ಶಾಸಕ ಬಾಲಕೃಷ್ಣ ಅವರ ಕಾಂಗ್ರೆಸ್ ಗ್ಯಾರಂಟಿ ರದ್ದತಿ ಬೆದರಿಕೆಗೆ ಸಿಎಂ, ಡಿಸಿಎಂ ಬೆಂಬಲವಿದೆ: ನಿಖಿಲ್ ಕುಮಾರಸ್ವಾಮಿ

Published : Feb 01, 2024, 01:45 PM IST
ಶಾಸಕ ಬಾಲಕೃಷ್ಣ ಅವರ ಕಾಂಗ್ರೆಸ್ ಗ್ಯಾರಂಟಿ ರದ್ದತಿ ಬೆದರಿಕೆಗೆ ಸಿಎಂ, ಡಿಸಿಎಂ ಬೆಂಬಲವಿದೆ: ನಿಖಿಲ್ ಕುಮಾರಸ್ವಾಮಿ

ಸಾರಾಂಶ

ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿಗಳು ರದ್ದಾಗುತ್ತವೆ ಎಂಬ ಹೇಳಿಕೆಗೆ ಸಿಎಂ, ಡಿಸಿಎಂ ಬೆಂಬಲವಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು (ಫೆ.01): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಐದು ಗ್ಯಾರಂಟಿಗಳು ರದ್ದಾಗುತ್ತವೆ ಎಂದು ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರು ಹೇಳಿರುವುದು ಕಾಂಗ್ರೆಸ್ ಸರ್ಕಾರದ ಅಸಲಿ ಆಲೋಚನೆಯನ್ನು ಬಯಲು ಮಾಡಿದೆ. ಕೊಟ್ಟ ಕೈಯ್ಯಲ್ಲೆ ಕಸಿದುಕೊಳ್ಳುವ ಹುನ್ನಾರ ಇಲ್ಲಿ ಸ್ಫುಟವಾಗಿ ಗೋಚರಿಸುತ್ತಿದೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರು, 'ಕಾಂಗ್ರೆಸ್‌ ಪಕ್ಷ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಅಪ್ಪಣೆ ಇಲ್ಲದೆ ಶಾಸಕರು ಇಂಥ ಮಹತ್ವದ ಹೇಳಿಕೆಯನ್ನು ಅದೂ ಚುನಾವಣೆ ಹೊತ್ತಿನಲ್ಲಿ ಕೊಡಲು ಸಾಧ್ಯವೇ? ಅಲ್ಲಿಗೆ ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಒದ್ದಾಡುತ್ತಿರುವ ಸರಕಾರವು, ತನ್ನ ಶಾಸಕರೊಬ್ಬರ ಮೂಲಕ ರದ್ದು ಮಾಡುತ್ತೇವೆ ಎಂದು ಹೇಳಿಸಿದೆ ಎಂದೇ ಭಾವಿಸಬೇಕಾಗುತ್ತದೆ. ಅದು ನಿಜವೂ ಹೌದು, ಎನ್ನುವುದು ನನ್ನ ಭಾವನೆಯಾಗಿದೆ ಎಂದು ಟೀಕೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಗ್ಯಾರಂಟಿ ಯೋಜನೆ ರದ್ದಾಗುತ್ತವೆ; ಶಾಸಕ ಬಾಲಕೃಷ್ಣ ಎಚ್ಚರಿಕೆ

