
ಬೆಂಗಳೂರು (ಜು.06): ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಗೃಹ ಸಚಿವರು ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಗೃಹ ಸಚಿವರ ರಾಜೀನಾಮೆ ಕೇಳಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಪ್ರಕರಣ ಗಮನಕ್ಕೆ ಬಂದ ಕೂಡಲೇ ಪ್ರಾಥಮಿಕ ತನಿಖೆ ಕೈಗೊಂಡು ಸಿಐಡಿ ತನಿಖೆಗೆ ವಹಿಸಲಾಯಿತು. ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ ಗೃಹ ಸಚಿವರು ಕೆಲಸ ಮಾಡಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ದಕ್ಷತೆ ಇರುವುದರಿಂದಲೇ ಪ್ರಕರಣ ಹೊರಬಂದಿದೆ. ಗೃಹ ಸಚಿವರ ರಾಜೀನಾಮೆ ಕೇಳಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಯತೀಂದ್ರ ಸಿದ್ದರಾಮಯ್ಯ ಮೇಲೆ ಸಿಎಂಗೆ ವಿಶೇಷ ಮಮಕಾರ, ವರುಣಾ ಕ್ಷೇತ್ರಕ್ಕೆ ಭರ್ಜರಿ ಅನುದಾನ
ಸಿದ್ದು ಏನು ಮಾಡಿದರು?: ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪೊಲೀಸ್ ನೇಮಕಾತಿ ಪ್ರಕರಣದಲ್ಲಿ ಕಲಬುರಗಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗ ಪ್ರಶ್ನೆ ಪತ್ರಿಕೆ ತಯಾರಿಸಿದ್ದ ಡಿಐಜಿ ಅವರ ಮನೆಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅದು ವಿಚಾರಣೆಯಾಗಿ ಆರೋಪಿಯೆಂದು ಗುರುತಿಸಿದರು. ಮುಂದೆ ಏನಾಯಿತು? ಬಂಧನ ದೂರದ ಮಾತು, ಅವರನ್ನು ವಿಚಾರಣೆಯನ್ನೂ ಮಾಡಲಿಲ್ಲ ಎಂದು ಲೇವಡಿ ಮಾಡಿದರು.
ಮುಕ್ತ ಅಧಿಕಾರ: ನಾವು ಅಧಿಕಾರಿಗಳಿಗೆ ಮುಕ್ತ ಅಧಿಕಾರವನ್ನು ನೀಡಿದ್ದೇವೆ. ಇಂತಹ ಚಟುವಟಿಕೆಗಳ ಬಗ್ಗೆ ಶೂನ್ಯ ಸಹಿಷ್ಣುತೆ ಇದೆ ಮತ್ತು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ದೊಡ್ಡವರಾಗಲಿ, ಸಣ್ಣವರಾಗಲಿ ಸ್ವಚ್ಛ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಇದ್ದಿದ್ದರೆ ಇದೇ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಿದ್ದರು. ಹಿಂದೆ ಹೀಗೆ ಮಾಡಿದ್ದು, ವಿವರಗಳನ್ನು ಕೊಡಲು ಸಿದ್ಧ. ಯಾರ ರಾಜೀನಾಮೆಯನ್ನು ಕೇಳುವ ಹಕ್ಕು ಅವರಿಗಿಲ್ಲ ಎಂದು ಹೇಳಿದರು.
ಏನೂ ಮುಚ್ಚಿಡಲ್ಲ: ಪ್ರಕರಣದಲ್ಲಿ 50 ಮಂದಿಯನ್ನು ಬಂಧಿಸಲಾಗಿದ್ದು, 20 ಜನ ಪೊಲೀಸ್ ಅಧಿಕಾರಿಗಳೇ ಇದ್ದಾರೆ. ಯಾರನ್ನು, ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಬಹಳ ನಿಯತ್ತಿನಿಂದ, ದಕ್ಷತೆಯಿಂದ ಕೆಲಸ ಮಾಡಲಾಗಿದೆ. ಯಾರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅವರು ಇದ್ದದ್ದರಿಂದಲೇ ಇದೊಂದು ಅಂತಿಮ ಘಟ್ಟಮುಟ್ಟಿದೆ. ಸದನದಲ್ಲಿ ಮಾತನಾಡುವಾಗ ಮಾಹಿತಿ ಇರಲಿಲ್ಲ. ಮಾಹಿತಿ ಗೊತ್ತಾದ ಬಳಿಕ ಏನು ಮಾಡಿದರು, ಎಷ್ಟುದಕ್ಷತೆಯಿಂದ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ. ಪ್ರತಿಪಕ್ಷದವರು ಗಾಳಿಯಲ್ಲಿ ಹೇಳಿಕೆ ನೀಡುವುದಲ್ಲ, ಸರ್ಕಾರ ಗಂಭೀರವಾಗಿ ಪರಿಗಣಿಸಿರದಿದ್ದರೆ, ಪ್ರಕರಣ ಹೊರಗೆ ಬರುತ್ತಿರಲಿಲ್ಲ. ಸಿಐಡಿ, ಎಸಿಬಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲಿ ಪುರಾವೆ ಇದೆಯೋ ಅಲ್ಲಿ ತನಿಖೆ ಮಾಡಲಾಗಿದೆ. ಪುರಾವೆ ಇಲ್ಲದೆ ಏನೂ ಮಾಡಲಾಗುವುದಿಲ್ಲ ಎಂದರು.
ಸರ್ಕಾರಕ್ಕೆ ಮುಜುಗರ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಸಿದ್ದು ಹಗರಣಗಳ ದಾಖಲೆ ನೀಡುವೆ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಆಗ ಅವರು ರಾಜೀನಾಮೆ ನೀಡಿದ್ದರೆ? ಈ ಮಾನದಂಡದಲ್ಲಿ ಸಿದ್ದರಾಮಯ್ಯ ಹಲವು ಬಾರಿ ರಾಜೀನಾಮೆ ನೀಡಬೇಕಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ನೇಮಕಾತಿ ಹಗರಣಗಳ ಬಗ್ಗೆ ಮಾಹಿತಿ ಮುಂದೆ ನೀಡುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.