ರಾಜ್ಯ ಸರ್ಕಾರಕ್ಕೆ ಯಾವುದೇ ಚುನಾವಣೆ ಬೇಕಿಲ್ಲ, ಲೋಕಸಭೆ ಫಲಿತಾಂಶದಿಂದ ಬೆದರಿದ ಕಾಂಗ್ರೆಸ್: ಸುಧಾಕರ್‌

By Kannadaprabha News  |  First Published Aug 15, 2024, 9:59 AM IST

ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಚುನಾವಣೆ ಬೇಕಿಲ್ಲ. ಲೋಕಸಭೆ ಚುನಾವಣಾ ಫಲಿತಾಂಶದಿಂದ ಭಯಭೀತಗೊಂಡು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿದ್ದಾರೆ. ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶದಿಂದ ಅದನ್ನು ವಿಭಜನೆ ಮಾಡಲಾಗಿದೆ: ಸಂಸದ ಡಾ.ಕೆ.ಸುಧಾಕರ್‌ 


ಚಿಕ್ಕಬಳ್ಳಾಪುರ(ಆ.15):  ರಾಜ್ಯ ಕಾಂಗ್ರೆಸ್‌ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಜೊತೆಗೆ ಸರ್ಕಾರ ಚಿಕ್ಕಬಳ್ಳಾಪುರ ನಗರಸಭಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ- ಮಹಿಳೆಗೆ ಮೀಸಲಿಡದೇ ವಂಚಿಸಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಪೆರೇಸಂದ್ರದ ತಮ್ಮ ಸ್ವಗೃಹದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಚುನಾವಣೆ ಬೇಕಿಲ್ಲ. ಲೋಕಸಭೆ ಚುನಾವಣಾ ಫಲಿತಾಂಶದಿಂದ ಭಯಭೀತಗೊಂಡು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿದ್ದಾರೆ. ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶದಿಂದ ಅದನ್ನು ವಿಭಜನೆ ಮಾಡಲಾಗಿದೆ. ನಗರಸಭಾ ಸದಸ್ಯರಿಂದ ಅಧಿಕಾರ ಮೊಟಕಾಗುವ ಆತಂಕದಿಂದ ಶಾಸಕರು ಹೀಗೆ ಮಾಡಿರಬಹುದು. ಆದರೆ ಇದು ಸಂವಿಧಾನಕ್ಕೆ ಅಪಚಾರವೆಸಗುವ ಕೆಲಸ. ಸ್ಥಳೀಯ ಆಡಳಿತದಲ್ಲಿ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಯಬೇಕಿದ್ದರೂ, ಆ ವ್ಯವಸ್ಥೆಗೆ ವಿರುದ್ಧವಾಗಿ ಕಾಂಗ್ರೆಸ್‌ ಸರ್ಕಾರ ವರ್ತಿಸುತ್ತಿದೆ ಎಂದು ದೂರಿದರು.

Latest Videos

undefined

ಪ್ರವಾಸಿ ತಾಣವಾಗಿ ಇತಿಹಾಸ ಪ್ರಸಿದ್ದ ತಲಕಾಯಲಬೆಟ್ಟ: ಸಚಿವ ಮುನಿಯಪ್ಪ ಭರವಸೆ

ಚಿಕ್ಕಬಳ್ಳಾಪುರ ನಗರಸಭಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲು ಬಂದಿದೆ. ಆದರೆ 30 ವರ್ಷಗಳಿಂದ ಪರಿಶಿಷ್ಟ ಜಾತಿ- ಮಹಿಳೆಗೆ ಈವರೆಗೆ ಅವಕಾಶ ಸಿಕ್ಕಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ, ಅಹಿಂದ ಬಗ್ಗೆ ಕಾಂಗ್ರೆಸ್‌ ಮಾತಾಡುತ್ತದೆ. ಕಾಂಗ್ರೆಸ್‌ ನಾಯಕರು ಬಾಬಾ ಸಾಹೇಬ್‌ ಅಂಬೇಡ್ಕರ್‌ ಬಗ್ಗೆ ಮಾತಾಡುತ್ತಾರೆ. ನಗರಾಭಿವೃದ್ಧಿ ಇಲಾಖೆಯ ಕರಡಿನಲ್ಲಿದ್ದುದನ್ನು ಬದಲಿಸಿ ಹುನ್ನಾರ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಬೆಂಬಲಿತ ಅಭ್ಯರ್ಥಿಗೆ ಎಲ್ಲರೂ ಬೆಂಬಲಿಸಬೇಕು. ಚಿಕ್ಕಬಳ್ಳಾಪುರದಲ್ಲಿ ಯಾವುದೇ ಆಭಿವೃದ್ಧಿ ಕಾರ್ಯ ನಡೆದಿಲ್ಲ. ಅಭಿವೃದ್ಧಿಗೆ ಎಲ್ಲರೂ ಮತ ನೀಡುತ್ತಾರೆ ಎಂದರು.

