ಪೌರತ್ವ ಕಾಯ್ದೆ ರಾಜ್ಯದಲ್ಲಿ ಜಾರಿ ನಿಶ್ಚಿತ: ಬೊಮ್ಮಾಯಿ

By Kannadaprabha NewsFirst Published Dec 18, 2019, 12:26 PM IST
Highlights

ಪೌರತ್ವ ಕಾಯ್ದೆ ರಾಜ್ಯದಲ್ಲಿ ಜಾರಿ ನಿಶ್ಚಿತ: ಬೊಮ್ಮಾಯಿ| ಯಾವುದೇ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದಾಗ ರಾಜ್ಯಗಳು ಜಾರಿ ಮಾಡುವುದಿಲ್ಲ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶವಿಲ್ಲ

ಬೆಂಗಳೂರು[ಡಿ.18]: ಕರ್ನಾಟಕದಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಿಶ್ಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪೌರತ್ವ ಕಾಯ್ದೆ ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದು, ರಾಷ್ಟ್ರಪತಿ ಅಂಕಿತ ಕೂಡ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಕಾಯ್ದೆಯನ್ನು ಜಾರಿಗೊಳಿಸಬೇಕು. ಕೆಲವು ರಾಜ್ಯಗಳು ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ತಿಳಿಸಿದರು.

ಯಾವುದೇ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದಾಗ ರಾಜ್ಯಗಳು ಜಾರಿ ಮಾಡುವುದಿಲ್ಲ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಕೇವಲ ಪ್ರತಿಭಟನೆ ನಡೆಸಬಹುದೇ ಹೊರತು ಅನುಷ್ಠಾನ ಮಾಡಲು ಬರುವುದಿಲ್ಲ ಎಂದು ಹೇಳಲು ಆಗುವುದಿಲ್ಲ ಎಂದರು.

ಈಶಾನ್ಯ ರಾಜ್ಯಗಳು, ದೆಹಲಿ ಸೇರಿದಂತೆ ಮತ್ತಿತರ ಕಡೆ ಪ್ರತಿಭಟನೆ ನಡೆಸುತ್ತಿರಬಹುದು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದೆ ಅಹಿಂಸಾತ್ಮಕ ಮಾರ್ಗದಲ್ಲಿ ಪ್ರತಿರೋಧ ವ್ಯಕ್ತಪಡಿಸಲು ಅವಕಾಶವಿದೆ. ಮಮತಾ ಬ್ಯಾನರ್ಜಿ ಇರಲಿ ಅಥವಾ ಇನ್ಯಾರೇ ಇರಲಿ ಮಸೂದೆ ಅನುಷ್ಠಾನ ಮಾಡದೆ ಬೇರೆ ದಾರಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಕರ್ನಾಟಕದಲ್ಲಿ ಕಾಯ್ದೆ ಜಾರಿ ಜಾರಿ ನಿಶ್ಚಿತ. ಅಸ್ಸಾಂ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಆದಂತೆ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸವಿದೆ. ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

click me!