ನಾಳೆ 3 ಕ್ಷೇತ್ರಗಳ ಉಪಚುನಾವಣೆ ರಿಸಲ್ಟ್‌: ರಾಜಕೀಯ ಪಕ್ಷಗಳಲ್ಲಿ ಹೆಚ್ಚಿದ ಟೆನ್ಷನ್‌..!

By Kannadaprabha NewsFirst Published May 1, 2021, 11:49 AM IST
Highlights

ಬೆಳಗಾವಿ ಲೋಕಸಭೆ, ಮಸ್ಕಿ, ಬಸವಲ್ಯಾಣ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆಗೆ ಕ್ಷಣಗಣನೆ| ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ| ಕಾಂಗ್ರೆಸ್‌, ಬಿಜೆಪಿ ನಡುವಿನ ಜಿದ್ದಾಜಿದ್ದಿನ ಹೋರಾಟದ ಫಲಿತಾಂಶಕ್ಕೆ ಸಜ್ಜು| 15 ದಿನಗಳ ಬಳಿಕ ಫೈನಲ್‌ ಟೆಸ್ಟ್‌ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು| 

ಬೆಂಗಳೂರು(ಮೇ.01): ಕೊರೋನಾ ಸೋಂಕಿನ ರುದ್ರನರ್ತನದ ಮಧ್ಯೆಯೇ ಭಾನುವಾರ ರಾಜ್ಯದ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಫಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳು ಕುತೂಹಲದಿಂದ ದೃಷ್ಟಿನೆಟ್ಟಿವೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಇದೇ ತಿಂಗಳ 17ರಂದು ಮತದಾನ ನಡೆದಿತ್ತು. 15 ದಿನಗಳ ಬಳಿಕ ಮತ ಎಣಿಕೆ ನಡೆಯಲಿದೆ.

ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಈ ಪೈಕಿ ಜೆಡಿಎಸ್‌ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಉಪಚುನಾವಣೆಯ ಗಮನಾರ್ಹ ಅಂಶವೆಂದರೆ, ಮೂರೂ ಕ್ಷೇತ್ರಗಳಲ್ಲೂ ಪ್ರತಿಪಕ್ಷ ಕಾಂಗ್ರೆಸ್‌ ಆಡಳಿತಾರೂಢ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದೆ. ಹೀಗಾಗಿಯೇ ಎಲ್ಲ ಕ್ಷೇತ್ರಗಳಲ್ಲೂ ಗೆಲುವಿನ ಮತಗಳ ಅಂತರ ಹೆಚ್ಚು ಇರುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಫಲಿತಾಂಶದಿಂದ ಆಳುವ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗದಿದ್ದರೂ ವರ್ಚಸ್ಸಿನ ಮೇಲೆ ಪ್ರಭಾವ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹೀಗಾಗಿ, ಆ ಪಕ್ಷಕ್ಕೆ ಸಹಜವಾಗಿಯೇ ಉಪಚುನಾವಣೆಯ ಫಲಿತಾಂಶ ಬಹುಮುಖ್ಯವಾದದ್ದು. ಕಳೆದ ಉಪಚುನಾವಣೆಗಳಲ್ಲಿ ಸೋಲುಂಡಿರುವ ಕಾಂಗ್ರೆಸ್‌ಗೆ ಇಲ್ಲಿ ಗೆಲುವು ಸಿಕ್ಕಿದಲ್ಲಿ ಮುಂದಿನ ಹೆಜ್ಜೆಗೆ ಬಲ ಬಂದಂತಾಗುತ್ತದೆ.

ರಾಜ್ಯದ ಉಪಚುನಾವಣೆಯ ಮೂರೂ ಕಡೆ ಜಿದ್ದಾಜಿದ್ದಿ ಫೈಟ್‌ : ಯಾರಿಗೆ ವಿಜಯ..?

