ಉಪಚುನಾವಣೆ, ಬಿಜೆಪಿ ಜಯಭೇರಿ: SP ಭದ್ರಕೋಟೆಗಳು ಬಿಜೆಪಿ ಪಾಲು, ಆಪ್‌ಗೂ ಮುಖಭಂಗ!

By Kannadaprabha NewsFirst Published Jun 27, 2022, 6:35 AM IST
Highlights

* ಸಮಾಜವಾದಿ ಪಕ್ಷದ ಭದ್ರಕೋಟೆಗಳು ಕೇಸರಿ ಪಾಲು

* ಆಪ್‌ಗೆ ಲೋಕಸಭೆಯಲ್ಲೀಗ ಸದಸ್ಯರೇ ಇಲ್ಲ!

* 3 ವಿಧಾನಸಭೆ, 2 ಲೋಕಸಭೆ ಸೀಟು ಬಿಜೆಪಿಗೆ

* ಪಂಜಾಬ್‌ ಸಿಎಂ ತವರು ಕ್ಷೇತ್ರದಲ್ಲೇ ಆಪ್‌ಗೆ ಸೋಲು

ನವದೆಹಲಿ(ಜೂ.27): 6 ರಾಜ್ಯಗಳ 3 ಲೋಕಸಭೆ ಹಾಗೂ 7 ವಿಧಾನಸಭೆ ಕ್ಷೇತ್ರಗಳಿಗೆ ಜೂ.23ರಂದು ನಡೆದಿದ್ದ ಉಪಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದೆ. 3 ಲೋಕಸಭೆ ಕ್ಷೇತ್ರಗಳ ಪೈಕಿ 2ರಲ್ಲಿ ಮತ್ತು 7 ವಿಧಾನಸಭೆ ಕ್ಷೇತ್ರಗಳಲ್ಲಿ 3ರಲ್ಲಿ ಬಿಜೆಪಿ ಜಯ ಸಂಪಾದಿಸಿದೆ. ವಿಶೇಷವೆಂದರೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದ್ದ ಆಜಂಗಢ ಹಾಗೂ ರಾಂಪುರ ಲೋಕಸಭೆ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ಮತ್ತೊಂದೆಡೆ ತ್ರಿಪುರಾದಲ್ಲಿ ಇತ್ತೀಚೆಗಷ್ಟೇ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿಯ ಮಾಣಿಕ್‌ ಸಾಹಾ ಜಯ ಗಳಿಸಿದ್ದಾರೆ.

ಇದೇ ವೇಳೆ, ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್‌ ಮಾನ್‌ ಲೋಕಸಭೆ ಕ್ಷೇತ್ರವಾಗಿದ್ದ ಸಂಗ್ರೂರ್‌ನಲ್ಲಿ ಆಪ್‌ ಅಭ್ಯರ್ಥಿ 5 ಸಾವಿರಕ್ಕೂ ಹೆಚ್ಚು ಮತದಿಂದ ಸೋತಿದ್ದಾರೆ. ಇಲ್ಲಿ ಪ್ರತ್ಯೇಕ ಖಲಿಸ್ತಾನಿ ಹೋರಾಟ ನಡೆಸುವ ಶಿರೋಮಣಿ ಅಕಾಲಿದಳ (ಅಮೃತಸರ) ಪಕ್ಷದ ಸಿಮ್ರನ್‌ಜಿತ್‌ ಸಿಂಗ್‌ ಮಾನ್‌ ಗೆದ್ದಿದ್ದಾರೆ. ಪಂಜಾಬ್‌ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 117ರ ಪೈಕಿ 92 ಸ್ಥಾನ ಗೆದ್ದ 3 ತಿಂಗಳಲ್ಲೇ ಸಂಭವಿಸಿದ ಈ ಸೋಲು ಆಪ್‌ಗೆ ಭಾರೀ ಮುಖಭಂಗ ಉಂಟು ಮಾಡಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗೆದ್ದಿದ್ದ ಆಪ್‌ ಈಗ ಅದನ್ನೂ ಕಳೆದುಕೊಂಡಿದ್ದು, ಲೋಕಸಭೆಯಲ್ಲಿ ಆ ಪಕ್ಷಕ್ಕೆ ಪ್ರಾತಿನಿಧ್ಯವೇ ಇಲ್ಲದಂತಾಗಿದೆ.

