
ಬೆಂಗಳೂರು (ಆ.8) : ಸಚಿವರ ಬಗ್ಗೆ ಸ್ವಪಕ್ಷೀಯ ಶಾಸಕರ ಅಸಮಾಧಾನ ಶಮನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾವಾರು ಶಾಸಕರ ಅಹವಾಲು ಆಲಿಕೆ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಿದ್ದು, ಮೊದಲ ದಿನ ಅನುದಾನ ಕೊರತೆ ಹಾಗೂ ವರ್ಗಾವಣೆ ಸಮಸ್ಯೆಗಳ ಕುರಿತ ಶಾಸಕರ ಧ್ವನಿಗೆ ಕಿವಿಯಾದರು.
ಜತೆಗೆ, ಶಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ಎರಡು ಸ್ತರದ ಪರಿಹಾರೋಪಾಯ ಸೂಚಿಸಿದ್ದು, ಯಾವುದೇ ಸಮಸ್ಯೆಯಿದ್ದರೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಬೇಕು. ಉಸ್ತುವಾರಿ ಸಚಿವರಿಂದಲೂ ಸಮಸ್ಯೆ ಬಗೆಹರಿಯದಿದ್ದರೆ ಆಗ ಈ ವಿಚಾರವನ್ನು ಖುದ್ದಾಗಿ ತಮ್ಮ (ಮುಖ್ಯಮಂತ್ರಿಯವರ) ಬಳಿಗೆ ತರಬೇಕು ಎಂದು ಹೇಳಿದ್ದಾರೆ.
ಅಲ್ಲದೆ, ಶಾಸಕರ ಅಹವಾಲುಗಳಿಗೆ ಕಿವಿಯಾಗಬೇಕು ಹಾಗೂ ಅವರ ಸಮಸ್ಯೆ ಆಲಿಸಲು ಸಮಯ ನೀಡಬೇಕು ಎಂದು ಉಸ್ತುವಾರಿ ಸಚಿವರಿಗೂ ತಾಕೀತು ಮಾಡಿದ್ದು, ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು ಎಂದು ಶಾಸಕರಿಗೆ ಕಿವಿ ಮಾತು ಹೇಳಿದರು ಎಂದು ತಿಳಿದುಬಂದಿದೆ.
ಅವಕಾಶ ಸಿಕ್ಕರೆ ಪುತ್ರ ಸುನಿಲ್ ಚಾ.ನಗರದಿಂದ ಸ್ಪರ್ಧೆ: ಸಚಿವ ಮಹದೇವಪ್ಪ
ಮ್ಯಾರಥಾನ್ ಸಭೆ:
ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆದ ಮ್ಯಾರಥಾನ್ ಸಭೆಗಳಲ್ಲಿ ಆರು ಜಿಲ್ಲೆಗಳ ಶಾಸಕರು ಹಾಗೂ ಸಚಿವರ ಬಳಿ ಕ್ಷೇತ್ರದ ಸ್ಥಳೀಯ ಸಮಸ್ಯೆಗಳು, ಸರ್ಕಾರದ ಹಂತದಲ್ಲಿನ ಬೇಡಿಕೆಗಳು ಹಾಗೂ ಅನುದಾನ, ವರ್ಗಾವಣೆಯಂತಹ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.
ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದಿದ್ದರೆ ಜನರನ್ನು ಓಲೈಸಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಬಹು ವರ್ಷಗಳ ಬೇಡಿಕೆಗಳನ್ನು ಈಡೇರಿಸಲು ಅನುದಾನ ಕೊರತೆಯಿದೆ. ಹೀಗಾದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ ಧೈರ್ಯವಾಗಿ ಮತ ಕೇಳಲೂ ಕಷ್ಟವಾಗುತ್ತದೆ. ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿದ್ದರೂ, ಕ್ಷೇತ್ರಗಳಲ್ಲಿ ಕೆಲಸಗಳಾದರೆ ಮಾತ್ರ ಶಾಸಕರಿಗೆ ಬೆಲೆ. ಸಾರ್ವಜನಿಕರು ನೀಡುವ ಮನವಿ ಪತ್ರಗಳನ್ನು ಸ್ವೀಕರಿಸಲು ಸಹ ಭಯವಾಗುವ ಮಟ್ಟಿಗೆ ಅನುದಾನ ಕೊರತೆ ಇದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಎಲ್ಲಾ ಕ್ಷೇತ್ರಗಳ ಶಾಸಕರೂ ಒತ್ತಾಯಿಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರ ಎಲ್ಲಾ ಸಮಸ್ಯೆಗಳನ್ನೂ ಆದ್ಯತೆ ಮೇರೆಗೆ ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಪಕ್ಷದಿಂದ 136 ಮಂದಿ ಶಾಸಕರು ಗೆದ್ದಿದ್ದಾರೆ. ಜತೆಗೆ ಐದು ಗ್ಯಾರಂಟಿ ಯೋಜನೆಗಳು ಹಾಗೂ ಹಿಂದಿನ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಬಜೆಟ್‌ನಲ್ಲಿ ಯೋಜನಾ ವೆಚ್ಚ ಕುಸಿದಿದೆ. ಹೀಗಾಗಿ ಕ್ಷೇತ್ರಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ನೀಡಲಾಗಿಲ್ಲ. ಮುಂದಿನ ವರ್ಷದಿಂದ ಹೆಚ್ಚು ಅನುದಾನ ಲಭ್ಯವಾಗಲಿದೆ ಎಂದು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
ಉಸ್ತುವಾರಿ ಸಚಿವರಿಗೆ ಹೊಣೆ:
