ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!

By Kannadaprabha NewsFirst Published Dec 18, 2019, 12:14 PM IST
Highlights

ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!| ಅಥಣಿ ಕ್ಷೇತ್ರದಲ್ಲಿ ತಡವಾಗಿ ಬೆಳಕಿಗೆ| ನೌಕರಗೆ ಸಂಕಷ್ಟ

 

ಅಥಣಿ[ಡಿ.18]: ಇತ್ತೀಚೆಗೆ ನಡೆದ ಉಪಚುನಾವಣೆಯ ಫಲಿತಾಂಶದ ದಿನ ಸರ್ಕಾರಿ ನೌಕರರೊಬ್ಬರು ಪಕ್ಷೇತರ ಅಭ್ಯರ್ಥಿಯ ಮತ ಎಣಿಕೆ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿರುವುದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಥಣಿ ತಾಲೂಕಿನ ಹಲ್ಯಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಆಸಂಗಿ ಎಂಬುವರೇ ಏಜೆಂಟ್‌ರಾಗಿದ್ದರು. ಡಿ.5ರಂದು ನಡೆದ ಉಪಚುನಾವಣೆಯಲ್ಲಿ ಅಥಣಿ ಮತಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ವಿನಾಯಕ ಪರಯ್ಯ ಮಠಪತಿ ಸ್ಪರ್ಧಿಸಿದ್ದರು. ಇವರ ಪರವಾಗಿ ಮತ ಎಣಿಕೆ ಕೇಂದ್ರಕ್ಕೆ ಏಜೆಂಟ್‌ರಾಗಿ ಭಾಗವಹಿಸಿದ್ದರು. ಡಿ.9ರಂದು ರೂಮ್‌ ನಂ.7, ಟೇಬಲ್‌ ನಂ.5ರ ಏಜೆಂಟ್‌ರಾಗಿದ್ದರು. ಇದು ಚುನಾವಣಾಧಿಕಾರಿ ನೀಡಿರುವ ದಾಖಲೆಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಹಲ್ಯಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಪ್ರವೀಣ ದಬಾಡಿ ಪ್ರತಿಕ್ರಿಯಿಸಿ, ಏಜೆಂಟ್‌ ಆಗಿದ್ದ ವ್ಯಕ್ತಿ ಸರ್ಕಾರಿ ನೌಕರ ಹೌದು. ಆತನ ವಿಚಾರಣೆ ಮಾಡಿದಾಗ ನನ್ನ ಗಮನಕ್ಕೆ ಬರದೇ ನನ್ನ ಸ್ನೇಹಿತ ನನ್ನ ಹೆಸರು ಬರೆಸಿದ್ದಾನೆ. ಅದರಲ್ಲಿ ಭಾಗವಹಿಸಿಲ್ಲ ಎಂಬ ಸಬೂಬು ನೀಡಿದ್ದಾನೆ. ಆದರೆ, ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

click me!