ಉ.ಪ್ರ.ದಲ್ಲಿ ಎಸ್‌ಪಿ ಮುಖಭಂಗ:

ಉತ್ತರಪ್ರದೇಶದಲ್ಲಿ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ರಾಜೀನಾಮೆಯಿಂದ ತೆರವಾದ ಆಜಂಗಢ ಕ್ಷೇತ್ರದಲ್ಲಿ ಬಿಜೆಪಿಯ ದಿನೇಶ್‌ ಲಾಲ್‌ ಯಾದವ್‌ ‘ನಿರಾಹುವಾ’ 42000 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದೇ ವೇಳೆ ಎಸ್‌ಪಿ ನಾಯಕ ಆಜಂಖಾನ್‌ರ ಭದ್ರಕೋಟೆ ರಾಂಪುರದಲ್ಲಿ ಬಿಜೆಪಿಯ ಘನಶಾಂ ಸಿಂಗ್‌ ಲೋಧಿ 8679 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಮೂಲಕ ಯೋಗಿ ಪಡೆಯು ಅಖಿಲೇಶ್‌ ಪಡೆಯ ಗರ್ವಭಂಗ ಮಾಡಿದೆ.

ತ್ರಿಪುರಾದಲ್ಲಿ ಕಮಲ ಕಲರವ:

ತ್ರಿಪುರಾದ 4 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 3 ಹಾಗೂ ಕಾಂಗ್ರೆಸ್‌ 1ರಲ್ಲಿ ಗೆದ್ದಿವೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಆಗಿದ್ದ ಬಿಜೆಪಿ ರಾಜ್ಯಸಭೆ ಸದಸ್ಯ ಮಾಣಿಕ್‌ ಸಾಹಾ ಗೆದ್ದಿರುವವರಲ್ಲಿ ಪ್ರಮುಖರು. ಕಳೆದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್‌ 1 ಸ್ಥಾನ ಗೆದ್ದಿದೆ.

ಇತರರಿಗೆ ಅಲ್ಪತೃಪ್ತಿ:

ದಿಲ್ಲಿಯಲ್ಲಿ ಆಪ್‌, ಆಂಧ್ರದಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌, ಜಾರ್ಖಂಡಲ್ಲಿ ಕಾಂಗ್ರೆಸ್‌, ತ್ರಿಪುರಾದಲ್ಲಿ ಕಾಂಗ್ರೆಸ್‌ಗೆ ತಲಾ 1 ಸೀಟು ಗೆದ್ದಿವೆ.

ಐತಿಹಾಸಿಕ ಜಯ

ಆಜಂಗಢ, ರಾಂಪುರದಲ್ಲಿನ ಬಿಜೆಪಿ ಉಪಚುನಾವಣಾ ಜಯ ಐತಿಹಾಸಿಕ. ಇದು ಬಿಜೆಪಿಗೆ ಸರ್ವವ್ಯಾಪಿ ಮಾನ್ಯತೆ ದೊರಕುತ್ತಿದೆ ಹಾಗೂ ಡಬಲ್‌ ಎಂಜಿನ್‌ ಸರ್ಕಾರಗಳು ಉ.ಪ್ರ. ಹಾಗೂ ಕೇಂದ್ರದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬುದರ ಸಂಕೇತ. ಹಾಗೆಯೇ ತ್ರಿಪುರಾದಲ್ಲೂ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದಕ್ಕಾಗಿ ನಾನು ಕಾರ್ಯಕರ್ತರು, ಜನರಿಗೆ ಆಭಾರಿ.

ಯಾವ ಪಕ್ಷಕ್ಕೆ ಎಷ್ಟುಸ್ಥಾನ?

3 ಲೋಕಸಭೆ

ಬಿಜೆಪಿ: 2

ಅಕಾಲಿ ದಳ (ಪ್ರತ್ಯೇಕ ಬಣ): 1

7 ವಿಧಾನಸಭೆ

ಬಿಜೆಪಿ: 3

ಕಾಂಗ್ರೆಸ್‌: 2

ಆಪ್‌: 1

ವೈಎಸ್ಸಾರ್‌: 1

click me!