ಜನವಿರೋಧಿ ಕ್ರಮ:

ಪ್ರಧಾನ ಮಂತ್ರಿ ಜನ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಬಂಧ ಮಾಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ಹೇಳಿರುವುದು ಜನ ವಿರೋಧಿ ನಿಲುವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ 1 ಸಾವಿರಕ್ಕೂ ಅಧಿಕ ಕೇಂದ್ರಗಳನ್ನು ಆರಂಭಿಸಲು ಕ್ರಮ ವಹಿಸಿದ್ದೆ. ಬಿಪಿ, ಶುಗರ್‌ ರೋಗಿಗಳಿರುವ ಕುಟುಂಬಕ್ಕೆ 3-4 ಸಾವಿರ ರು. ಉಳಿತಾಯವಾಗುತ್ತಿದೆ. ಅಂತಹ ಮಳಿಗೆ ಮುಚ್ಚುವುದು ಬಡವರ ವಿರೋಧಿ ನಿಲುವು. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಆಸ್ಪತ್ರೆಗಳಲ್ಲಿ ಇನ್ನೂ ಎರಡು ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು.

ನೀರಿನ ಸಮಸ್ಯೆ ಬಗ್ಗೆ ಚರ್ಚೆ:

ಬಯಲುಸೀಮೆಗೆ ಕಾವೇರಿ ನೀರು ಸಿಗುವುದಿಲ್ಲ. ಬೇರೆ ನೀರಾವರಿ ಯೋಜನೆಗಳಲ್ಲೂ ಈ ಪ್ರದೇಶದ ಜನರಿಗೆ ನೀರು ಸಿಕ್ಕಿಲ್ಲ. ಇಲ್ಲಿನ ಜನರು ಇದೇ ರಾಜ್ಯದಲ್ಲಿದ್ದಾರೆ. ಕೃಷ್ಣಾ ನದಿಯಿಂದ 5-10 ಟಿಎಂಸಿ ನೀರು ಪಡೆದು, ಉಳಿದ ನೀರನ್ನು ನಾರಾಯಣಪುರ ಜಲಾಶಯದಿಂದ ಆಂಧ್ರಕ್ಕೆ ಹರಿಸಿದರೆ ಸಹಾಯಕವಾಗಲಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಿದೆ. ಬೇರೆ ನೀರಾವರಿ ಯೋಜನೆಗಳ ಶೇ.10 ರಷ್ಟನ್ನು ಇಲ್ಲಿಗೆ ಖರ್ಚು ಮಾಡಿದರೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರಕ್ಕೆ ನೀರು ಸಿಗಲಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಧಾರಾಕಾರ ಮಳೆಯಿಂದಾಗಿ ಹೂ ಬೆಳೆಗಾರರಿಗೆ ನಷ್ಟವಾಗಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ 14 ಸಾವಿರ ರು. ವಿಮೆ ಯೋಜನೆ ತಂದಿದೆ. ಬೆಳೆಗಾರರಿಗೆ ಈ ಬಗ್ಗೆ ಸರಿಯಾಗಿ ಮಾಹಿತಿ ತಲುಪಬೇಕು ಎಂದರು.

ಶ್ರಾವಣ ಮಾಸದಲ್ಲಿ ದೇಶದಲ್ಲಿ ಅವಗಢ ಜಾಸ್ತಿ, ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಸರ್ಕಾರವು ಜಿಲ್ಲೆಯಲ್ಲಿ ಗೋಮಾಳ ಜಮೀನನ್ನು ತಮ್ಮ ಹಿಂಬಾಲಕರಿಗೆ ನೀಡುತ್ತಿದೆ. ನಂದಿ ಗ್ರಾಮದ ಭಾಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸಲಾಗುತ್ತಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳಿ ಈ ರೀತಿ ಮಾಡಿದರೆ ಕಂಬಿ ಎಣಿಸಬೇಕಾಗುತ್ತದೆ. ಜಂಗಮಕೋಟೆಯಲ್ಲಿ ಫಲವತ್ತಾದ ಭೂಮಿ ಇದ್ದು, ಅಲ್ಲಿ ಕೈಗಾರಿಕೆ ಮಾಡಲು ಸಾಧ್ಯವಿಲ್ಲ. ಮಂಚೇನಹಳ್ಳಿಯಲ್ಲಿ 2 ಸಾವಿರ ಎಕರೆ ಭೂಮಿ ನಿಗದಿ ಮಾಡಿದ್ದು, ಅಲ್ಲಿ ಕೈಗಾರಿಕೆ ಮಾಡುತ್ತಿಲ್ಲ. ಫಲವತ್ತಾದ ಭೂಮಿಯಲ್ಲಿ ಏಕೆ ಕೈಗಾರಿಕೆ ಮಾಡಬೇಕು? ಇದು ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಸತ್ಯ ಹರಿಶ್ಚಂದ್ರನಂತೆ ವರ್ತಿಸುತ್ತಿದ್ದಾರೆ. ಭೂ ಸ್ವಾಧೀನ ಎಂದರೆ ಹಣ ಮಾಡುವ ಹೊಸ ವಿಧಾನವಾಗಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಶಿವಾನಂದ್, ಕೆವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಹಾಗೂ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ,ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಮುನಿಕೃಷ್ಣ, ಮತ್ತಿತರರು ಇದ್ದರು.

click me!