ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಶನಿವಾರ ಹಿಂಪಡೆದಿದ್ದು, ಇದರಿಂದ ಮೊದಲಿನಂತೆ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರು (ಜು.30): ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಶನಿವಾರ ಹಿಂಪಡೆದಿದ್ದು, ಇದರಿಂದ ಮೊದಲಿನಂತೆ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ವಿಜಯನಗರದ ಉಸ್ತುವಾರಿ ಹೊಣೆ ಹೊತ್ತಿದ್ದ ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಹಾಗೂ ಕೊಪ್ಪಳದ ಉಸ್ತುವಾರಿ ಹೊಣೆ ಹೊತ್ತಿದ್ದ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರನ್ನು ಶುಕ್ರವಾರ (ಸರ್ಕಾರಿ ಆದೇಶದ ಪ್ರಕಾರ) ಸರ್ಕಾರ ಅದಲು ಬದಲು ಮಾಡಿ ಆದೇಶ ಹೊರಡಿಸಿತ್ತು.
ವಿಜಯನಗರ ಜಿಲ್ಲಾದ್ಯಂತ ಆನಂದ್ ಸಿಂಗ್ ಅವರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿ ಸಿಕ್ಕಿತ್ತೆಂದು ಖುಷಿ ಅಲ್ಲಿಯ ಜನ ಸಂಭ್ರಮಿಸಿದ್ದು, ವಿಜಯನಗರದಿಂದ ಕೊಪ್ಪಳ ಜಿಲ್ಲೆಗೆ ಶಶಿಕಲಾ ಜೊಲ್ಲೆ ಅವರನ್ನು ಬದಲಾವಣೆ ಮಾಡಿದ್ದು, ಶನಿವಾರ ಬೆಳಗ್ಗೆ ಜನರಿಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಉಸ್ತುವಾರಿಗಳ ಬದಲಾವಣೆ ಯಾಕೆ ಆಗಿದೆ ಎಂಬ ವ್ಯಾಪಕ ಚರ್ಚೆ ಆಗತೊಡಗಿದ್ದವು. ಈ ಬೆನ್ನಲ್ಲೆ ಉಸ್ತುವಾರಿಗಳ ಬದಲಾವಣೆ ಚರ್ಚೆಗೆ ಮತ್ತಷ್ಟು ಇಂಬು ಸಿಗುವಂತೆ ಸರ್ಕಾರ ಶನಿವಾರ ಸಂಜೆ ವೇಳೆಗೆ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ ಆದೇಶವನ್ನು ರದ್ದುಪಡಿಸಿದೆ.
ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಬೊಮ್ಮಾಯಿ ಸರಕಾರ ಆದೇಶ
ಶುಕ್ರವಾರ ಸರ್ಕಾರವೇ ಆದೇಶ ಮಾಡಿ ಮತ್ತೆ ಒಂದೇ ದಿನದಲ್ಲಿ ಆದೇಶ ರದ್ದು ಮಾಡಿರುವುದು ಸರ್ಕಾರದ ಕಾರ್ಯವೈಖರಿಯನ್ನೆ ಪ್ರಶ್ನೆ ಮಾಡುವಂತಾಗಿದೆ. ಸದ್ಯ ಕೊಪ್ಪಳ ಜಿಲ್ಲೆಗೆ ಮೊದಲಿನಂತೆಯೇ ಸಚಿವ ಆನಂದ ಸಿಂಗ್ ಹಾಗೂ ವಿಜಯನಗರಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಉಸ್ತುವಾರಿಯಾಗಿ ಮುಂದುವರಿದಿದ್ದಾರೆ.