ಜೆಡಿಎಸ್‌ ಕೋಟೆ ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಿದ್ದ ತಂತ್ರಗಾರನಿಗೆ ಒಲಿದ ರಾಜ್ಯಾದ್ಯಕ್ಷ ಸ್ಥಾನ..!

By Kannadaprabha News  |  First Published Nov 11, 2023, 12:29 PM IST

ಉನ್ನತ ಹುದ್ದೆಗೇರಲು ವಿಜಯೇಂದ್ರ ಅವರ ತಂದೆ ಹಾಗೂ ಮಾಜಿ ಮುಖ್ಯಮತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಭಾವ ದಟ್ಟವಾಗಿ ಕೆಲಸ ಮಾಡಿರಬಹುದಾದರೂ ಸ್ವತಃ ವಿಜಯೇಂದ್ರ ಅವರ ಸಾಮರ್ಥ್ಯ ಕೂಡ ಮುಖ್ಯ ಭೂಮಿಕೆಯಲ್ಲಿ ಕೆಲಸ ಮಾಡಿದೆ. ಪಕ್ಷದ ರಾಷ್ಟ್ರೀಯ ನಾಯಕರ ಗಮನ ಸೆಳೆದಿದೆ.


ಗೋಪಾಲ್‌ ಯಡಗೆರೆ

ಶಿವಮೊಗ್ಗ(ನ.11):  ಕೇವಲ ಒಂದೂವರೆ ದಶಕದಲ್ಲೇ ರಾಜ್ಯದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ವಿಜಯೇಂದ್ರ ಅವರು ಹಿಡಿದಿದ್ದಾರೆ. ಉನ್ನತ ಹುದ್ದೆಗೇರಲು ವಿಜಯೇಂದ್ರ ಅವರ ತಂದೆ ಹಾಗೂ ಮಾಜಿ ಮುಖ್ಯಮತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಭಾವ ದಟ್ಟವಾಗಿ ಕೆಲಸ ಮಾಡಿರಬಹುದಾದರೂ ಸ್ವತಃ ವಿಜಯೇಂದ್ರ ಅವರ ಸಾಮರ್ಥ್ಯ ಕೂಡ ಮುಖ್ಯ ಭೂಮಿಕೆಯಲ್ಲಿ ಕೆಲಸ ಮಾಡಿದೆ. ಪಕ್ಷದ ರಾಷ್ಟ್ರೀಯ ನಾಯಕರ ಗಮನ ಸೆಳೆದಿದೆ.

Tap to resize

Latest Videos

೨೦೦೬ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು, ತಾವು ಉಪ ಮುಖ್ಯಮಂತ್ರಿಯಾದಾಗ ಮೊದಲ ಬಾರಿಗೆ ರಾಜಕೀಯ ವಲಯಲ್ಲಿ ಕಾಣಿಸಿಕೊಂಡ ಬಿ.ವೈ.ವಿಜಯೇಂದ್ರ ಆ ಬಳಿಕ ಇಟ್ಟಿದ್ದೆಲ್ಲ ಆನೆಯ ಹೆಜ್ಜೆ. ಆವರೆಗೆ ತಮ್ಮ ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುತ್ತಿದ್ದ ವಿಜಯೇಂದ್ರ ಅವರು ತಂದೆ ಯಡಿಯೂರಪ್ಪ ಅವರ ಅಧಿಕಾರದ ಛತ್ರಿಯ ಕೆಳಗೆ ಬಂದ ಬಳಿಕ ಪ್ರಭಾವಿ ನಾಯಕರಂತೆ ಕಾಣಿಸತೊಡಗಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮತ್ತಷ್ಟು ಪ್ರಭಾವಿಯಾದರು. ಒಂದು ಹಂತಲ್ಲಿ ಸಚಿವರು ಕೂಡ ವಿಜಯೇಂದ್ರ ಅವರ ಮನೆಯತ್ತ ಪದೇ ಪದೆ ಹೋಗುವುದು ರೂಢಿಯಾಗುವಷ್ಟರ ಮಟ್ಟಿಗೆ ಅವರು ತಮ್ಮ ಪ್ರಭಾವ ಹೆಚ್ಚಿಸಿಕೊಂಡಿದ್ದರು. ಇದೇ ಕಾರಣಕ್ಕೆ ಟೀಕೆಗಳೂ ಹೆಚ್ಚಿದ್ದವು.