ಮೂರು ಕ್ಷೇತ್ರಗಳ ಪೈಕಿ ಕಳೆದ ಸಾರ್ವತ್ರಿಕ ಚುನಾವಣೆ ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದ್ದರೆ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳು ಕಾಂಗ್ರೆಸ್‌ ಗೆದ್ದಿತ್ತು. ಇದೀಗ ಉಭಯ ಪಕ್ಷಗಳು ತಮ್ಮ ಸ್ಥಾನವನ್ನಷ್ಟೇ ಉಳಿಸಿಕೊಳ್ಳುತ್ತವೆಯೊ ಅಥವಾ ಕಳೆದುಕೊಳ್ಳುತ್ತವೆಯೊ ಎಂಬುದನ್ನು ಕಾದು ನೋಡಬೇಕು. ಬೆಳಗಾವಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಸಾರ್ವತ್ರಿಕ ಚುನಾವಣೆಗಿಂತ ಕಡಮೆಯಾಗಿದ್ದರೆ, ಮಸ್ಕಿ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಇದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಗೆದ್ದಿತ್ತು. ಕೇಂದ್ರದ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಂತಿಮವಾಗಿ ಅವರ ಪತ್ನಿ ಮಂಗಲಾ ಅಂಗಡಿ ಅವರನ್ನೇ ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು. ಅನುಕಂಪ ಆಧಾರಿತ ಮತಗಳನ್ನು ಗಳಿಸುವ ತಂತ್ರವೂ ಅದರ ಹಿಂದೆ ಅಡಗಿತ್ತು. ಅವರಿಗೆ ಎದುರಾಳಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ್‌ ಜಾರಕಿಹೊಳಿ ಸ್ಪರ್ಧಿಸಿದ್ದಾರೆ. ಮರಾಠಾ ಮತದಾರರನ್ನು ನಂಬಿಕೊಂಡು ಎಂಇಎಸ್‌ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಎಂಇಎಸ್‌ ಅಭ್ಯರ್ಥಿ ಎಷ್ಟುಮತಗಳನ್ನು ಗಳಿಸುತ್ತಾರೆ ಎಂಬುದರ ಮೇಲೆ ಗೆಲ್ಲುವ ಅಭ್ಯರ್ಥಿಯ ಅಂತರ ನಿರ್ಧಾರವಾಗಲಿದೆ.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸತೀಶ ಜಾರಕಿಹೊಳಿ

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಹಿಂದಿನವರೇ ಆಗಿದ್ದರೂ ಅವರವರ ಪಕ್ಷಗಳು ಅದಲು ಬದಲಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾಂಗ್ರೆಸ್‌ ‘ತ್ಯಾಗ’ ಮಾಡಿ ಬಂದಿದ್ದ ಪ್ರತಾಪ್‌ಗೌಡ ಪಾಟೀಲ್‌ ಅವರು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಮುಖ್ಯಮಂತ್ರಿಗಳ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ಕ್ಷೇತ್ರದ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಫಲಿತಾಂಶದ ಬಗ್ಗೆ ಕುತೂಹಲ ಏರ್ಪಟ್ಟಿದೆ.

ಇನ್ನು ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿ.ನಾರಾಯಣರಾವ್‌ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಪತ್ನಿ ಮಲ್ಲಮ್ಮ ಅವರನ್ನೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯಾಗಿಸಿದೆ. ಬಿಜೆಪಿಯಿಂದ ಹೊಸ ಮುಖ ಶರಣು ಸಲಗಾರ ಸ್ಪರ್ಧಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಪ್ರಬಲ ಪೈಪೋಟಿ ಒಡ್ಡಿರುವುದು ಬಿಜೆಪಿಗೆ ಆತಂಕ ಉಂಟು ಮಾಡಿದೆ. ಖೂಬಾ ಎಷ್ಟುಮತಗಳನ್ನು ಕಸಿಯಲಿದ್ದಾರೆ ಎಂಬುದರ ಮೇಲೆ ಈ ಕ್ಷೇತ್ರದ ಗೆಲುವು ನಿರ್ಧಾರವಾಗಲಿದೆ.
 

click me!