
ಚನ್ನಪಟ್ಟಣ(ಮಾ.26): ''ಮಂಡ್ಯಕ್ಕೆ ಹೋಗ್ಬೇಡಿ...ಚನ್ನಪಟ್ಟಣ ಬಿಡಬೇಡಿ...ಮತ್ತೊಮ್ಮೆ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಬೇಡಿ'' ಎಂಬ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರ ಮಾತುಗಳು ಮಾಜಿ ಮುಖ್ಯಮಂತ್ರಿ ಅವರನ್ನು ಮತ್ತೆ ಅಡಕತ್ತರಿಯಲ್ಲಿ ಸಿಲುಕಿಸಿದೆ.
ಮಂಡ್ಯ ಅಭ್ಯರ್ಥಿ ಘೋಷಣೆ ವಿಳಂಬದ ಹಿಂದೆ ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಒತ್ತಡವೇ ನಿರ್ಣಾಯಕ ಎಂಬ ಮಾತುಗಳು ಜೆಡಿಎಸ್ ಪಾಳಯದಿಂದ ಕೇಳಿಬರುತ್ತಿದೆ. ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯಬಾರದು. ಕುಮಾರಸ್ವಾಮಿ ಮಾತ್ರವಲ್ಲದೆ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೂ ಮತ್ತೊಮ್ಮೆ ಮುಖಭಂಗ ಎದುರಿಸಬೇಕಾಗುತ್ತದೆ ಎಂಬ ಕಿವಿಮಾತುಗಳನ್ನು ಚನ್ನಪಟ್ಟಣದ ಜನ ಗೌಡರ ಕುಟುಂಬಕ್ಕೆ ತಲುಪಿಸಿದ್ದಾರೆ. ಕಳೆದ ವಾರ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರದಲ್ಲಿ ನಡೆಸಿದ ಸಭೆಯಲ್ಲೂ ಈ ಮಾತುಗಳು ಕೇಳಿಬಂದಿದ್ದರಿಂದ ಮಂಡ್ಯ ಲೋಕಸಭಾ ಅಭ್ಯರ್ಥಿ ಘೋಷಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆ 2024: ಕುಮಾರಸ್ವಾಮಿಗಾಗಿ ಮಂಡ್ಯ, ಚನ್ನಪಟ್ಟಣ ಜಟಾಪಟಿ..!
ಒತ್ತಡದಲ್ಲಿ ಎಚ್ಡಿಕೆ:
ಮಂಡ್ಯ ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಆಗುವಂತೆ ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕುತ್ತಿದ್ದರೆ, ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರಿಂದ ಕೇಳಿಬರುತ್ತಿರುವ ಕ್ಷೇತ್ರ ಬಿಡಬೇಡಿ ಎಂಬ ಕೂಗು ಕುಮಾರಸ್ವಾಮಿ ಅವರನ್ನು ಗೊಂದಲದಲ್ಲಿ ಸಿಲುಕಿಸಿದೆ. ಒಂದು ವೇಳೆ ಚನ್ನಪಟ್ಟಣ ಕಾರ್ಯಕರ್ತರ ಮಾತು ಧಿಕ್ಕರಿಸಿ ಮಂಡ್ಯ ಅಖಾಡಕ್ಕೆ ಧುಮುಕಿದರೆ ಆಗುವ ಪರಿಣಾಮಗಳ ಕುರಿತು ಕುಮಾರಸ್ವಾಮಿ ತೀವ್ರ ಚಿಂತಿತರಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋತರೆ ಚನ್ನಪಟ್ಟಣ ಜನತೆ ಮುಂದೆ ಹೋಗುವುದು ಹೇಗೆ? ಗೆದ್ದರೂ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಗೆಲುವು ಸಾಧಿಸುವುದು ಸುಲಭವೂ ಅಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಪದೇ ಪದೆ ಕ್ಷೇತ್ರ ಬದಲಿಸಿ ಕಾರ್ಯಕರ್ತರನ್ನು ನಡುನೀರಿನಲ್ಲಿ ಬಿಟ್ಡು ಹೋಗಲಿದ್ದಾರೆ ಎಂಬ ಅಸಹನೆಯಿಂದ ಕಾರ್ಯಕರ್ತರು, ಮುಖಂಡರು ಅನ್ಯ ಪಕ್ಷದತ್ತ ಮುಖಮಾಡಿದರೆ ಜೆಡಿಎಸ್ ಭದ್ರಕೋಟೆಯಾದ ಚನ್ನಪಟ್ಟಣ ಅನ್ಯಪಕ್ಷದ ಪಾಲಾಗಬಹುದು ಎಂಬ ಆತಂಕ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ.
ಎಚ್‌ಡಿಕೆ ಚನ್ನಪಟ್ಟಣ ಬಿಡಬಾರ್ದು: ನಿಖಿಲ್ ಕುಮಾರಸ್ವಾಮಿಗೆ ಕಾರ್ಯಕರ್ತರ ಮುತ್ತಿಗೆ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಆದರೆ ಮದ್ದೂರು, ಮಳವಳ್ಳಿ ಭಾಗದ ಒಕ್ಕಲಿಗರು ಕುಮಾರಸ್ವಾಮಿ ಅವರ ಸ್ಪರ್ಧೆಗೆ ಸಹಮತ ವ್ಯಕ್ತಪಡಿಸುತ್ತಿಲ್ಲ ಎನ್ನಲಾಗುತ್ತಿದೆ. ಆಪ್ತ ಬಳಗದವರು ಮಾತ್ರ ಕುಮಾರಸ್ವಾಮಿ ಅಭ್ಯರ್ಥಿ ಆಗಲೆಂದು ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ತಮ್ಮ ಬದಲು ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ ಮತ್ತೆ ಸೋತರೆ ತೀವ್ರ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೆ. ಇತರರನ್ನು ಅಭ್ಯರ್ಥಿಯನ್ನಾಗಿಸಿದರೆ ಗೆಲ್ಲಿಸುವ ಮಾನದಂಡ ಯಾವುದು ಎಂಬ ಗೊಂದಲದ ಸುಳಿಯಲ್ಲಿ ಸಿಲುಕಿರುವ ಕುಮಾರಸ್ವಾಮಿ ಅವರು ತ್ರಿಶಂಕು ಸ್ಥಿತಿಯಿಂದ ಹೇಗೆ ಪಾರಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.