ಬಿಎಸ್‌ವೈ ಆಪ್ತರೆನಿಸಿಕೊಂಡಿರುವ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಬಿಜೆಪಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಕುಂದಗೋಳ ಟಿಕೆಟ್ ಕೈ ತಪ್ಪಿರುವುದರಿಂದ ಮುನಿಸಿಕೊಂಡಿರುವ ಚಿಕ್ಕನಗೌಡರ, ಗುಡ್ ಬೈ ಹೇಳಲಿದ್ದಾರೆ.
ಕುಂದಗೋಳ (ಏ.13) : ಬಿಎಸ್‌ವೈ ಆಪ್ತರೆನಿಸಿಕೊಂಡಿರುವ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಬಿಜೆಪಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಕುಂದಗೋಳ ಟಿಕೆಟ್ ಕೈ ತಪ್ಪಿರುವುದರಿಂದ ಮುನಿಸಿಕೊಂಡಿರುವ ಚಿಕ್ಕನಗೌಡರ, ಗುಡ್ ಬೈ ಹೇಳಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿಗೆ ಬರೆದಿರುವ ರಾಜಿನಾಮೆ ಪತ್ರವನ್ನು ಬೆಂಬಲಿಗರ ಸಭೆಯಲ್ಲಿ ಪ್ರದರ್ಶಿಸಿ ಪಕ್ಷ ಬಿಡುವುದನ್ನು ಖಚಿತ ಪಡಿಸಿದ್ದಾರೆ. ಇದು ಬಿಜೆಪಿಗೆ ಮತ್ತೊಂದು ಶಾಕ್ ನೀಡಿದಂತಾಗಿದೆ.
ಕುಂದಗೋಳ ಕ್ಷೇತ್ರ(Kundagola assembly constituency)ದಲ್ಲಿ ಎಂ.ಆರ್. ಪಾಟೀಲ(MR Patil) ಹಾಗೂ ಚಿಕ್ಕನಗೌಡರ(Chikkanagowdar) ಮಧ್ಯೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇತ್ತು. ಆದರೆ ಪಕ್ಷ ಎಂ.ಆರ್. ಪಾಟೀಲಗೆ ಮಣೆ ಹಾಕಿದೆ. ಇದರಿಂದಾಗಿ ಚಿಕ್ಕನಗೌಡರ ರೊಚ್ಚಿಗೆದ್ದಿದ್ದಾರೆ. ಬುಧವಾರ ಬೆಳಗ್ಗೆ ಅದರಗುಂಚಿಯಲ್ಲಿರುವ ತಮ್ಮ ನಿವಾಸದಲ್ಲೇ ಸಾವಿರಾರು ಜನ ಬೆಂಬಲಿಗರ ಸಭೆ ಕರೆದಿದ್ದ ಚಿಕ್ಕನಗೌಡರ, ಅಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಬಿಜೆಪಿಯ ಮತ್ತೊಂದು ವಿಕೆಟ್ ಪತನ: ಕಮಲಕ್ಕೆ ಗುಡ್‌ಬೈ ಹೇಳಿದ ಎಂ.ಪಿ. ಕುಮಾರಸ್ವಾಮಿ
ಸಭೆಯಲ್ಲಿ ಟಿಕೆಟ್ ನಿರಾಕರಿಸಿರುವ ಬಿಜೆಪಿಗೆ ರಾಜಿನಾಮೆ ಕೊಡುವಂತೆ ಬೆಂಬಲಿಗರೆಲ್ಲರೂ ಸಲಹೆ ನೀಡಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಬಳಿಕ ಕಾಂಗ್ರೆಸ್ ಸೇರ್ಪಡೆಯಾಗುವುದು, ಅಲ್ಲಿ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು, ಒಂದು ವೇಳೆ ಅಲ್ಲಿ ಟಿಕೆಟ್ ಕೊಡಲು ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಚಿಕ್ಕನಗೌಡರ, ಪಕ್ಷದ ಟಿಕೆಟ್ ಸಿಗದಿರುವುದಕ್ಕೆ ಬೇಸರವಾಗಿದೆ. ನಿನ್ನೆ ವರೆಗೂ ನನಗೆ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ನನಗೆ ಟಿಕೆಟ್ ತಪ್ಪಿದೆ. ಇದು ನೋವನ್ನುಂಟು ಮಾಡಿದೆ ಎಂದರು.
ಪಕ್ಷ ನಡೆಸಿದ ಸಮೀಕ್ಷೆ ಎಲ್ಲಿ ಹೋಗಿದೆ. ನಾನು ಯಾವ ನಾಯಕರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಪಕ್ಷದ ಬಗ್ಗೆಯೂ ಟೀಕೆ ಮಾಡುವುದಿಲ್ಲ ಎಂದರು. ಬಿಜೆಪಿ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ನಾಲ್ಕನೆಯ ಸ್ಥಾನಕ್ಕೆ ಕಳುಹಿಸಬೇಕು. ಈ ಕುರಿತು ನೀವೆಲ್ಲ ಶಪಥ ಮಾಡಬೇಕು ಎಂದು ಬೆಂಬಲಿಗರಿಗೆ ಕರೆ ನೀಡಿದರು.