ಶಾಸಕ ಬಾಲಕೃಷ್ಣ ಅವರ ಹೇಳಿಕೆಯ ಧಾಟಿ ಹೇಗಿದೆ ಎಂದರೆ, ಅವರು ಜನರಿಗೆ ಸ್ಪಷ್ಟವಾದ ಬೆದರಿಕೆ ಒಡ್ಡಿದ್ದಿದ್ದಾರೆ. 'ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ.. ಇಲ್ಲವಾದರೆ ನಿಮಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಮುಲಾಜಿಲ್ಲದೆ ರದ್ದು ಮಾಡುತ್ತೇವೆ' ಎಂದು ಅವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ, ಜನರ ನಂಬಿಕೆಗೆ ಎಸಗಿದ ಅಪಚಾರ. ಆ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ನೀವು ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟಿದ್ದಿರಿ. ಆಮೇಲೆ ಅವುಗಳನ್ನು ಜಾರಿ ಮಾಡಿದ್ದೀರಿ. ಗ್ಯಾರಂಟಿ ಕೊಡಿ, ನಿಮಗೆ ವೋಟು ಹಾಕುತ್ತೇವೆ ಎಂದು ಜನರೇನು ಕೇಳಿರಲಿಲ್ಲ. ವಾಸ್ತವ ಸ್ಥಿತಿ ಹೀಗಿದ್ದ ಮೇಲೆ ಈಗ ಗ್ಯಾರಂಟಿಗಳನ್ನು ಅದ್ಹೇಗೆ ವಾಪಸ್ ಪಡೆಯುತ್ತೀರಿ? ಕಾಂಗ್ರೆಸ್ ಸರಕಾರದ ವರ್ತನೆಗೆ ನನ್ನ ಹಾಗೂ ನಮ್ಮ ಪಕ್ಷದ ತೀವ್ರ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಗೆಲ್ಲದಿದ್ದರೆ ಗ್ಯಾರಂಟಿ ರದ್ದಾಗುತ್ತವೆಂದಿದ್ದ ಬಾಲಕೃಷ್ಣ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲ್ಲದಿದ್ದರೆ ರಾಜ್ಯ ಸರ್ಕಾರ ಕೊಟ್ಟಿರುವ 5 ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಲಾಗುವುದು. ಆದ್ದರಿಂದ ನೀವು ಡಿ.ಕೆ.ಸುರೇಶ್ ಅವರಿಗೆ ಮತ ನೀಡಬೇಕು ಎಂದು ಮಾಗಡಿ ಶಾಸಕ ಹೆಚ್.ಡಿ. ಬಾಲಕೃಷ್ಣ ಹೇಳಿದ್ದರು. ಇವರ ಹೇಳಿಕೆ ವಿಪಕ್ಷಗಳಿಂದ ಭಾರಿ ಟೀಕೆ ಎದುರಾಗಿತ್ತು. ಜೊತೆಗೆ, ಇವರ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರು ಪೇಚಿಗೆ ಸಿಲುಕಿದ್ದರು.

ಬ್ಲಾಕ್‌ಮೇಲ್ ಅಲ್ಲದೇ ಮತ್ತೇನು, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

ನಿಮ್ಮ ಮತ ಅಕ್ಷತೆ ಕಾಳಿಗೋ, ಗ್ಯಾರಂಟಿಗೋ.?
ಮಾಗಡಿ ತಾಲೂಕಿನ ಶ್ರೀಗಿರಿಪುರದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ ಅವರು, ಲೋಕಸಭಾ ಚುನಾವಣೆ ವೇಳೆ ಬಿಜೆಪಿಯವರು ರಾಮ ಮಂದಿರ ನಿರ್ಮಾಣದ ಅಕ್ಷತೆ ಕಾಳನ್ನು ಕೊಟ್ಟು ಮತ ಕೇಳ್ತಿದ್ದಾರೆ. ಆದರೆ, ನಾವು 5 ಗ್ಯಾರಂಟಿಗಳನ್ನ ನೀಡಿ ಮತ ಕೇಳ್ತಿದ್ದೀವಿ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದಿದ್ರೆ ಜನರಿಗೆ 5 ಗ್ಯಾರಂಟಿಗಳು ಇಷ್ಟ ಇಲ್ಲ ಅಂತ ಅರ್ಥವಾದಂತಾಗಲಿದೆ. ಹಾಗಾಗಿ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಯೂ ಚರ್ಚೆ ಮಾಡಿದ್ದೇನೆ. ನಿಮ್ಮ ಮತ ಅಕ್ಷತೆ ಕಾಳಿಗಾ..? ಐದು ಗ್ಯಾರಂಟಿಗಾ ಯೋಚನೆ ಮಾಡಿ ಎಂದು ಜನರಿಗೆ ನೇರವಾಗಿಯೇ ಬ್ಲ್ಯಾಕ್‌ಮೇಲ್ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