ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ವಾರ್ಡ್ ನಂಬರ್ 33ರಲ್ಲಿ ಮಾಜಿ ಮೇಯರ್ ಅವರನ್ನೇ ಸೋಲಿಸಿ ಸದಸ್ಯೆಯಾಗಿ ಆಯ್ಕೆಯಾದ ಆರತಿ ವಿಠ್ಠಲ್ ಶಹಾಪೂರ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ನ.04): ತಂದೆ ನಗರಸಭೆಯ ಕಸದ ವಾಹನ ಓಡಿಸುವ ಚಾಲಕ, ತಾಯಿ ಅಲ್ಲಿಯೇ ಕಸ ಗೂಡಿಸುವ ಪೌರ ಕಾರ್ಮಿಕಳು, ಅಣ್ಣ ಕೂಡಾ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರ. ಆದರೆ ಇವೆರೆಲ್ಲರ ಮುದ್ದಿನ ಮನೆಮಗಳು ಈಗ ಅದೇ ಮಹಾನಗರ ಪಾಲಿಕೆಗೆ ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯಾಗಿದ ಸದಸ್ಯೆ..
undefined
ಬಡ ದಲಿತ ಹೆಣ್ಣುಮಗಳು ಪಾಲಿಕೆ ಸದಸ್ಯೆಯಾಗಿ ಆಯ್ಕೆ..!
ಹೌದು ಇತ್ತೀಚಿಗೆ ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ವಾರ್ಡ್ ನಂಬರ್ 33ರಲ್ಲಿ ಮಾಜಿ ಮೇಯರ್ ಅವರನ್ನೇ ಸೋಲಿಸಿ ಸದಸ್ಯೆಯಾಗಿ ಆಯ್ಕೆಯಾಗಿರುವ ಆರತಿ ವಿಠ್ಠಲ್ ಶಹಾಪೂರ. ದಲಿತ ಹಾಗೂ ಬಡ ಕುಟುಂಬದ ಹೆಣ್ಣು ಮಗಳೊಬ್ಬಳು ಸದಸ್ಯೆಯಾಗಿ ಆಯ್ಕೆಯಾಗುವ ಮೂಲಕ ತನ್ನ ಕುಟುಂಬದ ಘನತೆ ಹಾಗೂ ಸ್ವಾಭಿಮಾನವನ್ನು ಎತ್ತಿಹಿಡಿದಿದ್ದಾಳೆ.
ವಿಜಯಪುರ ಮಹಾನಗರ ಪಾಲಿಕೆ ಚುಕ್ಕಾಣಿ ಬಿಜೆಪಿಗೆ!?
ತಂದೆ-ತಾಯಿ ಇಬ್ಬರು ಪೌರ ಕಾರ್ಮಿಕರು..!
ಆರತಿ ಶಹಾಪೂರ ಅವರ ತಂದೆ ವಿಠಲ್ ಶಹಾಪುರ ಈ ಹಿಂದಿನ ನಗರಸಭೆಯ ಕಸದ ವಾಹನವನ್ನು ಚಲಾಯಿಸುತ್ತಿದ್ದ ಪೌರ ಕಾರ್ಮಿಕ, ತಾಯಿಯೂ ಕೂಡಾ ಅಷ್ಟೇನೂ ಓದಿಲ್ಲದ ರುಕ್ಮಾಬಾಯಿ ಕೂಡಾ ಅದೇ ನಗರಸಭೆಯಲ್ಲಿ ಕಸ ಗೂಡಿಸುತ್ತಿದ್ದವರು. ಹೀಗೆ ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುತ್ತಿದ್ದವರಿಗೆ ಬರೋಬ್ಬರಿ ಎಂಟು ಜನ ಮಕ್ಕಳು. ಅದರಲ್ಲಿ ನಾಲ್ವರು ಹಂದು ಮಕ್ಕಳು ಹಾಗೂ ನಾಲ್ವರು ಹೆಣ್ಣುಮಕ್ಕಳು. ಅದರಲ್ಲಿ ಎಂಟನೆಯವರೆ ಈಗ ಮಹಾನಗರ ಪಾಲಿಕೆ ಸದಸ್ಯೆಯಾಗಿ ಆಯ್ಕೆ ಆಗಿರುವ ಆರತಿ ಶಹಾಪುರ. ಇವರ ಅಣ್ಣನೂ ಕೂಡಾ ಈಗಲೂ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದವರು ಖಾಸಗಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಡತನದ ಕುಟುಂಬದ ಆರತಿ..!
ಆರತಿ ಶಹಾಪೂರ ತೀರ ಬಡತನದಲ್ಲಿಯೇ ಹುಟ್ಟಿಬೆಳೆದವಳು, ಆದರೆ ತಮಗಿದ್ದ ಬಡತನವನ್ನು ಕೊನೆಯ ಮಗಳಾದ ಆರತಿ ಮೇಲೆ ಯಾರೂ ಹೇಳಲಿಲ್ಲ, ಡಿಪ್ಲೋಮಾ ಓದಿರುವ ಆರತಿ ವಿದ್ಯಾರ್ಥಿ ದೆಶೆಯಿಂದಲೇ ಹೋರಾಟಕ್ಕೆ ಇಳಿದವರು. ಇವರ ಅಕ್ಕ ಎಂ.ಎಸ್.ಡಬ್ಲ್ಯೂ ಓದಿದ್ದು, ಮಹಿಳಾ ಸಂಘಟನೆಯೊಂದರಲ್ಲಿ ಕೆಲ್ಸ ಮಾಡುತ್ತಿದ್ದಾರೆ. ಉಳಿದವರು 10ನೆ ತರಗತಿಯವರೆಗೆ ಮಾತ್ರ ಓದಿದ್ದು. ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಅನುಯಾಯಿಯಾಗಿರುವ ಸಂವಿಧಾನವನ್ನು ಓದಿಕೊಂಡಿದ್ದಾರೆ.
