ಗೋದ್ರಾ ಹತ್ಯಾಕಾಂಡದ ಮಾದರಿಯಲ್ಲಿ ರಾಜ್ಯದಲ್ಲಿ ಗಲಭೆಗೆ ಸಂಚಿನ ಬಗ್ಗೆ ವಿವಾದಾತ್ಮಕ ಹೇಳಿಕೆ ಸಂಬಂಧ ಪೊಲೀಸರಿಂದ ರಾಜ್ಯಪಾಲರು ವರದಿ ಕೇಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಲು ಪ್ರಯತ್ನ ನಡೆಸಿದರು.
ಬೆಂಗಳೂರು (ಜ.19): ಗೋದ್ರಾ ಹತ್ಯಾಕಾಂಡದ ಮಾದರಿಯಲ್ಲಿ ರಾಜ್ಯದಲ್ಲಿ ಗಲಭೆಗೆ ಸಂಚಿನ ಬಗ್ಗೆ ವಿವಾದಾತ್ಮಕ ಹೇಳಿಕೆ ಸಂಬಂಧ ಪೊಲೀಸರಿಂದ ರಾಜ್ಯಪಾಲರು ವರದಿ ಕೇಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಲು ಪ್ರಯತ್ನ ನಡೆಸಿದರು. ಆದರೆ, ಹರಿಪ್ರಸಾದ್ ಅವರು ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ಕುಮಾರಕೃಪಾ ಅತಿಥಿ ಗೃಹದಲ್ಲಿದ್ದ ಹರಿಪ್ರಸಾದ್ ಅವರನ್ನು ಭೇಟಿಯಾಗಿದ್ದ ಸಿಸಿಬಿ ಅಧಿಕಾರಿಗಳು, ರಾಜ್ಯದಲ್ಲಿ ಗೋಧ್ರಾ ಹತ್ಯಾಕಾಂಡದ ಮಾದರಿಯ ಗಲಭೆ ಸಂಚಿನ ಬಗ್ಗೆ ತಾವು ನೀಡಿರುವ ಹೇಳಿಕೆ ಬಗ್ಗೆ ವಿವರಣೆ ಕೇಳಲು ಬಂದಿದ್ದೇವೆ. ಈ ಬಗ್ಗೆ ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳುವಂತೆ ಕೇಳಿದ್ದಾರೆ. ಇದಕ್ಕೆ ಕೆಂಡಾಮಂಡಲರಾದ ಹರಿಪ್ರಸಾದ್, ರಾಜ್ಯದ ಜನರ ಸುರಕ್ಷತೆ ದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ಈಗ ನನಗೆ ವಿವಿಐಪಿ ಆತಿಥ್ಯ ಬೇಕಿಲ್ಲ. ನನ್ನ ಹೇಳಿಕೆ ಸಂಬಂಧ ಪ್ರಕರಣ ದಾಖಲಿಸಿ ಬಳಿಕ ವಾರೆಂಟ್ ತಂದು ಬಂಧಿಸಿ ಠಾಣೆಗೆ ಕರೆದೊಯ್ದಿರಿ. ಅಲ್ಲಿಯೇ ನಾನು ನನ್ನ ಹೇಳಿಕೆ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಸಿಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳಿದ್ದಾರೆ.
ಸುದ್ದಿ ನೋಡಿ ವರದಿ ಕೇಳಿದ ರಾಜ್ಯಪಾಲ: ರಾಜ್ಯದಲ್ಲಿ ಗೋದ್ರಾ ಹತ್ಯಾಕಾಂಡ ಮಾದರಿಯ ಗಲಭೆಗೆ ಸಂಚು ಕುರಿತ ಬಿ.ಕೆ.ಹರಿಪ್ರಸಾದ್ ಅವರ ವಿವಾದಾತ್ಮಕ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯನ್ನು ಗಮನಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಅವರಿಗೆ ಸೂಚಿಸಿದ್ದರು. ಡಿಜಿಪಿ ಸೂಚನೆ ಮೇರೆಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸಿಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಸಿಸಿಬಿ ಅಧಿಕಾರಿಗಳು ಬಿ.ಕೆ.ಹರಿಪ್ರಸಾದ್ ಅವರ ವಿಚಾರಣೆಗೆ ಮುಂದಾಗಿದ್ದರು. ಆದರೆ, ಹರಿಪ್ರಸಾದ್ ಅವರು ಸಿಸಿಬಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಗೋದ್ರಾ ಮಾದರಿ ದಾಳಿ: ಹರಿಪ್ರಸಾದ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂಸದ ಡಿ.ಕೆ.ಸುರೇಶ್
ನಿರಾಕರಣೆ ಉತ್ತರವೇ ರಾಜ್ಯಪಾಲರಿಗೆ ವರದಿ: ತಮ್ಮ ಹೇಳಿಕೆ ಸಂಬಂಧ ಬಿ.ಕೆ.ಹರಿಪ್ರಸಾದ್ ಅವರು ಸ್ಪಷ್ಟನೆ ನೀಡಲು ನಿರಾಕರಿಸಿದ ಸಂಗತಿಯನ್ನೇ ಸಿಸಿಬಿ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದಾರೆ. ಈ ವರದಿಯನ್ನೇ ಡಿಜಿಪಿ ಅವರು ರಾಜ್ಯಪಾಲರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.