ಶೀಘ್ರ ಸಚಿವಾಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಶೀಘ್ರದಲ್ಲೇ ನಾನು ದೆಹಲಿಗೆ ತೆರಳಿ, ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತೇನೆ. ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚೆ ಮಾಡುತ್ತೇನೆ: ಬಸವರಾಜ ಬೊಮ್ಮಾಯಿ
ಬೆಳಗಾವಿ(ಅ.16): ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರ ಸಚಿವಾಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಶೀಘ್ರದಲ್ಲೇ ನಾನು ದೆಹಲಿಗೆ ತೆರಳಿ, ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತೇನೆ. ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚೆ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭವಾಗಿದೆ. ಜನಸಂಕಲ್ಪ ಯಾತ್ರೆ ನಡುವೆಯೇ ದೆಹಲಿ ಪ್ರವಾಸ ಕೈಗೊಳ್ಳುತ್ತೇನೆ ಎಂದರು.
ಬೆಳಗಾವಿ ಜಿಲ್ಲೆಗೆ ಈ ಬಾರಿ ಸಚಿವ ಸಂಪುಟದಲ್ಲಿ ಸಿಹಿ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ನಿಮಗೆ ತಿಳಿಯುತ್ತದೆ ಕಾಯ್ದುನೋಡಿರಿ ಎಂದರು. ಮಹಾರಾಷ್ಟ್ರದಲ್ಲಿ ಈಗಾಗಲೇ ಕನ್ನಡಕ್ಕೆ ಸಂಬಂಧಿಸಿದಂತೆ ಹಲವಾರು ಭವನಗಳಿವೆ. ಕನ್ಹೇರಿಮಠದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವುದು ಹೊಸದೇನಲ್ಲ. ಈ ವಿಚಾರದಲಿ ರಾಜ್ಯ ಮತ್ತು ಭಾಷೆ ಅಡಚಣೆಯಾಗಬಾರದು ಎಂದರು.
ಜನನಿ, ಜನ್ಮಭೂಮಿ ಗೌರವಿಸುವುದು ನಮ್ಮ ಧರ್ಮ: ಸಿಎಂ ಬೊಮ್ಮಾಯಿ
ಉತ್ತರ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ನಿಮಿತ್ತ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಡಾ.ಪ್ರಭಾಕರ ಕೋರೆ ಅವರ ಸಾಧನೆ ತುಂಬಾ ದೊಡ್ಡದು. ಉತ್ತರ ಕರ್ನಾಟಕ ಭಾಗದ ಸಾಮಾಜಿಕ, ಸಹಕಾರ, ರಾಜಕೀಯ, ಆರೋಗ್ಯ, ಹಾಗೂ ವಿವಿಧ ರಂಗಗಳಲ್ಲಿ ಅವರ ಸಾಧನೆ ತುಂಬಾ ದೊಡ್ಡದು. ಇಲ್ಲಿನ ಜನರಿಗೆ ಅವರು ಸಾಕಷ್ಟುಸಹಾಯ ಮಾಡಿದ್ದಾರೆ. ವಿವಿಧ ರಂಗಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಗುಣ ಅವರಲ್ಲಿದೆ. ಇಂಥ ನಾಯಕನ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದರು.