ಬಿ.ವಿ.ನಾಯಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆಯ್ತು ಅಂತ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಈಗ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಪರದಾಟ ನಡೆಸುವಂತೆ ಆಗಿದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು(ಏ.10): ರಾಯಚೂರು ಲೋಕಸಭಾ ಚುನಾವಣೆಗಾಗಿ ಭರ್ಜರಿ ತಯಾರಿ ನಡೆದಿದೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಮತ್ತೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ರೆ. ಇತ್ತ ಕಾಂಗ್ರೆಸ್ ನಿಂದ ನಿವೃತ್ತ ಐಎಎಸ್ ಅಧಿಕಾರಿ ಜಿ. ಕುಮಾರ್ ನಾಯಕ ಕಣದಲ್ಲಿ ಇದ್ದಾರೆ. ಇದರ ನಡುವೆ ಕಳೆದ ಬಾರಿ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಬಿ.ವಿ.ನಾಯಕಗೆ ಬಿಜೆಪಿ ಟಿಕೆಟ್ ಕೈ ತಪ್ಪಿದಕ್ಕೆ ಕಕ್ಕಾಬಿಕ್ಕಿಯಾಗಿ ಟಿಕೆಟ್ ಗಾಗಿ ನಾನಾ ಕಸರತ್ತು ನಡೆಸಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್ ಮಾತುಕತೆಗೂ ಮುಂದಾಗುತ್ತಿಲ್ಲ. ಹೀಗಾಗಿ ಬಿ.ವಿ.ನಾಯಕ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.
undefined
ಯಾರು ಈ ಬಿ.ವಿ.ನಾಯಕ?:
ಬಿ.ವಿ.ನಾಯಕ ಅಂದ್ರೆ ಅವರ ಪೂರ್ತಿ ಹೆಸರು ಭಗವಂತರಾಯ ವೆಂಕಟಪ್ಪ ನಾಯಕ, ಮೂಲತಃ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದವರು. ಬಿ.ವಿ.ನಾಯಕ ಅವರ ತಂದೆ ರಾಯಚೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರು ಆಗಿದ್ರು. ತಂದೆ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡ ಬಿ.ವಿ.ನಾಯಕ. ಎಲ್ಎಲ್ ಬಿ ಪದವೀಧರರು. ಹೀಗಾಗಿ 2014ರಲ್ಲಿ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಿ, ಮೋದಿ ಅಲೆಯಲ್ಲಿಯೂ ಸಹ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ರು. ಮತ್ತೆ 2019ರಲ್ಲಿ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಿ ರಾಜಾ ಅಮರೇಶ್ವರ ನಾಯಕ ವಿರುದ್ಧ ಸೋಲು ಅನುಭವಿಸಿದ್ರು. ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆಯಲ್ಲಿ ಸೋತರು, ಕಾಂಗ್ರೆಸ್ ರಾಯಚೂರು ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ರು. ಆದ್ರೆ ಪಕ್ಷದಲ್ಲಿ ಬಣ ರಾಜಕೀಯದಿಂದ ಬಿ.ವಿ.ನಾಯಕ ನೊಂದು ಹೋಗಿದ್ರು. ಬಣ ರಾಜಕೀಯದ ನಡುವೆ 2023ರಲ್ಲಿ ಬಿ.ವಿ.ನಾಯಕ ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಮುಂದಾಗಿದ್ರು. ಅದರ ಭಾಗವಾಗಿ ರಾಯಚೂರು ಗ್ರಾಮೀಣ ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದ್ರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬಸನಗೌಡ ದದ್ದಲ್ ಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿತ್ತು. ಮಾನ್ವಿ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಬಿ.ವಿ.ನಾಯಕ ಪಟ್ಟು ಹಿಡಿದಿದ್ರು. ಆದ್ರೆ ಬಣ ರಾಜಕೀಯ ಕೆಲ ನಾಯಕರು ಬಿ.ವಿ.ನಾಯಕಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿಸಿ ಆ ಟಿಕೆಟ್ ಹಂಪಯ್ಯ ಸಾಹುಕಾರ್ ಗೆ ನೀಡಿದ್ರು. ಇದರಿಂದಾಗಿ ಬಿ.ವಿ.ನಾಯಕ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಆದ್ರು. ಬಿಜೆಪಿ ಸೇರ್ಪಡೆ ಆಗಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೆಲ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕ ವಿರುದ್ಧ ಸೋಲು ಅನುಭವಿಸಿದ್ರು.
ನಮ್ಮದು ನಿನ್ನೆ ಮೊನ್ನೆ ಬಂದ ಮನೆತನ ಅಲ್ಲ; ಸುಳ್ಳು ಜಾತಿ ಪ್ರಮಾಣಪತ್ರ ಆರೋಪಕ್ಕೆ ರಾಜಾ ಅಮರೇಶ್ವರ ನಾಯಕ ತಿರುಗೇಟು!