ತಂದೆಯ ಹಾದಿ ತುಳಿದ ವಿಜಯೇಂದ್ರಗೆ ಮಹತ್ತರ ಹುದ್ದೆ..!

೨೦೧೩ರಲ್ಲಿ ಕೆಪಿಜೆಪಿಯಿಂದ ಯಡಿಯೂರಪ್ಪ ಬಿಜೆಪಿಗೆ ಮರಳಿದಾಗ ಅವರ ಜೊತೆಗೆ ಬಂದ ವಿಜಯೇಂದ್ರ ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳತೊಡಗಿದರು. ೨೦೧೮ರ ಚುನಾವಣೆಯಲ್ಲಿ ವರುಣದಿಂದ ಇವರಿಗೆ ಟಿಕೆಟ್‌ ನೀಡಬೇಕೆಂಬ ತೀವ್ರ ಒತ್ತಡ ಬರುವಷ್ಟರ ಮಟ್ಟಿಗೆ ಆ ಭಾಗದಲ್ಲಿ ನಾಯಕರಾಗಿ ರೂಪುಗೊಂಡಿದ್ದರು. ಟಿಕೆಟ್‌ ಸಿಗದೆ ಇದ್ದರೂ ತಮ್ಮ ಪಕ್ಷದ ಸಂಘಟನೆಯ ವಿಚಾರದಲ್ಲಿ ಹಿಂದೆ ಮುಂದೆ ನೋಡಲಿಲ್ಲ. ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಘಟನೆ ಬಲಪಡಿಸುವಲ್ಲಿ ಅವರು ಮಾಡಿದ ಕೆಲಸ ಹೆಸರು ತಂದುಕೊಟ್ಟಿತು. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದು ಇಡೀ ಬಿಜೆಪಿ ನಾಯಕರ ಹುಬ್ಬು ಮೇಲೇರುವಂತೆ ಮಾಡಿದ್ದಲ್ಲದೆ, ಚುನಾವಣಾ ತಂತ್ರಗಾರ ಎಂಬ ಹೆಸರನ್ನೂ ಪಡೆದರು. ಆ ಬಳಿಕ ರಾಜ್ಯ ಉಪಾಧ್ಯಕ್ಷ ಸ್ಥಾನ ಇವರಿಗೆ ಒಲಿಯಿತು. ೨೦೧೮ರ ಚುನಾವಣೆಯಲ್ಲಿ ತಮ್ಮಕ್ಷೇತ್ರಕ್ಕೆ ಬರುವಂತೆ ಬಿಜೆಪಿ ನಾಯಕರು ಇವರಿಗೆ ದುಂಬಾಲು ಬಿದ್ದಿದ್ದು, ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

೨೦೧೯ರಲ್ಲಿ ಜೆಡಿಎಸ್-ಕಾಂಗ್ರೆಸ್‌ ಸರ್ಕಾರ ಪತನಗೊಳ್ಳುವ ಹೊತ್ತಿನಲ್ಲಿ ಇದರ ಹಿಂದೆ ಇದ್ದವರು ಮತ್ತು ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು ವಿಜಯೇಂದ್ರ. ಆಗಲೇ ಕೇಂದ್ರ ವರಿಷ್ಠರ ಗಮನ ಸೆಳೆದಿದ್ದ ವಿಜಯೇಂದ್ರ ನಂತರ ನಡೆದ ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಇಷ್ಟಾಗಿಯೂ ಚುನಾವಣಾ ರಾಜಕೀಯ ಇವರಿಗೆ ದಕ್ಕಿರಲಿಲ್ಲ. ವಿಧಾನಪರಿಷತ್‌ ಮೂಲಕ ಪ್ರವೇಶ ಪಡೆಯಬೇಕೆಂಬ ಆಸೆಯೂ ಈಡೇರಿರಲಿಲ್ಲ. ಆದರೆ ೨೦೨೩ ಅವರಿಗೆ ಅದೃಷ್ಟದ ವರ್ಷ. ಒಂದೆಡೆ ಶಾಸಕರಾದರೆ ಇನ್ನೊಂದೆಡೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವೂ ಒಲಿದು ಬಂದಿದೆ.

click me!