
ಸುವರ್ಣ ವಿಧಾನಸೌಧ (ಡಿ.19): ಬಿಜೆಪಿ ಅವರು ಮಹಿಳಾ ವಿರೋಧಿಗಳು. ಹೀಗಾಗಿಯೇ ಶಕ್ತಿ, ಗೃಹಲಕ್ಷ್ಮಿಯಂತಹ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಅನುದಾನ ಪಾವತಿ ಬಾಕಿ ಉಳಿದಿರುವುದು ನಿಜ. ಅದನ್ನು ಸರ್ಕಾರ ಹಂತಹಂತವಾಗಿ ನಿಗಮಗಳಿಗೆ ನೀಡಲಿದೆ. ಬಿಜೆಪಿ 2023ರಲ್ಲಿ ಅಧಿಕಾರ ಬಿಟ್ಟಾಗ ಸಾರಿಗೆ ನಿಗಮಗಳ ಮೇಲೆ ₹4 ಸಾವಿರ ಕೋಟಿ ಸಾಲದ ಹೊರೆ ಉಳಿಸಲಾಗಿತ್ತು. ಸಾರಿಗೆ ನೌಕರರಿಗೆ ವೇತನ ಹೆಚ್ಚಿಸುತ್ತೇವೆಂದು ವೇತನ ಬಾಕಿ ಉಳಿಸಿ ಹೋಗಿದ್ದಾರೆ.
ಅವುಗಳ ಬಗ್ಗೆಯೂ ಬಿಜೆಪಿ ನಾಯಕರು ಮಾತನಾಡಬೇಕು. ಆದರೆ, ಮಹಿಳೆಯರಿಗೆ ಅನುಕೂಲವಾಗುವ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ 4 ಸಾರಿಗೆ ನಿಗಮಗಳಿಗೆ ₹2,400 ಕೋಟಿ ವೆಚ್ಚದಲ್ಲಿ 5,800 ಬಸ್ ಖರೀದಿ ಮಾಡಲಾಗಿದೆ. ಇದೀಗ ₹1 ಸಾವಿರ ಕೋಟಿ ವೆಚ್ಚದಲ್ಲಿ 2 ಸಾವಿರ ಬಸ್‌ಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ. 10 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ. ಪಿಎಫ್ ಬಾಕಿ ಸೇರಿದಂತೆ ಬಿಜೆಪಿ ಸರ್ಕಾರ ಬಾಕಿ ಉಳಿಸಿದ್ದ ಸಾಲಗಳನ್ನು ತೀರಿಸಲು ₹2 ಸಾವಿರ ಕೋಟಿ ಬ್ಯಾಂಕ್ ಗ್ಯಾರಂಟಿ ನೀಡಿದೆ ಇದೆಲ್ಲ ಬಿಜೆಪಿ ಅವರಿಗೆ ಕಾಣಿಸುವುದಿಲ್ಲ ಎಂದರು.
ಅಧಿವೇಶನದ ಬಳಿಕ ಸಿಎಂ ಜತೆ ಸಭೆ: ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಹಿಂಬಾಕಿ ಪಾವತಿಸಬೇಕೆಂಬುದು ಸೇರಿ ಸಾರಿಗೆ ನೌಕರರ ಸಂಘಟನೆಗಳ ವಿವಿಧ ಬೇಡಿಕೆಗಳ ಸಂಬಂಧ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸಾರ್ವಜನಿಕ ಜರೂರು ವಿಚಾರದ ಮೇಲೆ ಸಾರಿಗೆ ನೌಕರರ ಸಂಘಟನೆಗಳ ಬೇಡಿಕೆ ಹಾಗೂ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಮುಷ್ಕರದ ಎಚ್ಚರಿಕೆ ನೀಡಿರುವ ಕುರಿತು ಸರ್ಕಾರದ ಗಮನ ಸೆಳೆದರು.
ಇದಕ್ಕೆ ಉತ್ತರ ನೀಡಿದ ಸಚಿವರು, ನಾಲ್ಕೂ ನಿಗಮಗಳಿಂದ ಒಂದು ಲಕ್ಷಕ್ಕೂ ಹೆಚ್ಚು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 15ರಿಂದ 16 ಸಂಘಟನೆಗಳಿವೆ. ಅವುಗಳೊಂದಿಗೆ ಸಭೆ ನಡೆಸಿ 14 ತಿಂಗಳ ಹಿಂಬಾಕಿ ನೀಡಲು ತೀರ್ಮಾನಿಸಲಾಗಿದೆ. ಅವರಿಗೆ ಪ್ರತಿ 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ, ಕಾರಣಾಂತರಗಳಿಂದ ಹಿಂದಿನ ಸರ್ಕಾರದಲ್ಲಿ 2020ರಿಂದ 22ರವರೆಗೆ ವೇತನ ಪರಿಷ್ಕರಣೆ ಆಗಲಿಲ್ಲ. 2023ರಲ್ಲಿ ಪರಿಷ್ಕರಣೆ ಮಾಡದಾಗ ಆ ವರ್ಷದ ಜ.1ರಿಂದ ಪೂರ್ವಾನ್ವಯಗೊಳಿಸಿ ವೇನತ ಹೆಚ್ಚಿಸಿದ್ದರೆ ಸರಿಹೋಗುತ್ತಿತ್ತು. ಅಂದಿನ ಸರ್ಕಾರ ಅದನ್ನು ಮಾಡಲಿಲ್ಲ 2023ರ ಮಾರ್ಚ್ 17ರಿಂದ ಅನ್ವಯಿಸಿ ಆದೇಶಿಸಲಾಗಿದೆ. ಬಜೆಟ್‌ನಲ್ಲೂ ಅನುದಾನ ಇಟ್ಟಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಸಿಎಂ ಜೊತೆ ಚರ್ಚಿಸಿ 14 ತಿಂಗಳ ಹಿಂಬಾಕಿ ನೀಡಲು ತೀರ್ಮಾನಿಸಲಾಗಿದೆ. ಆದರೆ, ಅವರ ಬೇಡಿಕೆಗಳು ಬೇರೆ ಬೇರೆ ಇವೆ. ಈ ಬಗ್ಗೆ ಅಧಿವೇಶನ ಮುಗಿದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.