
ಮುಂಡಗೋಡ (ಡಿ.07): ರಾಜ್ಯವನ್ನು ಆಳುತ್ತಿರುವುದು ಗಂಡಾಗುಂಡಿ ಸರ್ಕಾರ. ಅಧಿಕಾರಕ್ಕಾಗಿ ಡಿನ್ನರ್, ಬ್ರೇಕ್‌ಫಾಸ್ಟ್ ಪಾರ್ಟಿ ಮಾಡುವ ಮೂಲಕ ಟೈಮ್ ಪಾಸ್ ಮಾಡುತ್ತಿದ್ದಾರೆಯೇ ಹೊರತು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಲಿ, ರಾಜ್ಯದ ಅಭಿವೃದ್ಧಿಗಾಗಿ ಒಂದು ದಿನ ಕೂಡ ಕುಳಿತು ಮಾತನಾಡಿದ್ದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅಧಿಕಾರ ಮಾತ್ರ ಮುಖ್ಯ.
ಚುನಾವಣೆ ಬಂದಾಗ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದರೆ ಬಡವರು ಮತ ಹಾಕಿಬಿಡುತ್ತಾರೆ ಎಂದುಕೊಂಡಿದ್ದಾರೆ. ನಮ್ಮ ಜನರಿಗೆ ಬಡತನವಿದ್ದರೂ ಸ್ವಾಭಿಮಾನವಿದೆ. ಕಳೆದ ಬಾರಿ ಕಾರಣಾಂತರದಿಂದ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆಯೇ ಹೊರತು ಗ್ಯಾರಂಟಿಗಾಗಿ ಅಲ್ಲ. ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದ ಜನತೆ ಅಷ್ಟೊಂದು ರೋಸಿಹೋಗಿದ್ದಾರೆ ಎಂದರು. ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಸಂಚರಿಸಲು ಯೋಗ್ಯವಿಲ್ಲದಂತಾಗಿವೆ. ಮಳೆ ಹೆಚ್ಚಾಗಿ ಅಡಕೆ, ಗೋವಿನ ಜೋಳ ಬೆಳೆ ಹಾನಿಗೊಳಗಾಗಿದೆ. ಇನ್ನೊಂದು ಕಡೆ ಕಬ್ಬು ಬೆಳಗಾರರು ಹೋರಾಟ ಮಾಡುತ್ತಿದ್ದಾರೆ.
ಅಧಿಕಾರದ ಕಿತ್ತಾಟದಲ್ಲಿ ಜನರ ಸಮಸ್ಯೆ ಬದಿಗಿಡಬಾರದು, ರಾಜ್ಯಕ್ಕೆ ಅನ್ಯಾಯ ಮಾಡಬಾರದು. ವಾಚ್ ವಿಚಾರವಾಗಿ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡುವುದು ಬೇಡ, ನನ್ನ ಚಾಲೆಂಜ್‌ನಿಂದ ಅಧಿಕಾರ ತಪ್ಪುತ್ತದೆ. ಆ ಅನ್ಯಾಯ ಮಾಡಲು ನಾನು ತಯಾರಿಲ್ಲ. ಅದಕ್ಕೆ ನಾನು ಚಾಲೆಂಚ್ ಸ್ವೀಕಾರ ಮಾಡುವುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರಿಗೆ ನೂರು ವಾಚ್ ಕಟ್ಟುವಷ್ಟು ಶಕ್ತಿ ಭಗವಂತ ನೀಡಿದ್ದಾನೆ. ಅವರು ರಾಜೀನಾಮೆ ನೀಡಿದರೆ ಬಹಳ ಅನ್ಯಾಯವಾಗುತ್ತದೆ. ಅದು ನನಗೆ ಶಾಪ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ರೈತರು ಆಗ್ರಹಿಸುತ್ತಿದ್ದರೆ, ಇವರು ಮಾತ್ರ ಶಾಸಕರ ಖರೀದಿ ಕೇಂದ್ರಗಳನ್ನು ತೆರೆದು ಕುಳಿತಿದ್ದಾರೆ.
ಈ ಹಿಂದೆ ಅಧಿಕಾರ ಹಿಡಿಯಲು ಬೇರೆ ಬೇರೆ ಪಕ್ಷದ ಶಾಸಕರನ್ನು ಖರೀದಿಸುವುದನ್ನು ನೋಡಿದ್ದೆವು. ಆದರೆ ಇಂದು ಅಧಿಕಾರಕ್ಕಾಗಿ ಸ್ವಪಕ್ಷದವರನ್ನೇ ಖರೀದಿಸುವ ಕಾರ್ಯದಲ್ಲಿ ನಿರತರಾಗಿರುವ ಇವರು ರಾಜ್ಯದ ಜನರ ಸಮಸ್ಯೆ ಬಗ್ಗೆ ಏನು ಚಿಂತನೆ ನಡೆಸುತ್ತಾರೆ? ದಲಿತರ ಅಭಿವೃದ್ಧಿಗೆ ₹42 ಸಾವಿರ ಕೋಟಿ ಎಂದು ಸುಳ್ಳು ಭಾಷಣ ಮಾಡುವ ಮೂಲಕ ದಲಿತರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಹೊರಟಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಮೂರು ಕಾಸು ಕೂಡ ನೀಡಿಲ್ಲ. ಯಾವುದೇ ಒಂದು ನಿಗಮದಲ್ಲಿ ಚಟುವಟಿಕೆ ಇಲ್ಲ. ಹಾಗಾಗಿ, ಅವರು ಹೇಳುವ ಸುಳ್ಳುಗಳಿಗೆ ದಲಿತರು ಮರುಳಾಗದೆ ಕೆಲಸ ಮಾಡುವರನ್ನು ಗುರುತಿಸಿ ಬೆಂಬಲಿಸಬೇಕು ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಚಿದಾನಂದ ಹರಿಜನ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.