ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ

Published : Dec 09, 2025, 07:38 AM IST
BY Vijayendra

ಸಾರಾಂಶ

ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಸುವರ್ಣ ವಿಧಾನಸೌಧ (ಡಿ.09): ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಸುವರ್ಣ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಕಬ್ಬು ಬೆಳೆಗಾರರು, ಮೆಕ್ಕೆ ಜೋಳ ಬೆಳೆಗಾರರು, ಭತ್ತ ಬೆಳೆಯುವ ರೈತರು, ತೊಗರಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದ ಇಡೀ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಹಿನ್ನಡೆಯಾಗಿದೆ. ಇವುಗಳ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಹಳ ನಿಸ್ಸೀಮರಾಗಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಎಲ್ಲದಕ್ಕೂ ಕೇಂದ್ರವನ್ನು ದೂರುತ್ತಾರೆ. ಅವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವುದರಲ್ಲೂ ನಿಸ್ಸೀಮರಿದ್ದಾರೆ. ಸಿದ್ದರಾಮಯ್ಯ ತಾವು ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತೇ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಈ ನಾಟಕ ಮಾಡುತ್ತಿದ್ದಾರೆ. ಈ ಬಗ್ಗೆಯೂ ಸದನದಲ್ಲಿ ಚರ್ಚಿಸಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ ಸರ್ಕಾರದಲ್ಲಿ ಆಂತರಿಕ ಕಚ್ಚಾಟದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ದಿನದಿಂದ ದಿನಕ್ಕೆ ಭ್ರಷ್ಟಾಚಾರ, ನಿರುದ್ಯೋಗ ಹೆಚ್ಚಳವಾಗಿದೆ. ಆಂತರಿಕ ಕಚ್ಚಾಟದಿಂದ ರಾಜ್ಯದ ಜನರ ಮೇಲೆ ಕರಿ ನೆರಳು ಬೀರಿದೆ. ರೈತರ ಸಮಸ್ಯೆ ಬಗೆಹರಿಸಲು ಇವರಿಗೆ ಆಗಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕ ಸರ್ಕಾರವನ್ನು ಎಟಿಎಂ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ಧ ಇಂದು ಹೋರಾಟಕ್ಕೆ ಬಿಜೆಪಿ ಸಜ್ಜು: ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಕಾಂಗ್ರೆಸ್‌ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಡಿ.9ರಂದು ಬೆಳಗ್ಗೆ 11 ಗಂಟೆಗೆ ಬೃಹತ್‌ ಹೋರಾಟಕ್ಕೆ ಬಿಜೆಪಿ ಅಣಿಯಾಗಿದೆ. ಪ್ರತಿಭಟನೆಯಲ್ಲಿ ಅಂದಾಜು ರಾಜ್ಯದ ನಾನಾ ಭಾಗಗಳಿಂದ ಸರಿಸುಮಾರು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಬಿಜೆಪಿ ನಾಯಕರು ಪ್ರತಿಭಟಿಸಲಿರುವ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಈಗಾಗಲೇ ವೇದಿಕೆ ಸಿದ್ಧಗೊಂಡಿದೆ. ಪ್ರತಿಭಟನೆಯ ಮುನ್ನಾ ದಿನ ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್‌.ಅಶೋಕ್​, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ವೇದಿಕೆ ಹಾಗೂ ಇತರೆ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.ಪಕ್ಷದ ಶಾಸಕರು, ಮಾಜಿ ಸಚಿವರು, ಪಕ್ಷದ ಮುಖಂಡರು, ರೈತರು ಸೇರಿದಂತೆ ಸುಮಾರು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರತಿಭಟನೆ ಬಳಿಕ ಬಿಜೆಪಿ ಕಾರ್ಯಕರ್ತರು ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡುವುದು, ಉದ್ದು, ಹೆಸರು, ಮೆಕ್ಕೆಜೋಳ ಸೇರಿದಂತೆ ಮತ್ತಿತರ ಬೆಳೆಗಳಿಗೂ ಬೆಂಬಲ ಬೆಲೆ ಘೋಷಣೆ ಮಾಡಿ, ಗ್ರಾಮೀಣ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ಹಕ್ಕೊತ್ತಾಯ ಮಾಡಲಿದೆ.

ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ- ವಿಜಯೇಂದ್ರ

ಪ್ರತಿಭಟನಾ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ. ಕಬ್ಬು ಬೆಳೆಗಾರರು, ಮೆಕ್ಕೆಜೋಳ, ಭತ್ತ, ತೊಗರಿ ಬೆಳೆಗಾರರಿಗೆ ಅನ್ಯಾಯವಾಗಿದೆ. ಹೀಗಾಗಿ 20 ಸಾವಿರಕ್ಕೂ ಹೆಚ್ಚು ರೈತರನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನೆ ಬಳಿಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು. ಸಿಎಂ ಕಣ್ಣಿದ್ದು ಕಾಣದಂತೆ, ಕಿವಿ ಇದ್ದು ಕಿವುಡರಂತೆ ವರ್ತಿಸುತ್ತಿದ್ದಾರೆ. ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಾರೆ. ಸಿಎಂ ಪರಿಹಾರ ಕೊಡುತ್ತಾರಾ ಎಂದು ರೈತರು ಕಾಯುತ್ತಿದ್ದಾರೆ. ಖಜಾನೆಗೆ ಬರುತ್ತಿರುವ ದುಡ್ಡು ಎಲ್ಲಿ ಹೋಗುತ್ತಿದೆ? ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