
ಬೆಂಗಳೂರು (ಸೆ.19): ರಾಜ್ಯದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳಿಗೆ ಓಸಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ನೀಡಲು ಒಂದು ಬಾರಿಗೆ ಅನ್ವಯಿಸುವಂತೆ ನಿಯಮಗಳನ್ನು ಸಡಲಿಸುವ ಕುರಿತು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಯಾವುದೇ ನಿರ್ಧಾರ ಮಾಡದೆ ವಿಷಯವನ್ನು ಮುಂದಿನ ಸಂಪುಟಕ್ಕೆ ಮುಂದೂಡಲಾಗಿದೆ.
ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಆದೇಶದ ನೆಪ ನೀಡಿ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ನೀಡದಂತೆ ಆದೇಶ ಹೊರಡಿಸಲಾಗಿದೆ.ಇದರಂತೆ ಎಲ್ಲಾ ಎಸ್ಕಾಂಗಳು ಮಾರ್ಚ್‌ನಿಂದ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಇದರಿಂದ 4 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ನಿರ್ಮಾಣ ಪೂರ್ಣವಾಗಿದ್ದರೂ ವಿದ್ಯುತ್ ಸಂಪರ್ಕವಿಲ್ಲದೆ ಮಾಲೀಕರು ಪರದಾಡುವಂತಾಗಿದೆ.
ಇಂತಹ ಪ್ರಕರಣಗಳಲ್ಲಿ ಓಸಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿರುವವರಿಗೆ ನಿಯಮಗಳನ್ನು ಸಡಿಲಿಸಿ ಒಂದು ಬಾರಿಯ ಕ್ರಮವಾಗಿ ಓಸಿಯಿಂದ ವಿನಾಯಿತಿ ನೀಡಲು ಚರ್ಚೆ ನಡೆಯಿತು. ಗುರುತಿನ ಚೀಟಿ ಮತ್ತು ಮಾಲೀಕತ್ವದ ಪುರಾವೆಗಳನ್ನು ಪರಿಗಣಿಸಿ ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣವನ್ನು ಪರಿಗಣಸದೆ ವಿದ್ಯುತ್ ಸಂಪರ್ಕ ನೀಡುವ ಕುರಿತು ಚರ್ಚಿಸಲಾಯಿತು.
ಆದರೆ, ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತರಬೇಕು. ಹೀಗಾಗಿ ಬೆಳಗಾವಿ ಅಧಿವೇಶನದಲ್ಲೇ ತಿದ್ದುಪಡಿ ವಿಧೇಯಕ ಮಾಡಬೇಕೇ ಅಥವಾ ಸುಗ್ರೀವಾಜ್ಞೆ ಜಾರಿಗೆ ತರಬೇಕೇ ಎಂಬ ಗೊಂದಲದ ಹಿನ್ನೆಲೆಯಲ್ಲಿ ವಿಷಯ ಮುಂದೂಡಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.