
ನಮ್ಮ ದೇಶ ಹಾಗೂ ರಾಜ್ಯದ ಜನರು ಚಿಕ್ಕಬಳ್ಳಾಪುರ ಕ್ಷೇತ್ರ ಎಂದಾಕ್ಷಣ ನಗುತ್ತಿದ್ದಾರೆ. ಯಾವುದೇ ಜ್ಞಾನವಿಲ್ಲದೇ, ಮಾಹಿತಿ ತಿಳಿದುಕೊಳ್ಳದೇ ಮಾತನಾಡುವುದರಿಂದ ನಮ್ಮ ಕ್ಷೇತ್ರ ನಗೆಪಾಟಲಿಗೀಡಾಗುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ ಹೆಸರೇಳದೇ, ಸಂಸದ ಡಾ.ಕೆ. ಸುಧಾಕರ್ ಕಿಡಿಕಾರಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರವಾಹ ಆಗಿರುವುದಕ್ಕೆ ಕೇಂದ್ರದಿಂದ ಏನು ಪರಿಹಾರ ಕೊಡಬೇಕೋ ಅದನ್ನು ಈಗಾಗಲೇ 2 ದಿನದ ಹಿಂದೆಯೇ ಬಿಡುಗಡೆ ಮಾಡಿದೆ. ಕೆಲವರಿಗೆ ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಜ್ಞಾನ ಮತ್ತು ಅರಿವೂ ಇರುವುದಿಲ್ಲ. ಇವರು (ಶಾಸಕ ಪ್ರದೀಪ್ ಈಶ್ವರ್) ಮಾಹಿತಿಯನ್ನು ಪಡೆದುಕೊಂಡು ಮಾತನಾಡಬೇಕು. ಜನರು ಹಾಗೂ ಮಾಧ್ಯಮಗಳ ಮುಂದೆ ಉಡಾಫೆ ಮಾತುಗಳನ್ನು ಮಾತನಾಡಬಾರದು. ಸೋಶಿಯಲ್ ಮೀಡಿಯಾ ಕಾಮೆಂಟ್ಸ್ ಅನ್ನಾದರೂ ಓದಿದರೆ ಜ್ಞಾನೋದಯ ಇವರಿಗೆ ಆಗುತ್ತದೆ. ಈ ವ್ಯಕ್ತಿಯಿಂದ ಇಡೀ ದೇಶ ಅಥವಾ ರಾಜ್ಯದಲ್ಲಿ ನಮ್ಮ ಕ್ಷೇತ್ರ (ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ) ನಗೆಪಾಟಲಿಗೀಡಾಗುತ್ತಿದೆ. ಎಲ್ಲರೂ ನನ್ನನ್ನು ಪ್ರಶ್ನೆ ಮಾಡಿ ನಗಾಡುತ್ತಾರೆ ಎಂದರು.
ಕೇಂದ್ರ ಸರ್ಕಾರ ಯಾರದ್ದೋ ಮಾತನ್ನು ಕೇಳಿ ಕಲಿಯುವಂಥದ್ದು ಏನೂ ಇಲ್ಲ. ನರೇಂದ್ರ ಮೋದಿಯವರು ಇಡೀ ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡೇ ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆ ತಕ್ಕಂತಹ ಯೋಜನೆಯನ್ನು ಮಾಡುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂದು ಅನುದಾನ ಕೊಡುವುದರಲ್ಲಿ ತಾರತಮ್ಯವನ್ನು ಮಾಡಿಲ್ಲ. ರೈಲ್ವೆ ಯೋಜನೆಗಳಿಗೆ ಯುಪಿಎ ಸರ್ಕಾರದಲ್ಲಿ, ಬಿಜೆಪಿ ಸರ್ಕಾರ ಏನು ಕೊಟ್ಟಿದೆ ಎಂದು ತಿಳಿದುಕೊಳ್ಳಲಿ ಎಂದರು.
ಆರ್‌ಎಸ್‌ಎಸ್ ಅವರು ದೇವಲೋಕದಿಂದ ಬಂದಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ. ದಿನೇಶ್ ಗುಂಡೂರಾವ್ ಅವರು, ಕಾಂಗ್ರೆಸ್ ನವರು ದೇವಲೋಕದಲ್ಲಿ ಎರಡು-ಮೂರು ಲೋಕ ಇರಬಹುದು. ಅಲ್ಲಿಂದ ಇವರು ಇಳಿದು ಬಂದಿರಬಹುದು. ಕ್ಷುಲ್ಲಕ ಮತ್ತು ಉಡಾಫೆ ಮಾತುಗಳನ್ನು ಹೇಳುವುದನ್ನು ನಿಲ್ಲಿಸಬೇಕು. ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸುವ ಕೆಲಸ ಮಾಡಬಾರದು. ದೇಶಕ್ಕೆ ಪಣತೊಟ್ಟು ಅವರ ಜೀವನವನ್ನೇ ಸಮರ್ಪಣೆ ಮಾಡಿ ಸೇವೆ ಮಾಡುವ ಆರ್‌ಎಸ್‌ಎಸ್ ಸಂಘಟನೆ ಸದಸ್ಯರನ್ನು ನೋಯಿಸುವುದರಿಂದ ನಿಮಗೆ ಏನು ಸಿಗುತ್ತದೆ. ಜಾತಿ ಸಮೀಕ್ಷೆ, ಧರ್ಮಸ್ಥಳ, ಆರ್‌ಎಸ್‌ಎಸ್ ಹಾಗೂ ವೀರಶೈವ-ಲಿಂಗಾಯತ ಸಮುದಾಯ ಎಲ್ಲವುಗಳನ್ನೂ ವಿರೋಧ ಮಾಡುತ್ತಾ ಕೇವಲ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಕಂಪನಿಗಳು ಬರೋದು ಇರಲಿ ಇರೋದನ್ನ ಉಳಿಸ್ಕೊಳ್ಳೋದು ಕಷ್ಟಪಡುತ್ತಿದ್ದಾರೆ. ರಾಜ್ಯದಲ್ಲಿ ಉದ್ಯಮಿಗಳಿಗೆ ಯಾವ ರೀತಿ ಆಮಂತ್ರಣ ಕೊಡ್ತಿದ್ದಾರೆ, ಬಂದವರಿಗೆ ಸರೊಯಾಗಿ ಸೌಲಭ್ಯಗಳನ್ನು ಕೊಡುತ್ತಿಲ್ಲ. ಎಸ್.ಎಂ. ಕೃಷ್ಣ ಅವರ ದೂರದೃಷ್ಟಿಯಿಂದ ಬೆಂಗಳೂರು ಹಾಗೂ ಕರ್ನಾಟಕ ಬೆಳೆದಿದೆ. ಕೆಂಪೇಗೌಡರು ಹಾಗೂ ನಾಲ್ವಡಿ ಕೃಷ್ಣರಾಜರ ಹಾದಿಯಾಗಿ , ದೇವೇಗೌಡರು ಹಾಗೂ ಕೃಷ್ಣ ಅವರ ದೂರದೃಷ್ಟಿಯಿಂದ ಈಗಲೂ ಉದ್ಯಮಿಗಳು ಬರುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಉದ್ಯಮ ಬೆಳೆಯುವುದಕ್ಕೆ ಹಿಂದಿನ ಇಕೋ ಸಿಸ್ಟಂ ನೋಡಿ ಬರುತ್ತಿದ್ದಾರೆ. ಆದರೆ, ಈ ಸರ್ಕಾರದ ಹೊಸ ವ್ಯವಸ್ಥೆಗಳನ್ನು ನೋಡಿ ಯಾರೂ ಬರುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.