Channapatna Election Results: ಸೈನಿಕನನ್ನು ಮಕಾಡೆ ಮಲಗಿಸಿದ ದಳಪತಿ: ಯೋಗೇಶ್ವರ್‌ ವಿರುದ್ಧ ಎರಡನೇ ಬಾರಿ ಗೆದ್ದ ಎಚ್‌ಡಿಕೆ

By Kannadaprabha News  |  First Published May 14, 2023, 10:19 AM IST

ಜಿದ್ದಾಜಿದ್ದಿನ ಅಖಾಡ ಎನಿಸಿದ್ದ ಬೊಂಬೆನಾಡಿನಲ್ಲಿ ಸೈನಿಕ ಖ್ಯಾತಿಯ ಸಿ.ಪಿ.ಯೋಗೇಶ್ವರ್‌ ಅವರನ್ನು ಮತ್ತೊಮ್ಮೆ ಮಣಿಸುವಲ್ಲಿ ದಳಪತಿ ಎಚ್‌.ಡಿ.ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸ್ಪರ್ಧೆಯಿಂದ ಚನ್ನಪಟ್ಟಣ ಹೈವೋಲ್ಟೇಜ್‌ ಕ್ಷೇತ್ರ ಎನಿಸಿಕೊಂಡಿತ್ತು.


ವಿಜಯ್‌ ಕೇಸರಿ

ಚನ್ನಪಟ್ಟಣ (ಮೇ.14): ಜಿದ್ದಾಜಿದ್ದಿನ ಅಖಾಡ ಎನಿಸಿದ್ದ ಬೊಂಬೆನಾಡಿನಲ್ಲಿ ಸೈನಿಕ ಖ್ಯಾತಿಯ ಸಿ.ಪಿ.ಯೋಗೇಶ್ವರ್‌ ಅವರನ್ನು ಮತ್ತೊಮ್ಮೆ ಮಣಿಸುವಲ್ಲಿ ದಳಪತಿ ಎಚ್‌.ಡಿ.ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸ್ಪರ್ಧೆಯಿಂದ ಚನ್ನಪಟ್ಟಣ ಹೈವೋಲ್ಟೇಜ್‌ ಕ್ಷೇತ್ರ ಎನಿಸಿಕೊಂಡಿತ್ತು. ಬದ್ಧ ವೈರಿಗಳ ಸ್ಪರ್ಧೆಯಿಂದಾಗಿ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. 

Tap to resize

Latest Videos

ತೀವ್ರ ಹಣಾಹಣಿಯಿಂದ ಕೂಡಿದ್ದ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ 96,592 ಮತಗಳನ್ನು ಪಡೆದುಕೊಳ್ಳುವುದರೊಂದಿಗೆ 15,915 ಮತಗಳ ಅಂತರದಿಂದ ಯೋಗೇಶ್ವರ್‌ ಅವರನ್ನು ಸೋಲಿಸುವಲ್ಲಿ ಸಫಲರಾಗಿದ್ದಾರೆ. 2018ರ ಚುನಾವಣೆಯಲ್ಲಿ 21530 ಮತಗಳ ಅಂತರದಿಂದ ಯೋಗೇಶ್ವರ್‌ ವಿರುದ್ಧ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಈ ಬಾರಿ ಆ ನಂತರ ಕಡಿಮೆಯಾಗಿದೆ. ಇನ್ನು ಕಳೆದ ಬಾರಿ 66465 ಮತಗಳನ್ನು ಪಡೆದಿದ್ದ ಯೋಗೇಶ್ವರ್‌ ಈ ಬಾರಿ 80677 ಮತ ಪಡೆಯುವ ಮೂಲಕ ತಮ್ಮ ಮತಗಣಿಕೆಯನ್ನು ಹೆಚ್ಚಿಸಿಕೊಂಡಿದ್ದರೂ ಗೆಲವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ: ದೇವೇ​ಗೌ​ಡರ 3ನೇ ತಲೆ​ಮಾ​ರಿನ ಎಂಟ್ರಿಗೆ ‘ಕೈ’ ಬ್ರೇಕ್‌: ನಿಖಿಲ್‌ ಸೋಲಿಗೆ ಕಾರ​ಣ​ಗ​ಳೇನು?