ವಿಧಾನಸಭಾ ಚುನಾವಣೆ ಸೋತ ಬಳಿಕ ಬಿ.ವಿ.ನಾಯಕ, ಯಾರ ಸಂಪರ್ಕಕ್ಕೂ ಬರದೇ ತಾವು ಆಯ್ತು ತಮ್ಮ ಕೆಲಸವಾಯ್ತು ಅಂತ ಉಳಿದುಕೊಂಡಿದ್ರು. ಇದರ ನಡುವೆ ಡಿ.ಕೆ.ಸುರೇಶ್ ಜೊತೆಗೆ ಬಿ.ವಿ.ನಾಯಕ ಮತ್ತು ಇತ್ತೀಚಿಗೆ ಅನಾರೋಗ್ಯದಿಂದ ಸಾವನ್ನಪ್ಪಿದ ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ ಜೊತೆಗೆ ಇರುವ ಫೋಟೋ ವೈರಲ್ ಆಗಿತ್ತು. ಆ ವೇಳೆ ಬಿ.ವಿ.ನಾಯಕ ಮತ್ತೆ ಕಾಂಗ್ರೆಸ್ ಗೆ ಬರುತ್ತಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಆದ್ರೆ ಆಗ ಬಿ.ವಿ.ನಾಯಕ ಚುನಾವಣೆಗಳು ಬಲು ದುಬಾರಿ ಈಗಾಗಲೇ ವಿಧಾನಸಭಾ ಚುನಾವಣೆ ಮುಗಿದಿದೆ. ನಾನು ಸದ್ಯ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲವೆಂದು ತಿಳಿಸಿದರು.
ಬಿ.ವಿ.ನಾಯಕ ಲೋಕಸಭಾ ಚುನಾವಣೆ ತಯಾರಿ ನಡೆಸಿದ್ದು ಹೇಗೆ?
ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿ.ವಿ.ನಾಯಕ ಲೋಕಸಭಾ ಚುನಾವಣೆ ಬಗ್ಗೆ ಯೋಚನೆ ಮಾಡಿರಲಿಲ್ಲ. ಏಕೆಂದರೆ ಬಿಜೆಪಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅಧಿಕಾರದಲ್ಲಿ ಇದ್ರು. ಹೀಗಾಗಿ ಲೋಕಸಭಾ ಚುನಾವಣೆ ಹತ್ತಿರ ಬಂದ್ರೂ ಬಿ.ವಿ.ನಾಯಕ ತಾವು ಆಯ್ತು ತಮ್ಮ ಕೆಲಸವಾಯ್ತು ಅಂತ ಇದ್ರು. ಆಗ ಬಿಜೆಪಿಯ ರಾಜ್ಯ ಮಟ್ಟದ ಕೆಲ ಹೈಕಮಾಂಡ್ ನಾಯಕರು ಬಿ.ವಿ.ನಾಯಕಗೆ ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ರು. ಸರ್ವೇಯಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿ ಇದೆ. ಹಾಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ ಹೆಸರು ಹಿನ್ನಡೆಯಿದೆ. ತಾವು ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಿ ಈ ಸಲ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ರಾಜಾ ಅಮರೇಶ್ವರ ನಾಯಕ ಬದಲು ನಿಮಗೆ ನೀಡುತ್ತೇವೆ ಎಂದು ಭರವಸೆ ನೀಡಿದರಂತೆ, ಹೀಗಾಗಿ ರಾಜ್ಯ ಮಟ್ಟದ ಹೈಕಮಾಂಡ್ ನಾಯಕರ ಮಾತು ಕೇಳಿದ ಬಿ.ವಿ.ನಾಯಕ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದರು. ಇತ್ತ ಬಿಜೆಪಿ ದೆಹಲಿ ಹೈಕಮಾಂಡ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಬಿ.ವಿ.ನಾಯಕ ರಾಜ್ಯ ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡು ಕಾರ್ಯಕರ್ತರ ಪ್ರತ್ಯೇಕ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು ಲೋಕಸಭಾ ಕ್ಷೇತ್ರದಿಂದ ಮೂರು ಜನ ಟಿಕೆಟ್ ಆಕಾಂಕ್ಷಿಗಳು ಇದ್ರು. ಆ ಮೂರು ಜನರಲ್ಲಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ , ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಬಿ.ವಿ.ನಾಯಕ. ಈಗ ಹಾಲಿ ಸಂಸದರಿಗೆ ಟಿಕೆಟ್ ಸಿಕ್ಕಿದರಿಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿ ಹೈಕಮಾಂಡ್ ಸೂಚನೆ ಅಂತೆ ರಾಜಾ ಅಮರೇಶ್ವರ ನಾಯಕ ಪರ ಪ್ರಚಾರ ನಡೆಸಿದ್ದಾರೆ. ಇತ್ತ ಬಿ.ವಿ.ನಾಯಕ ಮಾತ್ರ ಬಂಡಾಯಗೊಂಡು ಬಿಜೆಪಿ ಟಿಕೆಟ್ ನನಗೆ ನೀಡಬೇಕೆಂದು ನಾನಾ ಕಸರತ್ತು ನಡೆಸಿದ್ದಾರೆ. ಆದ್ರೆ ಯಾವ ಕಸರತ್ತು ಸದ್ಯ ವರ್ಕೌಟ್ ಆಗುವ ಸಾಧ್ಯತೆ ಕಂಡು ಬರುತ್ತಿಲ್ಲ.
