
ಬೆಳಗಾವಿ (ಡಿ.19): ಕಾಂಗ್ರೆಸ್ ನಾಯಕರ ಡಿನ್ನರೂ ನಿಲ್ಲುತ್ತಿಲ್ಲ, ಇನ್ನರ್ ಪಾಲಿಟಿಕ್ಸೋ ನಿಲ್ಲುತ್ತಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಡಿ.ಕೆ.ಶಿವಕುಮಾರ ಬಣದವರು ಕಾಯ್ದು ನೋಡಿ ನವೆಂಬರ್ ಕ್ರಾಂತಿ ಮಿಸ್ ಆಯ್ತು, ಸಂಕ್ರಾಂತಿ ಫಿಕ್ಸ್ ಎಂದು ಹೇಳುತ್ತಾರೆ. ಉತ್ತರ ಕರ್ನಾಟಕ ಸಮಸ್ಯೆ ಬಗೆಹರಿಸುವ ಕ್ರಾಂತಿ ಆಗಬೇಕು. ಅಧಿಕಾರದ ಕ್ರಾಂತಿ ಯಾರಿಗೂ ಬೇಕಾಗಿಲ್ಲ. ಈಗಾಗಲೇ ಜನ ಕುಪಿತರಾಗಿದ್ದಾರೆ. ಈ ಸರ್ಕಾರದ ಹೋದರೆ ಸಾಕು ಎನ್ನುತ್ತಿದ್ದಾರೆ ಎಂದರು.
ಜನರನ್ನು ಸಂತೈಸುವ ಕೆಲಸ ಮಾಡಬೇಕು. ಕಾಲಹರಣ ಮಾಡದೇ ಕೆಲಸ ಮಾಡಲಿ. ಅವಧಿಪೂರ್ವ ಚುನಾವಣೆ ಬರುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜನ ಅಧಿಕಾರ ಕೊಟ್ಟಿದ್ದಾರೆ. ಅಧಿಕಾರ ಚಲಾಯಿಸಿ ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು. ಅವರ ಸ್ವಯಂಕೃತ ಅಪರಾಧದಿಂದ ಅವರೇ ಕುಸಿದು ಬಿದ್ದರೆ ನಾವ್ಯಾರೂ ಏನು ಮಾಡಲಾಗುವುದಿಲ್ಲ ಎಂದರು.
ಹಣ ಸಿಕ್ಕಿದ್ದು ಗೃಹಲಕ್ಷ್ಮಿಗೋ, ಬೇರೆ ಲಕ್ಷ್ಮಿಗೋ: ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇದು ಬರೀ 5,000 ಕೋಟಿ ರು. ಹಗರಣ ಅಲ್ಲ. ಬಹಳಷ್ಟು ಮಹಿಳೆಯರ ಖಾತೆಗೆ ಮೊದಲಿನಿಂದಲೂ ಹಣ ಬಂದಿಲ್ಲ. ಈ ಗೃಹಲಕ್ಷ್ಮಿ ಹಣ ಗೃಹಲಕ್ಷ್ಮಿಗೆ ಹೋಯಿತೇ ಅಥವಾ ಬೇರೆ ಲಕ್ಷ್ಮೀ ಮನೆಗೆ ಹೋಗಿದೆಯೇ ಹೇಳಬೇಕು. ಈ ಬಗ್ಗೆ ಇಂದಿನಿಂದಲೇ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಹಣ ಎಲ್ಲಿ ಹೋಯಿತು ಎಂಬುದನ್ನು ಹೇಳಬೇಕು. ಹಿಂದೆ ಯುಪಿಎ ಸರ್ಕಾರದಲ್ಲಿ 72,000 ಕೋಟಿ ರು. ಸಾಲ ಮನ್ನಾ ಮಾಡಿದಾಗ 12,000 ಕೋಟಿ ರು. ಬೋಗಸ್ ಖಾತೆಗಳಿಗೆ ಹೋಗಿತ್ತು. ಈ ಪ್ರಕರಣದಲ್ಲೂ ಏನು ಹಗರಣ ಆಗಿದೆ ಎಂಬುದನ್ನು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.