
ಕಲಬುರಗಿ (ಅ.02): ಕಲ್ಯಾಣ ಕರ್ನಾಟಕದ ಜನ ಪ್ರವಾಹದಿಂದ ತತ್ತರಿಸಿದ್ದರೆ, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿಯ ಪಗಡೆಯಾಟದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಕಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕಲಬುರಗಿಗೆ ಆಗಮಿಸಿರುವ ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪರಿಹಾರ ನೀಡದೇ ಕುಂಭಕರ್ಣ ನಿದ್ರೆಗೆ ಜಾರಿದೆ, ಜಾತಿ ಗಣತಿ ಪಗಡೆಯಾಟದಲ್ಲಿ ಮಗ್ನವಾಗಿದೆ ಎಂದು ಲೇವಡಿ ಮಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 70ರಷ್ಟು ಬೆಳೆ ಹಾನಿಯಾಗಿದೆ. ಅನ್ನದಾತರ ಗಾಯದ ಮೇಲೆ ಅತಿವೃಷ್ಟಿ ಬರೆ ಎಳೆದಿದೆ. ಸರ್ಕಾರ ತಕ್ಷಣವೇ ರೈತರ ನೆರವಿಗೆ ಧಾವಿಸೋದು ಬಿಟ್ಟು ಕೈಕಟ್ಟಿ ಕುಳಿತಿದೆ. ಕೂಡಲೇ ಸರ್ಕಾರ ಸಂಕಷ್ಟದಲ್ಲಿರುವ ರೈತರ, ಜನರ ನೆರವಿಗೆ ಧಾವಿಸಬೇಕು ಎಂದರು. ವಿಶೇಷ ವಿಮಾನದಲ್ಲಿ ಸಿಎಂ ಕಲಬುರಗಿಗೆ ಭೇಟಿ ಸ್ವಾಗತಿಸುವೆ, ಆದರೆ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿಗೆ ಜನರ ಬಳಿಗೆ ಹೋಗಲು ಹೇಳಿ. ನಿಮ್ಮ ಕೃಷಿ, ಕಂದಾಯ ಸಚಿವರು ಯಾರು? ಎಂದು ಜನ ಕೇಳುತ್ತಿದ್ದಾರೆ. ಮೊದಲು ಅವರಿಗೆ ಜನರ ಬಳಿಗೆ ಹೋಗಲು ಹೇಳಿ ಎಂದು ವಿಜಯೇಂದ್ರ ಸಿದ್ದರಾಮಯ್ಯನವರಿಗೆ ಕಿವಿಮಾತು ಹೇಳಿದರು.
ಕಲಬುರಗಿಗೆ ಬರುವ ಮುನ್ನ ಸಿಎಂ ಅವರು, ಪರಿಹಾರ ಘೋಷಣೆ ಮಾಡಿಕೊಂಡು ಬರಬೇಕಿತ್ತು. ಕೇಂದ್ರಕ್ಕೆ ನಿಯೋಗ ಅಗತ್ಯ ಇಲ್ಲ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಏನು ಬರಬೇಕೋ ಬರುತ್ತದೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಏನು ಮಾಡಿದ್ರೋ ಹಾಗೆ ಮಾಡಿ ಎಂದು ಸಿದ್ದರಾಮಯ್ಯನವರಿಗೆ ವಿಜಯೇಂದ್ರ ಸಲಹೆ ನೀಡಿದರು.
ಜಾತಿ ಗಣತಿ ಮೂಲಕ ರಾಜ್ಯ ಸರ್ಕಾರ ಪಗಡೆ ಆಟ ಆಡುತ್ತಿದೆ. 180 ಕೋಟಿ ಖರ್ಚು ಮಾಡಿ ಕಾಂತರಾಜ್ ವರದಿ ಮಾಡಿಸಿದ್ರಿ, ಆದರೆ, ಯಾಕೆ ಅದನ್ನು ಜಾರಿಗೆ ತರಲಿಲ್ಲ?, ಜಾತಿ ಸಮೀಕ್ಷೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರದವರು ಜಾತಿ ಜನಗಣತಿ ನೆಪ ಮಾಡಿಕೊಂಡು ಪಗಡೆ ಆಟ ಆಡುತ್ತಿದ್ದಾರೆಂದು ವಿಜಯಂದ್ರ ತಿವಿದರು. ಗಣತಿ ನೆಪದಲ್ಲಿ ಹಿಂದೂ ಸಮಾಜ ಒಡೆವ ಕೆಲಸ ಮಾಡುತ್ತಿದ್ದಾರೆ, ಜಾತಿ ಜನಗಣತಿಗೆ ನಮ್ಮ ವಿರೋಧ ಇಲ್ಲ.
ಆದರೆ, ಸಿಎಂ ಅವರೇ ನಿಮ್ಮ ನಿಲುವಿಗೆ ವಿರೋಧ ಇದೆ. ಜಾತಿ ಗಣತಿ ಹೆಸರಲ್ಲಿ ಸಿಎಂ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಶೋಷಿತರ, ಹಿಂದುಳಿದ ಸಮುದಾಯಗಳಿಗೆ ನ್ಯಾಯ ಕೊಡುವ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ, ಸಿದ್ರಾಮಯ್ಯನವರ ಮೈಂಡ್ ಸೆಟ್ ನ್ನು ನಾವು ವಿರೋಧ ಮಾಡುತ್ತೇವೆ. ಗಣತಿಯಲ್ಲಿ 60-70 ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಏಕೆ ಹುಟ್ಟು ಹಾಕಿದ್ದಾರೆಂದು ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದರು. ಮಾಜಿ ಡಿಸಿಎಂ ಗೋವಿಂದ ಕಾರಜೋಳ್, ಮೇಲ್ಮನೆ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಉಮೇಶ ಜಾಧವ್ , ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾಧ್ಯಕ್ಷ ಅಶೋಕ ಬಗಲಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.