ಅತಂತ್ರ ಸ್ಥಿತಿಗೆ ಬಂದು ನಿಂತ ಬಿ.ವಿ.ನಾಯಕ
ಕಾಂಗ್ರೆಸ್ ಪಕ್ಷದಲ್ಲಿ ರಾಜನಂತೆ ಇದ್ದ ಬಿ.ವಿ.ನಾಯಕ. ಸ್ವಾಭಿಮಾನಕ್ಕೆ ಧಕ್ಕೆ ಆಯ್ತು ಅಂತ ಬಿಜೆಪಿಗೆ ಬಂದು ವಿಧಾನಸಭಾ ಚುನಾವಣೆ ಸ್ಪರ್ಧೆ ಮಾಡಿ ಸೋತು. ಈಗ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದಕ್ಕೆ ಬಿ.ವಿ.ನಾಯಕಗೆ ಭಾರೀ ನಿರಾಸೆ ಆಗಿದೆ. ಆದ್ರೂ ಬಿಜೆಪಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್ ಮಾತ್ರ ಬಿ.ವಿ.ನಾಯಕ ಮನವಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಬಂಡಾಯ ಅಭ್ಯರ್ಥಿ ಆಗಿ ರಾಯಚೂರು ಲೋಕಸಭಾ ಚುನಾವಣೆ ಸ್ಪರ್ಧೆ ಮಾಡುವ ಚಿಂತನೆಯಲ್ಲಿ ಬಿ.ವಿ.ನಾಯಕ ಇದ್ದಾರೆ.
ಲೋಕಸಭಾ ಚುನಾವಣೆ 2024: ಪಕ್ಷಗಳಿಗೆ ಅಸಮಾಧಾನದ ಭಾರ..!
ಬಿ.ವಿ.ನಾಯಕ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ರೆ ಏನು ಆಗಬಹುದು?
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಫುಲ್ ಫೈಟ್ ಇದೆ. ಬಿಜೆಪಿ - ಜೆಡಿಎಸ್ ಮೈತ್ರಿ ಆಗಿದ್ದರಿಂದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲುವು ಪಕ್ಕ ನನ್ನದೇ ಎಂದು ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ನಿವೃತ್ತ ಐಎಎಸ್ ಅಧಿಕಾರಿ ಜಿ. ಕುಮಾರ್ ನಾಯಕ, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ನಂಬಿಕೊಂಡು, ಇಡೀ ಕ್ಷೇತ್ರದ ವ್ಯಾಪ್ತಿಯಲ್ಲಿ ಸುತ್ತಾಟ ನಡೆಸಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇದರ ನಡುವೆ ಬಿ.ವಿ.ನಾಯಕ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ರೆ ಎರಡು ಪಕ್ಷದ ಅಭ್ಯರ್ಥಿಗಳಿಗೆ ಬಿ.ವಿ.ನಾಯಕ ಟಕ್ಕರ್ ಕೊಡಲಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ರಾಯಚೂರು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರ ಬಂದ್ರೆ, 3 ವಿಧಾನಸಭಾ ಕ್ಷೇತ್ರಗಳು ಯಾದಗಿರಿ ಜಿಲ್ಲೆಯಲ್ಲಿ ಬರುತ್ತವೆ. ರಾಯಚೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ರಾಯಚೂರು ಗ್ರಾಮೀಣ ಮತ್ತು ಮಾನ್ವಿಯಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಲಿಂಗಸೂಗೂರು ಮತ್ತು ರಾಯಚೂರು ನಗರದಲ್ಲಿ ಬಿಜೆಪಿ ಶಾಸಕರು ಇದ್ರೆ, ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಇನ್ನೂ ಯಾದಗಿರಿಯ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಸಾವಿನಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಈ 8 ವಿಧಾನಸಭಾ ಕ್ಷೇತ್ರದಲ್ಲಿ ಬಿ.ವಿ.ನಾಯಕಗೆ ಸಂಪರ್ಕವಿದೆ. ಮೇಲಾಗಿ ಒಂದು ಬಾರಿ ಸಂಸದರಾಗಿದ್ದ ವೇಳೆ ಬಿ.ನಾಯಕ ಇಡೀ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ನಾನಾ ಕೆಲಸ ಕಾರ್ಯಗಳು ಮಾಡಿದ್ರು. ಹೀಗಾಗಿ ಬಿ.ವಿ.ನಾಯಕ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕೆ ಇಳಿದ್ರೆ ಎರಡು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಿ.ವಿ.ನಾಯಕಗೆ ಬೆಂಬಲಿಸುವ ಸಾಧ್ಯತೆ ಇದೆ.
ಒಟ್ಟಾರೆ ಬಿ.ವಿ.ನಾಯಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆಯ್ತು ಅಂತ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಈಗ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಪರದಾಟ ನಡೆಸುವಂತೆ ಆಗಿದೆ.