ಮನೆ ಮನೆಗೆ ಕಾರ್ಡ್‌ ಎಸೆದಂತೆ ಎಲ್ಲರಿಗೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha News  |  First Published May 29, 2023, 5:37 AM IST

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯ ಆಗಲಿವೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆ ಜಾರಿ ಸ್ವಲ್ಪ ವಿಳಂಬವಾಗಬಹುದು. 


ಬೆಳಗಾವಿ (ಮೇ.29): ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯ ಆಗಲಿವೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆ ಜಾರಿ ಸ್ವಲ್ಪ ವಿಳಂಬವಾಗಬಹುದು. ಆದರೆ ಕೊಟ್ಟ ಭರವಸೆ ಈಡೇರಿಸಲು ಸರ್ಕಾರ ಬದ್ಧವಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲಮಂಟಪ ಮಠದಿಂದ ಸನ್ಮಾನ ಸ್ವೀಕರಿಸಿ ಭಾನುವಾರ ಮಾತನಾಡಿದರು.

ಚುನಾವಣೆ ಸಮಯದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ರಾಜ್ಯದ ಜನ ಬಹಳಷ್ಟು ನಿರೀಕ್ಷೆಗಳನ್ನು ನಮ್ಮ ಸರ್ಕಾರದ ಮೇಲೆ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸಿದ್ಧರಿದ್ದೇವೆ. ಆದರೆ ಪ್ರತಿಪಕ್ಷಗಳು ವಿನಾಕಾರಣ ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆ ನಡೆದಿವೆ ಎಂದರು.

Tap to resize

Latest Videos

ಸಿಎಂ ಸಿದ್ದರಾಮಯ್ಯ ತವರಲ್ಲಿ ಯಾರಿಗೆ ಜಿಲ್ಲಾ ಉಸ್ತುವಾರಿ?

ಆದಾಯ ತೆರಿಗೆ ಪಾವತಿಸುವವರಿಗೆ, ಸರ್ಕಾರಿ ನೌಕರರಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಇನ್ನೂ ಕೆಲವರು ನಮಗೆ ಗ್ಯಾರಂಟಿ ಬೇಡ ಅಂದಿದ್ದಾರೆ. ಅಂಥವರಿಗೆ ಸರ್ಕಾರ ನಿಯಮ ಮಾಡಬೇಕು ಅಲ್ವಾ? ಬೇಡ ಅಂದವರಿಗೆ ಕಾನೂನು ತರುತ್ತೇವೆ. ಮುಂದಿನ ಸಚಿವ ಸಂಪುಟದಲ್ಲಿ ಇದರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು. ಕೆಲ ಕಡೆ ಮೀಟರ್‌ ಇಲ್ಲದೆ ನೇರವಾಗಿ ವಿದ್ಯುತ್‌ ಪಡೆಯುತ್ತಿದ್ದಾರೆ. ಮೊದಲು ಮೀಟರ್‌ ಹಾಕಿ ಅವರನ್ನು ಮುಖ್ಯವಾಹಿನಿಗೆ ತರಬೇಕು. ಮೋದಿಯವರು .15 ಲಕ್ಷ ಕೊಡುತ್ತೇನೆ ಎಂದಿದ್ದರು. 

ಯಾರಾದರೂ ಚರ್ಚೆ ಮಾಡಿದರಾ? ನಾವು ಗ್ಯಾರಂಟಿ ಕೊಡಲ್ಲ ಎನ್ನಲ್ಲ. ಸುಮ್ಮನೆ ಕೊಡಲು ಆಗುವುದಿಲ್ಲ. ಇನ್ನೂ ಬಹಳ ದಿನ ಇದೆ. ಸ್ವಲ್ಪ ವಿಳಂಬ ಆಗಬಹುದು. ಆದರೆ ಖಂಡಿತವಾಗಿಯೂ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಸರ್ವೇ ಮಾಡುತ್ತಿದ್ದೇವೆ. ಸರ್ಕಾರದಲ್ಲೂ ಪಟ್ಟಿಇದೆ. ಅದನ್ನು ಹೇಗೆ ಜಾರಿಗೆ ತರಬೇಕು ಎನ್ನುವುದೇ ಪ್ರಶ್ನೆಯಾಗಿದೆ ಎಂದರು. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಗ್ಯಾರಂಟಿ ಕೇವಲ ಕರ್ನಾಟಕದ ಮಹಿಳೆಯರಿಗಷ್ಟೇ ಅನ್ವಯ ಆಗಲಿದೆಯೇ ಹೊರತು ಹೊರಗಿನವರಿಗಲ್ಲ ಎಂದು ಇದೇ ವೇಳೆ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ವೈಚಾರಿ ಪರಂಪರೆಗೆ ಆಧ್ಯತೆ ನೀಡುವೆ: ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಬೆಳಗಾವಿಗೆ ಆಗಮಿಸಿದ ಸಚಿವ ಸತೀಶ ಜಾರಕಿಹೊಳಿ ಅವರು, ಚನ್ನಮ್ಮನಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿರುವ ನಿಷ್ಕಮಮಂಟಪಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರು ಆಶೀರ್ವಾದ ಹಾಗೂ, ಸನ್ಮಾನ ಸ್ವೀಕರಿಸಿದರು.

ಎಷ್ಟೇ ಹಿರಿಯರಾದರೂ ಹೈಕಮಾಂಡ್‌ ನಿರ್ಧಾರ ಫೈನಲ್‌: ವೀರಪ್ಪ ಮೊಯ್ಲಿ

ನಿಷ್ಕಲ ಮಂಟಪದ ನಿಜಗುನಾನಂದ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವಜ್ಯೋತಿ ಬಸವೇಶ್ವರ, ಬುದ್ಧ, ಡಾ. ಅಂಬೇಡ್ಕರ ಭಾವಚಿತ್ರ ನೀಡಿ ಸನ್ಮಾನ ಮಾಡಲಾಯಿತು. ಬಳಿಕ ಮಾತನಾಡಿದ ಸಚಿವ ಜಾರಕಿಹೊಳಿ, ಸ್ವಾಮೀಜಿಗಳ ಆಶೀರ್ವಾದ, ಮಾರ್ಗದರ್ಶನ ಪಡೆಯಲು ಬೈಲೂರು ಮಠಕ್ಕೆ ಬಂದಿರುವೆ. ನಿಜಗುಣಾನಂದ ಸ್ವಾಮೀಜಿ ಹಾಗೂ ನಮ್ಮ ಹೋರಾಟ ಒಂದೇ ಇರುವುದರಿಂದ ಸ್ವಾಮೀಜಿಗಳ ಜತೆಗೂಡಿ ಸಾಕಷ್ಟುಮೌಢ್ಯದ ವಿರುದ್ಧ ಹೋರಾಟ ಮಾಡಿದ್ದೇವೆ. ಅಲ್ಲದೇ ಸ್ವಾಮೀಜಿಗೆ ಮತ್ತಷ್ಟುಶಕ್ತಿ ತುಂಬಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

click me!