
ದೆಹಲಿ (ಜ.17): ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ನಾಯಕರ ದಂಡೇ ಇದ್ದರೂ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತಿನ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಹೀಗಾಗಿ, ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಸಚಿವರಾಗುತ್ತೇವೆ ಎಂದು ಆಸೆಯಿಟ್ಟುಕೊಂಡಿದ್ದವರ ಕನಸಿಗೆ ಎಳ್ಳು-ನೀರು ಬಿಟ್ಟಂತಾಗಿದೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ. ರವಿ ಸೇರಿ ಒಟ್ಟು 8 ಮಂದಿ ರಾಜ್ಯದ ನಾಯಕರು ಹಾಜರಾಗಿದ್ದರು. ಈ ವೇಳೆ ರಾಜ್ಯದಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸುವ ಲೆಕ್ಕಾಚಾರ ಮತ್ತು ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂಬ ಕುತೂಹಲ ಇತ್ತು. ಹೀಗಾಗಿ, ಸಚಿವ ಆಕಾಂಕ್ಷಿಗಳಿಗೆ ಸಿಎಂ ದೆಹಲಿಗೆ ಹೋದಾಕ್ಷಣ ರೆಕ್ಕೆಪುಕ್ಕ ಬಂದಿದ್ದವು. ಆದರೆ, ರಾಜಯ ನಾಯಕರು ದೆಹಲಿಯಲ್ಲಿ ಸಚಿವ ಸಂಪುಟದ ಬಗ್ಗೆ ಚಕಾರ ಎತ್ತದೇ ಸಭೆಯನ್ನು ಮುಗಿಸಿಕೊಂಡು ವಾಪಸ್ ಹೊರಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ: ಕರ್ನಾಟಕದ ಬಗ್ಗೆ ಮಹತ್ವದ ಚರ್ಚೆ
ಮಂತ್ರಿ ಕನಸು ಕಂಡವರಿಗೆ ನಿರಾಸೆ: ರಾಜ್ಯದಲ್ಲಿ ಮುಂದಿನ 70 ದಿನಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗಲಿದೆ. ಮುಂಬರುವ ಚುನಾವಣೆಗೂ ಮುನ್ನ ನಾವು ಸಚಿವರಾಗುತ್ತೇವೆ ಎಂದು ಹಲವು ನಾಕರು ಕನಸು ಕಂಡಿದ್ದರು. ಆದರೆ, ರಾಜ್ಯದ ನಾಯಕರು ಈ ಬಗ್ಗೆ ಚರ್ಚೆ ಮಾಡದೇ ವಾಪಸ್ ಬರುತ್ತಿದ್ದು, ಎರಡೂ ತಿಂಗಾದರೂ ಮಂತ್ರಿಯಾಗಬೇಕು ಅನ್ನೋ ರಿಗೆ ನಿರಾಸೆ ಉಂಟಾಗಿದೆ. ಆದರೆ, ಇನ್ನೆರಡು ತಿಂಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. ಈ ಹೊತ್ತಲ್ಲಿ ಸಂಪುಟದ ಕಸರತ್ತಾ? ಎಂದು ಹಿರಿಯ ನಾಯಕರು ರಾಜ್ಯ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ ಎನ್ನುವುದೂ ಕೂಡ ಕೇಳಿಬಂದಿದೆ.
ಕೈಗೆಟುಕದ ದ್ರಾಕ್ಷಿ ಹುಳಿ ಎಂದ ಆಕಾಂಕ್ಷಿಗಳು: ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವಂತೆ ಸಚಿವ ಆಕಾಂಕ್ಷಿಗಳು ಕೂಡ ತಮ್ಮ ನಿರಾಸೆಯನ್ನು ಮುಚ್ಚಿಟ್ಟುಕೊಂಡು ತಮಗೆ ಅದರ ಮೇಲೆ ಯಾವುದೇ ಆಸೆಯಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಹಳೆಯ ಬಜೆಟ್ ವೇಳೆ ಘೋಷಣೆ ಮಾಡಿದ್ದ ಎಲ್ಲ ಹಣ ಖಾಲಿಯಾಗಿದೆ. ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು ಹೊಸ ಬಜೆಟ್ ಮಂಡಿಸಿದರೂ ಅವುಗಳನ್ನು ಜನರಿಗೆ ತಲುಪಿಸಲು ಆಗಲ್ಲ. ಹೀಗಿರುವಾಗ ಮಂತ್ರಿ ಆದರೂ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲೂ ಆಗಲ್ಲ. ಆದ್ದರಿಂದ ಸಚಿವ ಸ್ಥಾನ ಬಂದರೂ ಏನು ಮಾಡಲಾಗುವುದಿಲ್ಲ. ಈ ಚುನಾವಣೆಯಲ್ಲಿ ಪುನಃ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದು ಸಚಿವರಾಗುತ್ತೇವೆ ಎಂದು ಕೆಲವು ಸಚಿವ ಆಕಾಂಕ್ಷಿಗಳು ಹೇಳಿಕೊಂಡಿದ್ದಾರೆ.
9 ರಾಜ್ಯದಲ್ಲಿ ಅಶ್ವಮೇಧಕ್ಕೆ ಬಿಜೆಪಿ ಸಜ್ಜು: ಕಾರ್ಯಕಾರಿಣಿಯಲ್ಲಿ ತೀರ್ಮಾನ
ಈ ವರ್ಷವಿಡೀ ಜೆ.ಪಿ. ನಡ್ಡಾ ರಾಷ್ಟ್ರಾಧ್ಯಕ್ಷ: ದೇಶದಲ್ಲಿ ಪ್ರಸ್ತುತ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಜೆ.ಪಿ. ನಡ್ಡಾ 2024ರವರೆಗೂ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.