ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಕೋರ್ಟ್‌ ತಡೆಯಾಜ್ಞೆ

By Santosh NaikFirst Published Jan 9, 2023, 2:47 PM IST
Highlights

ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್‌ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ. ಪುಸ್ತಕ ಬಿಡುಗಡೆಗೆ ತಡೆ ಕೋರಿ ಯತೀಂದ್ರ ಸಿದ್ದರಾಮಯ್ಯ ಅವರಿಂದ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
 

ಬೆಂಗಳೂರು (ಜ.9): ಸಿದ್ದರಾಮಯ್ಯ ಅವರ ಕುರಿತಾಗಿ ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಮಾಡಲು ಪ್ರಯತ್ನಿಸಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಕುರಿತಾಗಿ ಸಿಟಿ ಸಿವಿಲ್‌ ಕೋರ್ಟ್‌ಗೆ ಯತೀಂದ್ರ ಸಿದ್ದರಾಮಯ್ಯ ಅರ್ಜಿ ಸಲ್ಲಿಸಿದ್ದರು. ಸೋಮವಾರ ಇದರ ವಿಚಾರಣೆ ನಡೆಸಿದ ಕೋರ್ಟ್‌ ಪುಸ್ತಕ ಬಿಡುಗಡೆ ಹಾಗೂ ಮಾರಾಟಕ್ಕೆ ತಡೆಯಾಜ್ಞೆ ನೀಡಿದೆ.ಪುಸ್ತಕ ಬಿಡುಗಡೆಗೆ ತಡೆ ಕೋರಿ ರಾಜ್ಯ ಕಾಂಗ್ರೆಸ್‌ ಕೋರ್ಟ್‌ ಮೆಟ್ಟಿಲೇರಿತ್ತು. ಇದರ ವಿಚಾರಣ ನಡೆಸಿದ ಕೋರ್ಟ್‌, ಪುಸ್ತಕ ಮಾರಾಟ, ಬಿಡುಗಡೆ, ಮಾಧ್ಯಮಗಳ ಪ್ರಸಾರಕ್ಕೂ ತಡೆ ನೀಡಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಈ ಕುರಿತಾಗಿ ಅರ್ಜಿ ಸಲ್ಲಿಸಿದ್ದರು. ಪುಸ್ತಕ ಬಿಡುಗಡೆಯಾದರೆ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಸಿದ್ದರಾಮಯ್ಯ ಬೆಂಬಲಿಗರ ಭಾವನೆಗಳಿಗೂ ಧಕ್ಕೆಯಾಗಲಿದೆ. ನಮ್ಮನ್ನು ಸಂಪರ್ಕಿಸದೇ ಈ ರೀತಿಯ ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ವಾದಿಸಿದ್ದ ಶಾಸಕ ಯತೀಂದ್ರ ಸಿದ್ದರಾಮಯ್ಯ ವಾದ ಮಾಡಿದ್ದರು.ಪುಸ್ತಕವು ಇಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಬೇಕಿತ್ತು. ಅದಕ್ಕೂ ಮುನ್ನವೇ ಕೋರ್ಟ್‌ ಈ ತಡೆಯಾಜ್ಞೆ ನೀಡಿದೆ.ಹಾಗೇನಾದರೂ ಆದೇಶವನ್ನು ಉಲ್ಲಂಘಿಸಿ ಕೃತಿ ಬಿಡುಗಡೆ ಆದಲ್ಲಿ, ಅದು ನ್ಯಾಯಾಂಗ ನಿಂದನೆ ಎನಿಸಿಕೊಳ್ಳಲಿದೆ ಎಂದು ಕೋರ್ಟ್‌ ಎಚ್ಚರಿಸಿದೆ.

"ಸಿದ್ದು ನಿಜಕನಸುಗಳು" ಎಂಬ ಪುಸ್ತಕದ ಮೂಲಕ ಹಲವು ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸುವ ಜತೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಡುವ ಪ್ರಯತ್ನವನ್ನು ಶ್ಲಾಘಿಸುತ್ತೇನೆ.

ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ನೀವೂ ಬನ್ನಿ. pic.twitter.com/GRnvlmqGrp

— Dr. Ashwathnarayan C. N. (@drashwathcn)


ಕುರುಬರ ಸಂಘದಿಂದ ಪ್ರತಿಭಟನೆಗೆ ಸಿದ್ಧತೆ: ಇನ್ನು ಬಿಜೆಪಿಯಿಂದ ಈ ಕೃತಿ ಬಿಡುಗಡೆಯಾಗುವ ವಿಷಿಯ ಹೊರಬಿದ್ದ ಬೆನ್ನಲ್ಲಿಯೇ ಪುಸ್ತಕ ಬಿಡುಗಡೆಗೆ ವಿರೋಧಿಸಿ ರಾಜ್ಯ ಕುರುಬರ‌ ಸಂಘದಿಂದ ಮಧ್ಯಾಹ್ನ ಪ್ರತಿಭಟನೆ ನಡೆಸಲಾಗಿದೆ. 2 ಗಂಟೆಗೆ ಪುರಭವನದ ಮುಂದೆ ಪ್ರತಿಭಟನೆ ನಡೆಸಲು ರಾಜ್ಯ ಕುರುಬರ ಸಂಘದ ತಿರ್ಮಾನ ಮಾಡಿತ್ತು. ಕುರುಬರ ಸಂಘದ ಪದಾಧಿಕಾರಿಗಳು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ವೇಳೆ ಹಾಜರಿದ್ದರು. ವೈಯಕ್ತಿಕ ನಿಂದನೆಗೆ ಮುಂದಾಗಿರುವ ಕಾರ್ಯಕ್ರಮ ಎಂದು ಆರೋಪಿಸಲಾಗಿದೆ. ಪುಸ್ತಕ ಬಿಡುಗಡೆ ಮಾಡಲು ಅವಕಾಶ ಕೊಡದಂತೆ ಆಗ್ರಹ ಪಡಿಸಿದ್ದಾರೆ. ಆಯೋಜಕರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕುರುಬರ ಸಂಘ ಕರೆ ನೀಡಿದೆ.

ಸಿದ್ದರಾಮಯ್ಯ ಕಾಣುತ್ತಿರುವ ಸಿಎಂ ಕುರ್ಚಿ ಕನಸು ನನಸಾಗೋದಿಲ್ಲ: ಸಚಿವ ಕಾರಜೋಳ

'ಗೊತ್ತಿಲಪ್ಪ ನನಗೆ. ಈಗ ನೋಡ್ರಿ ಕಾಮಾಲೆ  ರೋಗದವರರಿಗೆ ಎಲ್ಲಾ ಹಳದಿಯಾಗಿ ಕಾಣಿಸುತ್ತೆ.ಟಿಪ್ಪು ಬಗ್ಗೆ ಖಡ್ಗ ಹಿಡಿದು ಡ್ರೆಸ್  ಹಾಕಿಕೊಂಡವರು ಯಾರು ಯಡಿಯೂರಪ್ಪ ಶೋಭ ಕರಂದ್ಲಾಜೆ. ಟಿಪ್ಪು ಬಗ್ಗೆ ಕೃತಿಗೆ ಶೇಖ್ ಆಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು ಇದು ಇಬ್ಬಂದಿತನ ಅಲ್ವಾ..? ನನ್ನ ತೇಜೋವದೆ ಮಾಡೋಕೆ ಚುನಾವಣೆ ಸಂದರ್ಭದಲ್ಲಿ ಇಂತಹ ಪುಸ್ತಕ ಬರೆದಿರ್ತಾರೆ. ಇದು ಮಾನನಷ್ಟ ಮಾಡುವ ಉದ್ದೇಶ.ನೋಡೋಣ ಇದರ ಬಗ್ಗೆ ಕಾನೂನು ಪ್ರಕಾರ ಏನು ಮಾಡೋಕೆ ಆಗುತ್ತೆ ಎಂದು ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದರು.

ಸಿದ್ದು ಇಂದು ಕೋಲಾರಕ್ಕೆ: ಸ್ಪರ್ಧಾ ಕ್ಷೇತ್ರ ಘೋಷಣೆ

ಕಾಂಗ್ರೆಸ್‌ನಿಂದಲೂ ದೂರು: ಪುಸ್ತಕದ ಮುಖಪುಟದಲ್ಲಿ ಅವರ ಸಿದ್ಧರಾಮಯ್ಯ ಅವರ ಭಾವಚಿತ್ರವನ್ನ ವಿರೂಪಗೊಳಿಸಲಾಗಿದೆ. ಸಿದ್ದರಾಮಯ್ಯ ಅವರ ಹೆಸರು ಬಳಸಿ ತೇಜೋವದೆ ಮಾಡಲಾಗಿದೆ. ಪ್ರಚೋದನಕಾರಿ ಹಾಗೂ ಸಿದ್ಧರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವಂಥ ಬರಹ ಈ ಪುಸ್ತಕದಲ್ಲಿದೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಾಮರಸ್ಯ ಕದಡುವ ಕೆಲಸವಾಗಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ  ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು ಮಾಡಬೇಕು ಎಂದು ಕಾಂಗ್ರೆಸ್ ವಕ್ತಾರ  ಸೂರ್ಯ ಮುಕುಂದರಾಜ್ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

click me!