ಬಾಬಾ ಸಾಹೇಬರದ ದಯೆ ಎಂದ ಆರತಿ..!
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಪ್ರತಿಫಲವಾಗಿಯೇ ನಾನು ಇಂದು ಆಯ್ಕೆಯಾಗಿದ್ದೇನೆ. ಸಂವಿಧಾನದಿಂದಲೇ ಇಂತಹ ಬದಲಾವಣೆ ಸಾಧ್ಯ. ಯಾವ ಮಹಾನಗರ ಪಾಲಿಕೆಯಲ್ಲಿ ನನ್ನ ತಂದೆ - ತಾಯಿಯವರು ಪೌರ ಕಾರ್ಮಿಕರಾಗಿದ್ದರೋ ಅಲ್ಲಿಗೆ ನಾನು ಸದಸ್ಯೆಯಾಗಿ ಆಯ್ಕೆ ಆಗಿದ್ದೇನೆ. ನನಗೆ ಪೌರ ಕಾಮಿಕರ ಕಷ್ಟದ ಅರಿವಿದೆ ಎನ್ನುವುದು ಆರತಿಯವರ ಅಭಿಪ್ರಾಯ.
ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗದ ಯಡಿಯೂರಪ್ಪ ವಿರುದ್ಧ ಗುಡುಗಿದ ಯತ್ನಾಳ್..!
ಗೆಲುವು ತಂದ ಹೋರಾಟದ ಮನೋಭಾವ..!
ಹಂತಹಂತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಮೇಲೆ ಬಂದಿರುವ ಆರತಿ ಶಹಾಪೂರ ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಇದನ್ನು ಮನಗಂಡ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ಇತರೆ ಕಾಂಗ್ರೆಸ್ ನಾಯಕರು ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ್ 33ರಿಂದ ಟಿಕೆಟ್ ನೀಡಿದ್ದರು. ಆದರೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ, ಬಿಜೆಪಿ ಹಾಗೂ ಜೆಡಿಎಸ್ ನ ಪ್ರಭಲ ಅಭ್ಯರ್ಥಿಗಳ ನಡುವೆ ಹೋರಾಟ ಮಾಡಬೇಕಾಗಿತ್ತು. ಜೆಡಿಎಸ್ ಪಕ್ಷದಿಂದ ಮಾಜಿ ಮಹಾಪೌರರಾದ ಸಂಗೀತಾ ಪೊಳ ಅವರು ಸ್ಪರ್ದಿಸಿದ್ದು, ಇವರ ಗೆಲುವಿನ ಹಾದಿ ಕಠಿಣವಾಗಿತ್ತು ಆದರೆ ಕಾಂಗ್ರೆಸ್ ಪಕ್ಷದ ಸಂಘಟಿತ ಹೋರಾಟ ಆರತಿ ಅವರನ್ನು ಗೆಲುವಿನ ದಡ ಸೇರಿಸಿದೆ.
ಪೌರ ಕಾರ್ಮಿಕರ ಮನೆಯಲ್ಲಿ ಸಂಭ್ರಮ..!
ಏಕಶ್ಚಿತ ಪೌರ ಕಾರ್ಮಿಕರ ಮಗಳಾದ ಆರತಿ ಅವರ ತಂದೆ-ತಾಯಿ ಹಾಗೂ ಅಣ್ಣ ಪೌರ ಕಾರ್ಮಿಕರಾಗಿದ್ದ ಪಾಲಿಕೆಗೆ ಸದಸ್ಯೆಯಾಗಿ ಆಯ್ಕೆ ಆಗಿದ್ದು ಅವರ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ತಾಯಿ ರುಕ್ಮಾಬಾಯಿ ಅವರಂತೂ ಅತೀವ ಸಂತಸ ಪಟ್ಟಿದ್ದಾರೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಅಂತಲೇ ಅವಳನ್ನು ಓದಿಸಿದ್ದೆವು. ವಿದ್ಯಾರ್ಥಿಯಾಗಿದ್ದಾಗಳೇ ಹೋರಾಟಕ್ಕೆ ಇಳಿದಿದ್ದಳು. ಈಗ ಎತ್ತರಕ್ಕೆ ಬೆಳೆದಿದ್ದಾಳೆ, ಆದರೆ ಇದನ್ನು ಕಣ್ಮುಂಬಿಕೊಳ್ಳಲು ಅವರ ತಂದೆ ವಿಠ್ಠಲ ಇರದಿರುವುದು ಬೇಸರ ತರಿಸಿದೆ ಅಂತಾರೆ ತಾಯಿ ರುಕ್ಮಾಬಾಯಿ. ಒಟ್ಟಿನಲ್ಲಿ ಪೌರ ಕಾರ್ಮಿಕರ ಮಗಳು ಇಂದು ಮಹಾನಗರ ಪಾಲಿಕೆ ಸದಸ್ಯರಾಗಿದ್ದಾಳೆ. ಕಷ್ಟ ಪಟ್ಟರೆ, ಗುರು ಹಾಗೂ ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಆರತಿ ಶಹಾಪುರ ಉದಾಹರಣೆಯಾಗಿದ್ದಾರೆ.