ಮಲೆನಾಡು ಭಾಗದ ಅಡಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿ​ದರು.

ಸಾಗರ (ಆ.07): ಮಲೆನಾಡು ಭಾಗದ ಅಡಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿ​ದರು. ಪಟ್ಟ​ಣದ ಪ್ರತಿಷ್ಠಿತ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ‘ಚಿನ್ನದ ಹೆಜ್ಜೆ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವ​ರು, ಅಡಕೆಗೆ ಎಲೆಚುಕ್ಕೆ ರೋಗ, ಹಳದಿ ಎಲೆರೋಗ ಶಾಪವಾಗಿ ಪರಿಣಮಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಔಷಧ ಕಂಡುಹಿಡಿಯುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಾಗಿದೆ ಎಂದರು. 

ತಾವು ಅಡಕೆ ಬೆಳೆಗಾರರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ ರೈತರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಾಜ್ಯದ ಅಡ್ವೋಕೇಟ್‌ ಜನರಲ್‌ ಜೊತೆ ಚರ್ಚೆ ನಡೆಸಲಾಗಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ತನ್ನ ಅಧಿಕಾರವಧಿಯಲ್ಲಿ ರೈತರ ಪರ ಕೆಲಸ ಮಾಡಲಿದೆ ಎಂದು ಹೇಳಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಸಂಸ್ಥೆ ನೂತನ ಆಡಳಿತ ಕಚೇರಿ ಉದ್ಘಾ​ಟಿ​ಸಿ ಮಾತ​ನಾಡಿ, ವಿದೇಶದಿಂದ ಆಮದಾಗುತ್ತಿರುವ ಅಡಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು. 

ಗ್ಯಾರಂಟಿ ಯೋಜನೆಗಳ ಜಾರಿಯಿಂದ ಬಿಜೆಪಿಗರಲ್ಲಿ ಹತಾಶೆ: ಸಚಿವ ಮಧು ಬಂಗಾರಪ್ಪ

ಅಂತರ ರಾಷ್ಟ್ರೀಯ ಒಪ್ಪಂದವನ್ನು ಬದಿಗಿಟ್ಟು ಅಡಕೆ ಬೆಳೆಗಾರರ ಹಿತದ ಬಗ್ಗೆ ಗಮನ ಹರಿಸಬೇಕು. ಅಡಕೆ ಬೆಳೆಗಾರರಿಗೆ ಶಾಪವಾಗಿರುವ ಎಲೆಚುಕ್ಕೆ ರೋಗ ಸೇರಿದಂತೆ ಬೇರೆಬೇರೆ ಸಮಸ್ಯೆ ಬಗೆಹರಿಸಲು ವಿಜ್ಞಾನಿಗಳ ಜೊತೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಬೆಳೆಗಾರರಿಗೆ ಔಷಧಿಯನ್ನು ಸಬ್ಸಿಡಿ ದರದಲ್ಲಿ ವಿತರಿಸುವ ವ್ಯವಸ್ಥೆ ಆಗಬೇಕು. ರೈತರು ಗಟ್ಟಿಯಾಗಬೇಕೆಂದರೆ ಸರ್ಕಾರದ ಬೆಂಬಲ ಬೇಕು. ರಾಜ್ಯದ ಕಾಂಗ್ರೆಸ್‌ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಬಿ.ಸ್ವಾಮಿರಾವ್‌, ಪ್ರಮುಖರಾದ ಷಡಾಕ್ಷರಿ ಎಚ್‌.ಎಲ್‌., ಕಿಶೋರ್‌ ಕುಮಾರ್‌ ಕೊಡಗಿ, ಎಚ್‌.ಎಸ್‌.ಮಂಜಪ್ಪ, ಆರ್‌.ಎಂ.ಮಂಜುನಾಥ ಗೌಡ, ಬಿ.ಆರ್‌.ಜಯಂತ್‌, ಹರನಾಥ ರಾವ್‌, ವ.ಶಂ.ರಾಮಚಂದ್ರ ಭಟ್‌, ಮಧುಕರ ಹೆಗಡೆ, ಕೆ.ಬಸವರಾಜ್‌, ಎಂ.ವಿ.ಮೋಹನ್‌, ಜಿ.ವಾಸುದೇವ, ಮಂಜುನಾಥ ಬಿ., ರವಿಕುಮಾರ್‌, ಮಹೇಶ್ವರಪ್ಪ ಇನ್ನಿತರರು ಹಾಜರಿದ್ದರು.

ನಾನು ಖಂಡ್ರೆ ಹೇಳುವ ಬದಲು ಖರ್ಗೆ ಹೇಳಿದ್ದೇನೆ: ಅವಹೇಳನಕಾರಿ ಹೇಳಿಕೆಗೆ ಆರಗ ಪ್ರತಿಕ್ರಿಯೆ!

ಅಡಕೆ ಬೆಳೆಗಾರರಿಗೆ ಆತ್ಮಗೌರವ ತಂದುಕೊಟ್ಟ ಸಂಸ್ಥೆ: ಸಂಸ್ಥೆಯ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, 1973ರಲ್ಲಿ ಮಲೆನಾಡಿನ ಅಡಕೆ ಬೆಳೆಗಾರರ ಸ್ಥಿತಿ ಶೋಚನೀಯವಾಗಿತ್ತು. ಅಡಕೆಗೆ ಈಗಿನ 1 ಕೆ.ಜಿ.ಯ ದರ ಆಗ 1 ಕ್ವಿಂಟಲ್‌ ಅಡ​ಕೆಗೆ ಇತ್ತು. ಅಡಕೆ ಮಾರುಕಟ್ಟೆ ಖಾಸಗಿ ಮಂಡಿಗಳ ಕಪಿಮುಷ್ಠಿಯಲ್ಲಿ ನಲುಗಿಹೋಗಿತ್ತು. ಬೆಳೆಗಾರರು ತಮಗೆ ಬರಬೇಕಾದ ಹಣವನ್ನು ಅಥವಾ ಸಾಲವನ್ನು ಮಂಡಿ ಮಾಲೀಕರ ಮುಂದೆ ನಿಂತುಕೊಂಡು, ಕೈಮುಗಿದು ಕೇಳಿಕೊಳ್ಳಬೇಕಾದ ದಯನೀಯ ಪರಿಸ್ಥಿತಿ ಇತ್ತು. ಇಂಥ ವಿಷಮ ಪರಿಸ್ಥಿತಿಯಲ್ಲಿ ಎಲ್‌.ಟಿ.ಹೆಗಡೆ, ಯು. ಮಹಾಬಲ ರಾವ್‌ ಮುಂತಾದವರ ನೇತೃತ್ವದಲ್ಲಿ ಆಫ್ಸ್‌ಕೋಸ್‌ ಸಂಸ್ಥೆ ಪ್ರಾರಂಭವಾಯಿತು. ಸಂಸ್ಥೆ ಅಡಕೆ ಬೆಳೆಗಾರರಿಗೆ ಆತ್ಮಗೌರವ ತಂದುಕೊಟ್ಟಿದ್ದಲ್ಲದೇ, ಬೆಳೆಗಾರರ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾಯಿತು. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿ, ಅಡಕೆ ಬೆಳೆಗಾರರ ಬದುಕನ್ನು ಎತ್ತಿಹಿಡಿಯುವ ಕೆಲಸ ಮಾಡಿತು ಎಂದು ನೆನಪಿಸಿಕೊಂಡರು.