ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ಅಲೆಮಾರಿ, ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ ಮಾಡದ ಅಂಜುಬುರುಕ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಲೇವಡಿ ಮಾಡಿದ್ದಾರೆ.
ಚಾಮರಾಜನಗರ (ನ.10): ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ಅಲೆಮಾರಿ, ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ ಮಾಡದ ಅಂಜುಬುರುಕ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಊರಲ್ಲಿ ನಿಲ್ಲದ ಅಲೆಮಾರಿಗಳಂತೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವ ಸಿದ್ದರಾಮಯ್ಯರಾಜಕೀಯ ಅಲೆಮಾರಿ ಇದ್ದಂತೆ, ಉಪಕಾರ ಸ್ಮರಣೆ ಇಲ್ಲದ ಸಿದ್ದರಾಮಯ್ಯ ಪಕ್ಷ ಕಟ್ಟಲಿ, ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಅಗತ್ಯಇದೆ, ಅದು ಬಿಟ್ಟು ವೀರಾವೇಶದ ಮಾತಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದಲ್ಲಿ ಟೇಬಲ್ ಕುಟ್ಟಿಮಾತನಾಡುತ್ತಾರೆ, ಅವರು ಗೆದ್ದಿರುವುದು ಒಂದು ಸ್ಥಾನ, ಬಿಜೆಪಿ 25 ಸಂಸದ ಸ್ಥಾನ ಗೆದ್ದಿದ್ದು, ನಾವು ಯಾವ ರೀತಿ ಮಾತನಾಡಬೇಕು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಮಣ್ಣು ಮುಕ್ಕಿದ್ದಾರೆ, ರಾಹುಲ್‌ಗಾಂಧಿನೇ ಪಿಎಂ ಎಂದು ರಾಯಚೂರಲ್ಲಿ ಹೇಳಿದ್ದರು. ಏನಾಯಿತು ಈಗ..? ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೊನೆಗೊಂಡಿದೆ. ರಾಹುಲ್‌ಗಾಂಧಿ ಭಾರತ್ ಜೋಡೋ ಎಂದು ಅಲ್ಲಿಗೇ ಹೋಗಿಯೇ ಇಲ್ಲ, ತೆಲಂಗಾಣದಲ್ಲಿ ಅವರ ಯಾತ್ರೆಗೆ ಜನರೇ ಇರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಗಜೇಂದ್ರ ಮೋಕ್ಷ ಸಿಕ್ಕಿದೆ: ಸಂಸದ ಶ್ರೀನಿವಾಸ್ ಪ್ರಸಾದ್
ದಾವಣಗೆರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ, 8 ಲಕ್ಷ ಜನ ಟಾನಿಕ್ ಕೊಟ್ಟಿದ್ದಾರೆ. ಹೀಗಾದರೂ ತಾವು ನಿಲ್ಲುವ ಕ್ಷೇತ್ರ ಘೋಷಣೆ ಮಾಡುತ್ತಿಲ್ಲ, ಅಂಜುಬುರುಕ, ಎಐಸಿಸಿ ಅಂಥಾರೆ ಮಲ್ಲಿಕಾರ್ಜುನ ಖರ್ಗೆಗೆ ಮರದ ಕತ್ತಿ ಕೊಟ್ಟು ಯುದ್ಧ ಮಾಡು ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸತೀಶ್ ಜಾರಕಿಹೊಳಿ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿ ಜೊತೆಗೆ ಕಾಂಗ್ರೆಸ್ ನಾಯಕರು ಕೂಡ ಅವರ ಮಾತನ್ನು ಒಪ್ಪಲು ತಯಾರಿಲ್ಲ, ಕ್ಷಮೆ ಕೇಳಿ ಅಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ-ಕ್ಷಮೆ ಕೇಳಲ್ಲ ಅಂತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ಸಿಗರ ಜಂಘಾಬಲವೇ ಉಡುಗಿ ಹೋಗಿದೆ: ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿ ಯಾರೂ ಇರಲು ಇಷ್ಟಪಡುವುದಿಲ್ಲ. ಜನ ಸಂಕಲ್ಪ ಯಾತ್ರೆಗೆ ಸಿಗುತ್ತಿರುವ ಜನಬೆಂಬಲ ನೋಡಿ ಕಾಂಗ್ರೆಸ್ಸಿಗರ ಜಂಘಾಬಲವೇ ಉಡುಗಿ ಹೋಗಿದೆ. ಮುಂಬರುವ ಚುನಾವಣೆಯಲ್ಲಿ ನಾವು 150 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೃಢ ನಿರ್ಧಾರದಿಂದ ಮಾತ್ರ ರಾಜಕೀಯದಲ್ಲಿರಲು ಸಾಧ್ಯ: ಸಂಸದ ಶ್ರೀನಿವಾಸ್ ಪ್ರಸಾದ್
ಮೋದಿ ಅವರ ನಾಯಕತ್ವವನ್ನು ಇಡೀ ಜಗತ್ತೆ ಕೊಂಡಾಡುತ್ತಿದೆ. ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೊ ಪಾದಯಾತ್ರೆ ಮಾಡಿದ್ದರೂ ಯಾವುದೇ ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಕಳೆದ ಚುನಾವಣೆಗಿಂತಲೂ ಕಡಿಮೆ ಸ್ಥಾನ ಪಡೆಯಲಿದೆ. ಇತ್ತೀಚೆಗೆ ನಡೆದ ವಿಜಯಪುರ ಮಹಾನಗರ ಪಾಲಿಕೆ, ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದರು. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ದೊಡ್ಡ ಪ್ರಮಾಣದ ಹಣ ರೈತರಿಗೆ ಸಿಕ್ಕಿದೆ. ಪ್ರತಿ ಹಳ್ಳಿಯ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯಕ್ರಮ ನಡೆಯುತ್ತಿದೆ. ರೈತರು, ನೇಕಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 8000 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.