ಬಿಜೆಪಿ ಯಾವ ರೀತಿ ಬೆಳೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ದೇಶದಲ್ಲಿ ವಾಜಪೇಯಿ, ಅಡ್ವಾನಿ ಪಕ್ಷ ಬೆಳೆಸಿದ್ದರೆ, ಕರ್ನಾಟಕದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಮತ್ತಿತರರು ಪಕ್ಷವನ್ನುಕಟ್ಟಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಜಗದೀಶ ಶೆಟ್ಟರ್, ಚಂದ್ರಕಾಂತ ಬೆಲ್ಲದ ಪಕ್ಷವನ್ನು ಬೆಳೆಸಿದ್ದಾರೆ. ಕುಂದಗೋಳದಲ್ಲಿ ಪಕ್ಷ ಕಟ್ಟಿಬೆಳೆಸಿದ್ದು ನಾನು ಎಂದರು.
ಕಾಂಗ್ರೆಸ್‌ಗೆ ಪ್ರಯತ್ನ:
ಕಾಂಗ್ರೆಸ್ ಸೇರುವ ಕುರಿತು ಪ್ರಯತ್ನ ನಡೆಸಿರುವ ಚಿಕ್ಕನಗೌಡರ, ಒಂದು ವೇಳೆ ಅಲ್ಲಿಂದಲೂ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ. ಆದರೆ ಕಣಕ್ಕಿಳಿಯುವುದು ಗ್ಯಾರಂಟಿ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕುಂದಗೋಳ ಕ್ಷೇತ್ರದಲ್ಲಿ ಬಂಡಾಯದ ಕೂಗು ಕೇಳಿ ಬಂದಂತಾಗಿದ್ದು, ಬಿಜೆಪಿ ಇಲ್ಲಿನ ಭಿನ್ನಮತ ಶಮನ ಮಾಡುವುದು ದೊಡ್ಡ ಸವಾಲಿನ ಕೆಲಸವಾದಂತಾಗಿದೆ.
ಬಿಎಸ್‌ವೈ ಪರಮಾಪ್ತ:
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yadiyurappa) ಅವರ ಸಂಬಂಧಿಯೂ ಆಗಿರುವ ಚಿಕ್ಕನಗೌಡರ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹಿಂದೆ ಯಡಿಯೂರಪ್ಪ ಕೆಜೆಪಿ ಹುಟ್ಟುಹಾಕಿದಾಗ ಬಿಜೆಪಿ ಬಿಟ್ಟು ಕೆಜೆಪಿಗೆ ತೆರಳಿದ್ದರು. ಬಳಿಕ ಯಡಿಯೂರಪ್ಪ ಜತೆಗೆ ಮರಳಿ ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಬಿಜೆಪಿಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಈಗ ರಾಜಿನಾಮೆ ನೀಡುವ ಕುರಿತು ತಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇವರ ನಾಯಕರೆಂದರೆ ಯಾರು? ಎಂಬ ಪ್ರಶ್ನೆಗೆ ಉತ್ತರ ಕೊಡುತ್ತಿಲ್ಲ.
ನಿವೃತ್ತಿಯಾದರೂ ಗೌರವಯುತವಾಗಿ ಆಗಬೇಕು: ಜಗದೀಶ ಶೆಟ್ಟರ್
ಬಿಜೆಪಿ ಟಿಕೆಟ್ ಕೈತಪ್ಪಿರುವುದು ಬೇಸರವನ್ನುಂಟು ಮಾಡಿದೆ. ಬೆಂಬಲಿಗರು ಪಕ್ಷಕ್ಕೆ ರಾಜಿನಾಮೆ ಕೊಟ್ಟು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಬೆಂಬಲಿಗರ ಒತ್ತಡಕ್ಕೆ ಮಣಿದು ಚುನಾವಣೆಗೆ ನಿಲ್ಲುತ್ತೇನೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕರೆ ಆ ಪಕ್ಷದಿಂದ ಸ್ಪರ್ಧಿಸುವೆ. ಇಲ್ಲವೆ ಪಕ್ಷೇತರರಾಗಿ ಸ್ಪರ್ಧಿಸುತ್ತೇನೆ. ಚುನಾವಣೆಗೆ ನಿಲ್ಲುವುದು ಗ್ಯಾರಂಟಿ.
ಎಸ್.ಐ.ಚಿಕ್ಕನಗೌಡರ, ಮಾಜಿ ಶಾಸಕ