ಚಾಮರಾಜನಗರ ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಶಮನ: ಸಚಿವ ಸೋಮಣ್ಣ ಹಾದಿ ಸುಗಮ

By Kannadaprabha News  |  First Published Apr 17, 2023, 10:22 PM IST

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಶಮನವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಹಾದಿ ಸುಗಮವಾಗಿದೆ. 


ದೇವರಾಜು ಕಪ್ಪಸೋಗೆ

ಚಾಮರಾಜನಗರ (ಏ.17): ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಶಮನವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಹಾದಿ ಸುಗಮವಾಗಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಸರಿಯಾದರೂ ಬಿಜೆಪಿ ಆಕಾಂಕ್ಷಿಗಳು ಸರಿಯಾಗುವುದಿಲ್ಲ, ಅವರು ಸರಿಯಾಗುವಷ್ಟರಲ್ಲಿ ಚುನಾವಣೆಯೇ ಮುಗಿದು ಹೋಗುತ್ತದೆ ಎಂಬ ಮಾತು ಜನಜನಿತವಾಗಿತ್ತು. 

Latest Videos

ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಚಾಮರಾಜನಗರ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತಿದ್ದಂತೆ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲುಕಂಡಿದ್ದ ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ, ಜಿಪಂ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ರೈತ ಮುಖಂಡ ಅಮ್ಮನಪುರ ಮಲ್ಲೇಶ್‌, ರಾಜ್ಯ ಕಿವಿ ಮೂಗು ಗಂಟಲು ತಜ್ಞರ ಸಂಘದ ರಾಜ್ಯಾಧ್ಯಕ್ಷ ಡಾ.ಎ.ಆರ್‌. ಬಾಬು ಬೆಂಬಲ ಘೋಷಣೆ ಮಾಡಿದ್ದರು. ಇದಾದ ಬಳಿಕ ಕಾಡಾ ಅಧ್ಯಕ್ಷ ನಿಜಗುಣರಾಜು ಅವರ ನಿವಾಸಕ್ಕೆ ಸೋಮಣ್ಣ ಭೇಟಿ ನೀಡಿದ ಬಳಿಕ ಅವರ ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮಾದಪ್ಪ ನನ್ನ ಕಳುಹಿಸಿದ್ದಾನೆ, ಬರಿಗೈಲಿ ಕಳುಹಿಸಬೇಡಿ: ಸಚಿವ ಸೋಮಣ್ಣ

undefined

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿ. ನಾಗಶ್ರೀ ಪ್ರತಾಪ್‌ ತಮ್ಮ ನಿರ್ಧಾರ ಪ್ರಕಟಿಸಿರಲಿಲ್ಲ. ಬೆಂಬಲಿಗರು ಸಭೆ ಕರೆದು ಜೆಡಿಎಸ್‌ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಕೆಲವರು ಮತ್ತೇ ಕೆಲವರು ಪಕ್ಷದ ಅಭ್ಯರ್ಥಿಯನ್ನೇ ಬೆಂಬಲಿಸಿ, ನಿಮ್ಮ ಭವಿಷ್ಯದ ರಾಜಕಾರಣಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರು ಸಹ ನಿರ್ಧಾರ ಪ್ರಕಟಿಸಲು ಒಂದೆರಡು ದಿನ ಸಮಯವಕಾಶ ಕೇಳಿದ್ದರು. ಅವರು ಅಳೆದು ತೂಗಿ ಮುಂದಿನ ರಾಜಕೀಯ ಭವಿಷ್ಯ ಮತ್ತು ಪಕ್ಷದ ಸಿದ್ದಾಂತಗಳಿಗೆ ತಲೆ ಭಾಗಿ ಪಕ್ಷದ ಅಭ್ಯರ್ಥಿ ವಿ. ಸೋಮಣ್ಣ ಅವರನ್ನು ಬೆಂಬಲಿಸುವುದಾಗಿ ಭಾನುವಾರ ತಿಳಿಸಿದ್ದಾರೆ .

