್. ರಾಮಲಿಂಗ ರೆಡ್ಡಿ ನಡೆದು ಹೋಗಿದ್ರು. ನಾನು ಸುಳ್ಳು ಹೇಳಿಲ್ಲ ಅದರಿಂದ ಲಾಭ ಆಗಬೇಕಿರೋದು ಏನಿಲ್ಲ," ಎಂದು ಸಿದ್ದರಾಮಯ್ಯ ಸಮರ್ಥನೆ ನೀಡಿದರು. "ಆಯ್ತು ಬಿಡಿ. ಎನ್‌ಡಿಆರ್‌ಎಫ್ ಬೋಟನ್ನು ನೀವು ಕೂಡ ಬಳಸಿಕೊಂಡ್ರಲ್ಲ ಬಿಡಿ," ಎಂದು ಬೊಮ್ಮಾಯಿ ಮತ್ತೆ ಹಾಸ್ಯ ಮಾಡಿದರು.
ಇದನ್ನೂ ಓದಿ: ನನ್ನನ್ನು ಲೂಟಿ ರವಿ ಎಂದರೆ ಸಿದ್ದ- ಪೆದ್ದ ಎನ್ನಬಹುದೇ?: ಸಿ.ಟಿ.ರವಿ
ಅದಕ್ಕೆ ಪ್ರತ್ಯುತ್ತರವಾಗಿ ಅರವಿಂದ ಲಿಂಬಾವಳಿ, "ಬೊಮ್ಮಾಯಿಯವರಿಗೆ ವಯಸ್ಸಿದೆ ಅವರು ನಡೆದು ಬಂದ್ರು. ನಿಮಗೆ ಸ್ವಲ್ಪ ವಯಸ್ಸಾಗಿದೆ ಹಾಗಾಗಿ ಬೋಟಲ್ಲಿ ಹೋದ್ರಿ," ಎಂದು ಕಿಚಾಯಿಸಿದರು. "ಕಾಲು ಒದ್ದೆಯಾಗಬಾರದು ಅಂತ ನಿಮ್ಮನ್ನು ಬೋಟಲ್ಲಿ ಕರೆದುಕೊಂಡು ಹೋಗಿರಬಹುದು," ಎಂದು ಮತ್ತೆ ಸಿದ್ದರಾಮಯ್ಯಗೆ ಬೊಮ್ಮಾಯಿ ಕಿಚಾಯಿಸಿದರು.
"ಮಳೆಯಿಂದ ಒಟ್ಟು 24 ಸಾವಿರ ಮನೆಗಳು ಡ್ಯಾಮೇಜ್ ಆಗಿವೆ. 7,647 ಕೋಟಿ 13 ಲಕ್ಷ ನಷ್ಟ ಹೇಳಿದ್ದೀರಿ. 1,012 ಕೋಟಿ ಕೇಂದ್ರದ ಬಳಿ ಪರಿಹಾರ ಕೇಳಿದ್ದೀರಿ.
ಕೇಂದ್ರ ಇಲ್ಲಿ ತನಕ ಒಂದು ಪೈಸಾ ಕೊಟ್ಟಿಲ್ಲ," ಎಂದು ಸಿದ್ದರಾಮಯ್ಯ ಮತ್ತೆ ಗಂಭೀರವಾಗಿ ಚರ್ಚೆ ಆರಂಭಿಸಿದರು. ಆದರೆ ಆರ್ ಅಶೋಕ್ ಎದ್ದು ನಿಂತು ಏನೋ ಹೇಳಲು ಮುಂದಾದರು. ಅದನ್ನು ತಡೆದ ಸಿದ್ದರಾಮಯ್ಯ, "ಅಶೋಕ್ ನಿಲ್ಲಬೇಡ ನೀನು. ನಿನ್ನ ಎನರ್ಜಿ ಚೆನ್ನಾಗಿ ಇದೆ. ಕಬ್ಬಡಿ ಆಡ್ತಿದ್ದೆ ಅಲ್ವಾ?" ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್ ಚಾಲೆಂಜ್’..!
"ಹೌದು 20 ವರ್ಷ ಆಡಿದ್ದೇನೆ," ಎಂದು ಅಶೋಕ್ ಉತ್ತರಿಸಿದರು. "ನಾನು ಹೈಸ್ಕೂಲ್ ಲೆವೆಲ್ ನಲ್ಲಿ ಆಡ್ತಾ ಇದ್ದೆ. ಆಮೇಲೆ ಬಿಟ್ಟೆ. ಆ ಮೇಲೆ ಆಡೋಕೆ ಆಗ್ಲೆ ಇಲ್ಲ. ಈಗ ಯಾವ ಆಟ ಆಡೋಕು ಆಗೋದಿಲ್ಲ ಎಂದ ಸಿದ್ದರಾಮಯ್ಯ," ಎಂದು ಹೇಳಿ ಸಿದ್ದರಾಮಯ್ಯ ನಕ್ಕರು.