
ಬೆಂಗಳೂರು(ಆ.04): ರಾಜ್ಯ ರಾಜಕಾರಣದಲ್ಲಿನಡೆದಿರುವ ವಿಪ್ಲವಗಳ ನಡುವೆಯೇ ಮುಂದಿನ ಒಂದೆರಡು ತಿಂಗಳೊಳಗೆ ಸಂಪುಟಕ್ಕೆ ಪುಟ್ಟದೊಂದು ಸರ್ಜರಿಯಾಗುವ ಸಾಧ್ಯತೆಗಳು ಮೂಡಿವೆ. ಇದಕ್ಕೆ ಕಾರಣ ರಾಜ್ಯದ ಸಚಿವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪಡೆದುಕೊಂಡಿರುವ ಆಂತರಿಕ ವರದಿ. ಖಾಸಗಿ ಸಂಸ್ಥೆಯೊಂದರಿಂದ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಸಚಿವರ ಕಾರ್ಯವೈಖರಿ ಹಾಗೂ ಸಾಧನೆ ಕುರಿತು ವರದಿಯನ್ನು ಪಡೆದಿದೆ.
ಈ ವರದಿಯ ಪ್ರಕಾರ ಸುಮಾರು 10 ಸಚಿವರು ನಿರೀಕ್ಷಿತ ಸಾಧನೆ ತೋರಿಲ್ಲ. ಇದರಿಂದ ಸಾರ್ವಜನಿಕ ವಲಯದಲ್ಲಿ ರಾಜ್ಯ ಸಚಿವ ಸಂಪುಟದ ಇಮೇಜ್ ಉತ್ತಮವಾಗಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ಸಾಧನೆ ತೋರದ ಸಚಿವರ ಪೈಕಿ ಕನಿಷ್ಠ 4-5 ಸಚಿವರ ಬದಲಾವಣೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಒಂದೆರಡು ತಿಂಗಳೊಳಗೆ ಸಂಪುಟಕ್ಕೆ ಪುಟ್ಟ ಸರ್ಜರಿ ಮಾಡುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡುವ ಸಾಧ್ಯತೆಯಿದ್ದು, ಈಗಾಗಲೇ ಇಂತಹದೊಂದು ಸುಳಿವನ್ನು ರಾಜ್ಯ ನಾಯಕತ್ವಕ್ಕೆ ನೀಡಲಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ಸಚಿವ ಸಂಪುಟ ನಿರ್ಧಾರ
ಈ ಬೆಳವಣಿಗೆಯ ನಡುವೆ ಭಾನುವಾರ ನಗರಕ್ಕೆ ಆಗಮಿಸಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಅವರು ನಡೆಸಲಿರುವ ಸಚಿವರ ಸಭೆಯಲ್ಲಿಯೂ ಈ ವರದಿ ಬಗ್ಗೆ ಚರ್ಚಿಸಲಿದ್ದು, ಸಮರ್ಪಕವಾಗಿ ಕೆಲಸ ಮಾಡದ ಸಚಿವರಿಗೆ ಕೊನೆಯ ಎಚ್ಚರಿಕೆ ಯನ್ನು ನೀಡಲಿದ್ದಾರೆ ಎಂದು ಈ ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.