ರುದ್ರೇಶ್‌ಗೂ ಬಿತ್ತು ಕಡಿವಾಣ: ಸಚಿವ ವಿ. ಸೋಮಣ್ಣ ವಿರುದ್ಧ ಕೆಲ ತಿಂಗಳುಗಳ ಕಾಲ ಬಂಡಾಯ ಸಾರಿದ್ದ ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ.ರುದ್ರೇಶ್‌ ಅವರ ಬಂಡಾಯಕ್ಕೂ ಪಕ್ಷದ ಹೈಕಮಾಂಡ್‌ ಕಡಿವಾಣ ಹಾಕಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೈಸೂರು ಭಾಗಕ್ಕೆ ತಲೆಹಾಕದಂತೆ ಹಾಗೂ ಯಾವುದೇ ಹೇಳಿಕೆ ನೀಡದಂತೆ ರುದ್ರೇಶ್‌ಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಯಡಿಯೂರಪ್ಪ ಅವರು ರುದ್ರೇಶ್‌ಗೆ ಫೋನಾಯಿಸಿ ತರಾಟೆಗೆ ತೆಗೆದುಕೊಂಡಿದ್ದರಿಂದ ಚಾಮರಾಜನಗರದಿಂದ ತೆರಳಿದ್ದಾರೆ.

ಕೈ ಗೆ ಠಕ್ಕರ್‌ ನೀಡಲು ಕಮಲ ತಂತ್ರ: ವರುಣ ಹಾಗೂ ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಅಭ್ಯರ್ಥಿಯಾಗಿಸುವ ಮೂಲಕ ಬಿಜೆಪಿ ಹೂಡಿರುವ ಪ್ಲಾನ್‌ಗೆ ಈಗ ಬಿಜೆಪಿಯ ಸಿಎಂ ಹಾಗೂ ಮಾಜಿ ಸಿಎಂ ಎಂಟ್ರಿಯಾಗುತ್ತಿದ್ದು ಕೈ ಪಡೆಗೆ ಠಕ್ಕರ್‌ ಕೊಡಲು ಪ್ಲಾನ್‌ ಮಾಡಲಾಗಿದೆ. ವಸತಿ ಸಚಿವ ವಿ.ಸೋಮಣ್ಣ ಏ. 17 ರಂದು ವರುಣದಲ್ಲಿ ಮತ್ತು 19ಕ್ಕೆ ಚಾಮರಾಜನಗರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದು ಕ್ಷೇತ್ರಗಳಲ್ಲಿ ಬಿಜೆಪಿ ಸುನಾಮಿ ಎಬ್ಬಿಸಲು ನಾಮಪತ್ರ ಸಲ್ಲಿಕೆ ವೇಳೆ ಘಟಾನುಘಟಿಗಳು ಜೊತೆಯಾಗಲಿದ್ದಾರೆ. 

ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ: ಸಚಿವ ವಿ.ಸೋಮಣ್ಣ

ವರುಣ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಯಾಗಲಿದ್ದು, ಚಾಮರಾಜನಗರದಲ್ಲಿ ಉಮೇದುವಾರಿಕೆ ಫೈಲ್‌ ಮಾಡುವಾಗ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೋಮಣ್ಣಗೆ ಜೊತೆಯಾಗಲಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಲಿಂಗಾಯತ ಪ್ರಾಬಲ್ಯ ಮತಗಳೇ ಅ​ಧಿಕವಾಗಿದ್ದು ಯಡಿಯೂರಪ್ಪ ಸೋಮಣ್ಣ ಜೊತೆಯಾಗಿ ಬಂದರೇ ಮತಗಳು ವಿಭಜನೆಯಾಗದಂತೆ, ಒಳ ಏಟು ಆಗದಂತೆ ತಡೆಯಲಿದೆ ಎಂಬುದು ಕೂಡ ಇದರ ಹಿಂದಿನ ಲೆಕ್ಕಾಚಾರವಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!