ಇನ್ನು ವರ್ಗಾವಣೆ ಸೇರಿದಂತೆ ಯಾವುದೇ ರೀತಿಯ ಕ್ಷೇತ್ರದ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸುವುದು ಉಸ್ತುವಾರಿ ಸಚಿವರ ಹೊಣೆ. ಶಾಸಕರು ಉಸ್ತುವಾರಿ ಸಚಿವರಿಗೆ ತಮ್ಮ ಅಹವಾಲು ನೀಡಬೇಕು. ಅವರು ಈಡೇರಿಸದಿದ್ದರೆ ಮಾತ್ರ ಮುಖ್ಯಮಂತ್ರಿಗಳ ಬಳಿ ಬರಬೇಕು. ಅದನ್ನು ಬಿಟ್ಟು ಬಹಿರಂಗ ಅಸಮಾಧಾನ ವ್ಯಕ್ತಪಡಿಸುವುದು ಅಥವಾ ಬಹಿರಂಗಪತ್ರ ಬರೆಯುವಂತಹ ಅಶಿಸ್ತು ಪ್ರದರ್ಶನ ಮಾಡಬಾರದು. ಇದು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಎರಡಕ್ಕೂ ಕೆಟ್ಟಹೆಸರು ತರಲಿದ್ದು, ಲೋಕಸಭೆ ಚುನಾವಣೆ ಹತ್ತಿರವಿರುವಾಗ ಪ್ರತಿಪಕ್ಷಗಳಿಗೆ ನಾವೇ ಆಹಾರ ನೀಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಸ್ಪಷ್ಟಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವಾರ ಚರ್ಚೆ- ಡಿಕೆಶಿ:
ಸಭೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕರ ಅಹವಾಲುಗಳನ್ನು ಆಲಿಸಿದ್ದೇವೆ. ಇದರ ಜತೆಗೆ ನಮ್ಮ ಸರ್ಕಾರದ ಕಾರ್ಯಕ್ರಮಗಳ ಜಾರಿ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸತತವಾಗಿ ಒಂದು ವಾರ ಈ ರೀತಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಶಾಸಕರ ಜತೆಗೂ ಸಭೆ ಮಾಡಬಹುದಿತ್ತು ಎಂಬ ಬಿಜೆಪಿ ಹೇಳಿಕೆಗೆ, ನಾವು ಅವರ ಪಕ್ಷದ ಶಾಸಕರ ಜತೆಗೂ ಸಭೆ ಮಾಡುತ್ತೇವೆ. ಅವರ ಜತೆ ಸಭೆ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಿಗೆ ಕೊಟ್ಟಮಾತಿನಂತೆ ಸಭೆ ಮಾಡುತ್ತಿದ್ದೇವೆ. ಎಲ್ಲರನ್ನೂ ಒಟ್ಟಿಗೆ ಕರೆದು ಜಗಳಕ್ಕೆ ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಬೆಂಗಳೂರಿನ ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಎಷ್ಟುಬಾಕಿ ಇದೆ? ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಎಷ್ಟುಬಾಕಿ ಇದೆ ಎಂಬುದು ಗೊತ್ತಿಲ್ಲವೇ? ಹೀಗಾಗಿ ಮೊದಲು ನಮ್ಮ ಪಕ್ಷದ ಶಾಸಕರ ಅಹವಾಲು ಆಲಿಸುತ್ತೇವೆ ಎಂದು ತಿಳಿಸಿದರು.
7 ತಿಂಗಳಿಗೆ ಆಗುವಷ್ಟುಅನುದಾನ:
ಸಭೆ ಬಳಿಕ ಮಾತನಾಡಿದ ಚಿತ್ರದುರ್ಗ ಉಸ್ತುವಾರಿ ಸಚಿವ ಡಿ.ಸುಧಾಕರ್, ನಮ್ಮ ಚಿತ್ರದುರ್ಗದಲ್ಲಿ ಶಾಸಕರು ಹಾಗೂ ಸಚಿವರ ನಡುವೆ ಯಾವುದೇ ಸಮಸ್ಯೆಯಿಲ್ಲ. ಅನುದಾನ ವಿಚಾರದಲ್ಲಿ ತುಸು ಬೇಡಿಕೆ ಇದೆ. ಆದರೆ ಪ್ರಸಕ್ತ ಬಜೆಟ್‌ನಲ್ಲಿ ಏಳು ತಿಂಗಳಿಗೆ ಅಗತ್ಯವಿರುವಷ್ಟುಅನುದಾನ ನೀಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಪೂರ್ಣ ಆರ್ಥಿಕ ವರ್ಷಕ್ಕೆ ಅಗತ್ಯವಿರುವಷ್ಟುಅನುದಾನ ನೀಡಲಿದ್ದಾರೆ. ಹೀಗಾಗಿ ಹೆಚ್ಚು ಅನುದಾನ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ
ಸಭೆ ಯಶಸ್ವಿಯಾಗಿದೆ:
ಕುಣಿಗಲ್ ಶಾಸಕ ರಂಗನಾಥ್ ಮಾತನಾಡಿ, ಶಾಸಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸುವುದು ವಿನೂತನ ಪ್ರಯತ್ನ. ಸಭೆ ಫಲಪ್ರದವಾಗಿದೆ. ಕ್ಷೇತ್ರ ಹಾಗೂ ಸರ್ಕಾರದ ಮಟ್ಟದಲ್ಲಿ ನಮಗೆ ಆಗಿರುವ ಸಮಸ್ಯೆ, ಅನಾನುಕೂಲಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅವುಗಳನ್ನು ಬಗೆಹರಿಸುವ ಬಗ್ಗೆ ಭರವಸೆ ದೊರೆತಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.