
ಬೆಂಗಳೂರು(ಡಿ.26): ಸಂಕ್ರಾಂತಿ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ವಿಸ್ತರಣೆ ನಿಶ್ಚಿತವಾಗಿ ನಡೆಯಲಿದೆ ಎಂಬ ಉತ್ಸಾಹದ ಮಾತುಗಳು ಆಡಳಿತಾರೂಢ ಬಿಜೆಪಿಯ ರಾಜ್ಯ ಘಟಕದಲ್ಲಿ ಕೇಳಿಬರುತ್ತಿದ್ದರೂ ಹೈಕಮಾಂಡ್ ಮಟ್ಟದಲ್ಲಿ ಮಾತ್ರ ಅಂಥ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ, ಸಂಕ್ರಾಂತಿ ಬೆನ್ನಲ್ಲೇ ಸಂಪುಟ ವಿಸ್ತರಣೆ ನಡೆಯುತ್ತದೆಯೇ ಅಥವಾ ಬಜೆಟ್ ಅಧಿವೇಶನವರೆಗೂ ಮುಂದೂಡಲ್ಪಡುತ್ತದೆಯೇ ಎಂಬ ಚರ್ಚೆ ಆರಂಭವಾಗಿದೆ.
ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಉದ್ದೇಶ ವರಿಷ್ಠರಿಗೆ ಇದ್ದಿದ್ದರೆ ಇಷ್ಟು ಕಾಲ ವಿಳಂಬ ತಂತ್ರ ಅನುಸರಿಸುವ ಅಗತ್ಯವೇ ಇರುತ್ತಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕಾಗಿಯೇ ಎರಡು ಬಾರಿ ದೆಹಲಿಗೆ ಹೋಗಿ ಬಂದರು. ದೂರವಾಣಿ ಮೂಲಕವೂ ಹಲವು ಬಾರಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದರು. ಆದರೂ ವರಿಷ್ಠರು ಮಾತ್ರ ಇನ್ನಷ್ಟುಕಾಲ ಕಾಯಿರಿ ಎಂಬ ಮಾತನ್ನೇ ತಣ್ಣಗೆ ಹೇಳುತ್ತಿರುವುದರ ಹಿಂದಿನ ಮರ್ಮ ಬಿಜೆಪಿ ನಾಯಕರಿಗೂ ಅರ್ಥವಾಗುತ್ತಿಲ್ಲ.
ತಾವು ಹಿಂದೆ ಸರ್ಕಾರ ರಚನೆ ವೇಳೆ ನೀಡಿದ ಮಾತಿನಂತೆ ತ್ಯಾಗ ಮಾಡಿ ಬಂದವರಿಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿಗಳು ಸಿಲುಕಿದ್ದಾರೆ. ಎಂ.ಟಿ.ಬಿ.ನಾಗರಾಜ್, ಎಂ.ಶಂಕರ್ ಹಾಗೂ ಮುನಿರತ್ನ ಅವರು ಸಚಿವರಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಪೈಕಿ ನಾಗರಾಜ್ ಮತ್ತು ಶಂಕರ್ ಅವರು ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಅಲವತ್ತುಕೊಂಡಿದ್ದಾರೆ. ಅವರಿಗೆ ಉತ್ತರ ನೀಡಲು ಸಾಧ್ಯವಾಗದೆ ಯಡಿಯೂರಪ್ಪ ಅವರು ಮುಜುಗರಪಟ್ಟುಕೊಳ್ಳುತ್ತಿರುವುದು ಗುಟ್ಟಿನ ವಿಷಯವೇನಲ್ಲ.
ಸಂಪುಟ ವಿಸ್ತರಣೆ: ವಲಸಿಗರಿಗೆ ಸಚಿವ ಸ್ಥಾನ ಸಿಗುವ ಸಂಭವ
ಸಂಪುಟ ಪುನಾರಚನೆ ಮಾಡುವ ಬಗ್ಗೆಯೇ ಮುಖ್ಯಮಂತ್ರಿಗಳು ಒಲವು ಹೊಂದಿದ್ದು, ಅದಾಗದಿದ್ದರೆ ಕನಿಷ್ಠ ವಿಸ್ತರಣೆಯನ್ನಾದರೂ ಮಾಡಲು ಅವಕಾಶ ನೀಡಿ ಎಂಬ ಮಾತನ್ನು ವರಿಷ್ಠರಿಗೆ ಹೇಳಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟಪ್ರತಿಕ್ರಿಯೆ ನೀಡದ ವರಿಷ್ಠರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಬಜೆಟ್ ಅಧಿವೇಶನದ ಬಳಿಕ ಪುನಾರಚನೆಯನ್ನೇ ಕೈಗೊಳ್ಳುವ ಉದ್ದೇಶ ವರಿಷ್ಠರಿಗಿದ್ದರೆ ಅದನ್ನು ಸ್ಪಷ್ಟವಾಗಿ ತಿಳಿಸಲಿ ಎಂದು ಯಡಿಯೂರಪ್ಪ ಅವರ ಆಪ್ತರು ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.