ಎಚ್‌ಡಿಕೆ ಕೈಹಿಡಿದ ಅಭಿಮಾನ: ಕಳೆದ ಬಾರಿ ರಾಮನಗರ-ಚನ್ನಪಟ್ಟಣ ಎರಡು ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧಿಸಿದ್ದು, ಗೆದ್ದ ನಂತರ ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡಿದ್ದರು. ಆದರೆ, ಈ ಬಾರಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದರೆ ಆಗಬಹುದಾದ ಡ್ಯಾಮೇಜನ್ನು ಊಹಿಸಿದ್ದ ಕುಮಾರಸ್ವಾಮಿ ಕಾರ್ಯಕರ್ತರ ಅಭಿಮಾನ ಹಾಗೂ ಒತ್ತಾಯಕ್ಕೆ ಕಟ್ಟಬಿದ್ದು, ಚನ್ನಪಟ್ಟಣದಿಂದ ಮಾತ್ರ ಸ್ಪರ್ಧಿಸಿದ್ದರು. ಪಕ್ಷ ಸಂಘಟನೆಗಾಗಿ ಕುಮಾರಸ್ವಾಮಿ ರಾಜ್ಯ ಸುತ್ತುವ ಅನಿವಾರ್ಯತೆ ಇದ್ದು, ಕ್ಷೇತ್ರಕ್ಕೆ ಬಾರದಿದ್ದರೂ ಅವರನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಎಚ್‌ಡಿಕೆ ಕೈಹಿಡಿದ ಅಂಶಗಳು: ಕುಮಾರಸ್ವಾಮಿ ಗೆದ್ದು ಸಮ್ಮಿಶ್ರ ಸರ್ಕಾರ ಬಂದರೆ ಈ ಬಾರಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಾತಾವರಣವಿತ್ತು. ಆ ಹಿನ್ನೆಲೆಯಲ್ಲೇ ಜೆಡಿಎಸ್‌ ಮುಖಂಡರು ನಿಮಗೆ ಸಿಎಂ ಬೇಕೋ ಶಾಸಕ ಬೇಕೋ ಎಂದು ಪ್ರಚಾರ ನಡೆಸಿದ್ದು, ಎಚ್‌ಡಿಕೆ ಸಿಎಂ ಆಗುತ್ತಾರೆ ಎಂಬ ನಂಬಿಕೆಯಲ್ಲಿ ಜನ ಅವರನ್ನು ಬೆಂಬಲಿಸಿದ್ದರು. ಇದರೊಂದಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಮೂರು ಬಾರಿ ಕ್ಷೇತ್ರಕ್ಕೆ ಆಗಮಿಸಿ 4 ಕಡೆ ಬಹಿರಂಗ ಸಭೆಗಳಲ್ಲಿ ಪುತ್ರನ ಪರ ಪ್ರಚಾರ ನಡೆಸಿದ್ದರು. ಇದರೊಂದಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಎಚ್‌ಡಿಕೆ ಅನುಪಸ್ಥಿತಿಯಲ್ಲೂ ಅವರ ಪ್ರಚಾರ ಸಂಘಟಿತ ಹೋರಾಟ ನಡೆಸಿದ್ದರು.

ಕಾಂಗ್ರೆಸ್‌ನಿಂದ ಮುನಿದು ಹೊರಬಂದಿದ್ದ ಪ್ರಸನ್ನ ಪಿ.ಗೌಡ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ ಸಹೋದರರು ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು ಹಾಗೂ ಇತರೆ ಮುಖಂಡರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದರು. ಇದಲ್ಲಕ್ಕಿಂದ ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿಯಿಂದ ಬೇಸತ್ತಿದ್ದು, ಬಹುದೊಡ್ಡ ಮಟ್ಟದಲ್ಲಿ ಕುಮಾರಸ್ವಾಮಿಯನ್ನು ಬೆಂಬಲಿಸಿದ್ದರು. ಅಲ್ಪಸಂಖ್ಯಾತರ ಬಾರಿ ಬೆಂಬಲ ಹಾಗೂ ಗ್ರಾಮಾಂತರ ಪ್ರದೇಶದಲ್ಲೂ ದೊರೆತೆ ಅಭೂತಪೂರ್ವ ಬೆಂಬಲದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿರಾಯಾಸವಾಗಿ ಗೆಲುವಿನ ದಡ ಸೇರಿದರು.

ಕೈ ಹಿಡಿಯದ ಸಂಕಲ್ಪ ನಡಿಗೆ: ಇನ್ನು ವಿಧಾನಸಭೆ ಚುನಾವಣೆಗೆ ಒಂದು ವರ್ಷವಿರುವಂತೆಯೇ ಯೋಗೇಶ್ವರ್‌ ರಣಕಹಳೆ ಮೊಳಗಿಸಿದ್ದರು. ವರ್ಷದ ಹಿಂದೆಯೇ ಜೆಡಿಎಸ್‌ಗೆ ಜತೆ ಹತ್ತಾರು ವರ್ಷಗಳಿಂದ ಗುರುತಿಸಿಕೊಂಡಿದ್ದ ಮುಖಂಡರನ್ನು ಆಪರೇಷನ್‌ ಕಮಲದ ಮೂಲಕ ಕೆಡವಿದ್ದರು. ಇದಲ್ಲದೇ ಸತತ ಎರಡು ತಿಂಗಳ ಕಾಲ ಸ್ವಾಭಿಮಾನ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಅವರು ಕ್ಷೇತ್ರದ ಪ್ರತಿ ಮನೆಯನ್ನು ತಲುಪುವ ಯತ್ನ ಮಾಡಿದ್ದರು. ಆದರೆ, ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣದ ಕಡೆಗೆ ಅವರು ಆಸಕ್ತಿ ವಹಿಸಲಿಲ್ಲ. ಇದರ ಜತೆಗೆ ಸ್ವಾಭಿಮಾನ ನಡಿಗೆಯ ಮುಕ್ತಾಯದ ನಂತರ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ನಡೆಸಿದ ಅವರು ಎರಡನೇ ಸುತ್ತಿನ ಪ್ರಚಾರಕ್ಕೆ ತೆರಳದೇ ಬರೀ ಆಪರೇಷನ್‌ನಲ್ಲೇ ಕಾಲ ಕಳೆದರು. ಬಿಜೆಪಿ ಕಾರಣಕ್ಕಾಗಿ ಅಲ್ಪಸಂಖ್ಯಾತ ಮತಗಳು ಅವರ ಕೈ ಹಿಡಿಯಲಿಲ್ಲ. ಇದೆಲ್ಲದರ ಪರಿಣಾಮ ಯೋಗೇಶ್ವರ್‌ ಸಾಕಷ್ಟು ಪರಿಶ್ರಮ ಹಾಕಿದ ಪರಿಣಾಮವೂ ಗೆಲುವಿನ ದಡ ಸೇರಲು ಆಗಲಿಲ್ಲ.

ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಅಪ್ಪ- ಮಗ ಒಟ್ಟಿಗೆ ವಿಧಾನಸಭೆ ಪ್ರವೇಶ ಇದೇ ಪ್ರಥಮ

ಮೋಡಿ ಮಾಡದ ಮೋದಿ!: ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಪರ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿದರೂ. ಮೋದಿ ಮೋಡಿ ಒಕ್ಕಲಿಗರ ಭದ್ರಕೋಟೆಯಲ್ಲಿ ನಡೆಯಲಿಲ್ಲ. ಮೋದಿ ಸಮಾವೇಶದಲ್ಲಿ ಸೇರಿದ್ದ ಜನರನ್ನು ನೋಡಿ ಯೋಗೇಶ್ವರ್‌ ಪರ ಅಲೆಯಿಂದ ಎಂಬ ಭಾವನೆ ಬಿಜೆಪಿ ಮುಖಂಡರಲ್ಲಿ ಮೂಡಿತ್ತು. ಆದರೆ, ಮೋದಿ ಮ್ಯಾಜಿಕ್‌ ಇಲ್ಲಿ ನಡೆಯಲಿಲ್ಲ. ಇದೇ ವೇಳೆ ಎಚ್‌.ಡಿ.ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನಡೆಸಿದ ಪ್ರಚಾರ ಜೆಡಿಎಸ್‌ ಕೈಹಿಡಿದಿದೆ. ಹಾಲಿ ಹಾಗೂ ಮಾಜಿ ಪ್ರಧಾನಿಗಳು ಒಂದೇ ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರಾದರೂ, ಜೆಡಿಎಸ್‌ ಪರ ಮತಗಳು ಪರಿವರ್ತನೆಯಾದಂತೆ ಬಿಜೆಪಿ ಪರ ಮತಗಳು ಪರಿವರ್ತನೆ ಆಗಲಿಲ್ಲ ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ.

click me!